ಬೆಂಗಳೂರು: ಪಬ್ ಒಳಗೆ ನುಗ್ಗಿ ನೈತಿಕ ಪೊಲೀಸ್‌ಗಿರಿಗೆ ಯತ್ನಿಸಿದ ಸಂಘಟನೆಯೊಂದರ ಸದಸ್ಯರು ಮತ್ತು ಪಬ್ ಸಿಬ್ಬಂದಿಯ ನಡುವೆ ಮಾರಾಮಾರಿ ನಡೆದಿರುವ ಘಟನೆ ತಡರಾತ್ರಿ ಅಶೋಕನಗರ ಠಾಣಾ ವ್ಯಾಪ್ತಿಯ ಬ್ರಿಗೇಡ್ ರಸ್ತೆಯಲ್ಲಿ ನಡೆದಿದೆ. ಕರ್ನಾಟಕ ಕಾರ್ಮಿಕರ ಪರಿಷತ್ ಎಂಬ ಸಂಘಟನೆಯ ಸುಮಾರು ಹದಿನೈದು ಸದಸ್ಯರು ಡೋಲು ಬಡಿದುಕೊಂಡು ಬ್ರಿಗೇಡ್ ರಸ್ತೆಯ ಪಬ್ವೊಂದರ ಒಳ ಪ್ರವೇಶಿಸಲು ಯತ್ನಿಸಿದ್ದಾರೆ. ಈ ಸಂದರ್ಭದಲ್ಲಿ ಸದಸ್ಯರನ್ನು ಬೌನ್ಸರ್ಗಳು ತಡೆದಿದ್ದಾರೆ. ನಂತರ ಬೌನ್ಸರ್ಸ್ ಹಾಗೂ ಸಂಘಟನೆಯ ನಡುವೆ ವಾಗ್ವಾದ ಆರಂಭವಾಗಿದೆ. ಎರಡೂ ಗುಂಪಿನವರು ರಸ್ತೆಯಲ್ಲೇ ಕೈ ಕೈ ಮಿಲಾಯಿಸಿಕೊಂಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ದೌಡಾಯಿಸಿದ ಆಶೋಕ ನಗರ ಪೊಲೀಸರು, ಸಂಘಟನೆಯ ಸದಸ್ಯರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಕುರಿತು ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ. ಈ ಪ್ರಕರಣ ಹೊರತುಪಡಿಸಿ, ರಾಜ್ಯದ ವಿವಿಧೆಡೆ ಇತ್ತೀಚೆಗೆ ನಡೆದ ಘಟನಾವಳಿಗಳನ್ನು ಮೆಲುಕು ಹಾಕುವುದಾದರೆ,
ಇದನ್ನೂ ಓದಿ:ಪಬ್‌ನಲ್ಲಿ ವಿದ್ಯಾರ್ಥಿಗಳ ಪಾರ್ಟಿಗೆ ಬಜರಂಗದಳ ತಡೆ; ಮಂಗಳೂರು ಪೊಲೀಸ್ ಆಯುಕ್ತರು ಹೇಳಿದ್ದೇನು?
ಅರ್ಚಕನ ಮೇಲೆ ಹಲ್ಲೆ: ಇನ್ನು ಕಳೆದ ತಿಂಗಳ ಫೆಬ್ರವರಿ 21 ರಂದು ಹುಬ್ಬಳ್ಳಿ ತಾಲೂಕಿನ ಕಂಪ್ಲಿಕೊಪ್ಪ ಗ್ರಾಮದಲ್ಲಿ ಮಠದ ಪೂಜೆ ವಿಚಾರಕ್ಕೆ ಸಂಬಂಧಿಸಿದಂತೆ ಕೆಲ ಗ್ರಾಮಸ್ಥರು ಹಾಗೂ ಅರ್ಚಕರ ನಡುವೆ ಮಾರಾಮಾರಿ ನಡೆದಿತ್ತು. ಕಳೆದ ಐವತ್ತಕ್ಕೂ ಹೆಚ್ಚು ವರ್ಷಗಳಿಂದ ಬಸವಣ್ಣ ದೇವಸ್ಥಾನದಲ್ಲಿ ಪ್ರಕಾಶ್ ಮುಳುಗಂದ ಮಠ ಅವರು ಅರ್ಚಕರಾಗಿ ಕಾರ್ಯನಿರ್ವಹಿಸುತ್ತಿದ್ದು, ಇವರ ಕಾರ್ಯವೈಖರಿಗೆ ಬೇಸತ್ತ ಗ್ರಾಮಸ್ಥರು ಪೂಜೆ ಮಾಡದಂತೆ ಅರ್ಚಕರಿಗೆ ಹೇಳಿದ್ದಾರೆ. ಹೀಗಾಗಿ, ಗಲಾಟೆ ನಡೆದಿತ್ತು. ಈ ವೇಳೆ ಅರ್ಚಕನ ಮೇಲೆ ಕೆಲವರು ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಸಹ ಕೇಳಿ ಬಂದಿತ್ತು.