ಬೆಂಗಳೂರು:ಅಂತ್ಯಕ್ರಿಯೆ ನಡೆಸಲು ಕಡಿಮೆ ಹಣ ತೆಗೆದುಕೊಳ್ಳಿ ಎಂದಿರುವುದಕ್ಕೆ ಕೋಪಗೊಂಡ ದುಷ್ಕರ್ಮಿಗಳು ವ್ಯಕ್ತಿಯ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ವಿಲ್ಸನ್ ಗಾರ್ಡನ್ ನಿವಾಸಿ ಮೌಲಾಪಾಷಾ ಹಲ್ಲೆಗೆ ಒಳಗಾಗಿದ್ದು, ಈತ ನೀಡಿದ ದೂರಿನ ಮೇರೆಗೆ 11 ಮಂದಿ ವಿರುದ್ಧ ವಿಲ್ಸನ್ ಗಾರ್ಡನ್ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡು ಮೂವರನ್ನು ಬಂಧಿಸಿದ್ದಾರೆ.
ಶಾಹೀದ್, ಶಾಕೀಬ್ ಹಾಗೂ ಸಾದಿಕ್ ಪಾಷಾ ಬಂಧಿತ ಆರೋಪಿಗಳು. ಮೇ 3ರಂದು ವಿಲ್ಸನ್ ಗಾರ್ಡನ್ ಸಮೀಪ ಬಡಾಮಕಾನ್ ಮೈದಾನದ ಸ್ಮಶಾನದಲ್ಲಿ ಗುಂಡಿ ತೋಡಲು ಸುಮಾರು 10 ರಿಂದ 15 ಸಾವಿರ ರೂಪಾಯಿಗೆ ಡಿಮ್ಯಾಂಡ್ ಮಾಡಿದ್ದರು. ಈ ಸಂಬಂಧ ಸೋಷಿಯಲ್ ವರ್ಕರ್ ಎಂದು ಗುರುತಿಸಿಕೊಂಡಿದ್ದ ಮೌಲಾಪಾಷಾ ನೇರವಾಗಿ ಸ್ಮಶಾನದ ಬಳಿ ಹೋಗಿದ್ದಾನೆ. ಗುಂಡಿ ತೆಗೆಯುತ್ತಿದ್ದ ಯುವಕರಿಗೆ ಅಂತ್ಯಕ್ರಿಯೆ ನಡೆಸಲು ಕಡಿಮೆ ಹಣ ತೆಗೆದುಕೊಳ್ಳಿ. ಕೊರೊನಾದಿಂದಾಗಿ ಜನರ ಬಳಿ ಹಣವಿಲ್ಲ ಎಂದು ಹೇಳಿ ಸ್ಮಶಾನ ಮುಂದೆ 1500 ಮಾತ್ರ ನಿಗದಿಪಡಿಸಿ ಎಂದು ಮನವಿ ಮಾಡಿದ್ದಾರೆ.
ಇದನ್ನು ತಿರಸ್ಕರಿಸಿದ ಶಾಹೀದ್ ಗ್ಯಾಂಗ್ ಸುತ್ತಿಗೆಯಿಂದ ಮಾರಣಾಂತಿಕ ಹಲ್ಲೆ ನಡೆಸಿದೆ. ಮೌಲಾ ಪಾಷಾ ಹಲ್ಲುಗಳನ್ನು ಉದುರಿಸಿ ವಿಕೃತಿ ಮೆರೆದಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿದ್ದು, ಪೊಲೀಸರು ಮೂವರನ್ನು ಬಂಧಿಸಿ ಜೈಲಿಗಟ್ಟಿದ್ದು ಇನ್ನುಳಿದ ಆರೋಪಿಗಳ ಶೋಧ ನಡೆಸುತ್ತಿದ್ದಾರೆ.