ಬೆಂಗಳೂರು: ಹಣ ಕೊಡದಿದ್ದರೆ 2ನೇ ಪತ್ನಿಯನ್ನು ಕೊಲೆ ಮಾಡುವುದಾಗಿ ಪೀಡಿಸುತ್ತಿದ್ದ ಪುತ್ರನ ತಲೆಗೆ ತಂದೆಯೇ ರಾಡ್‌ನಿಂದ ಹೊಡೆದು, ಕತ್ತು ಬಿಗಿದು ಕೊಲೆ ಮಾಡಿರುವ ಘಟನೆ ನಡೆದಿದೆ. ಆರ್ ಟಿ ನಗರದ ಚಾಮುಂಡಿನಗರದ ನಿವಾಸಿ ಮೊಹಮದ್ ಸುಲೇಮಾನ್ ಕೊಲೆಯಾದವ. ಆತನ ತಂದೆ ಮೊಹಮ್ಮದ್ ಸಂಶೀರ್ ತಲೆಮರೆಸಿಕೊಂಡಿರುವ ಆರೋಪಿ.
ಬಾರ್ ಬೆಂಡಿಂಗ್ ಕೆಲಸ ಮಾಡುತ್ತಿರುವ ಆರೋಪಿ ಸಂಶೀರ್‌ನ ಮೊದಲ ಪತ್ನಿಯ ಮಗ ಸುಲೇಮಾನ್ ಹೆಬ್ಬಾಳದ ಭುವನೇಶ್ವರಿನಗರದ ಗ್ಯಾರೇಜ್‌ನಲ್ಲಿ ಮೆಕ್ಯಾನಿಕ್ ಕೆಲಸ ನಿರ್ವಹಿಸುತ್ತಿದ್ದ. 7 ವರ್ಷದ ಹಿಂದೆ ಸಂಶೀರ್ ಮೊದಲ ಪತ್ನಿಯನ್ನು ಬಿಟ್ಟು 2ನೇ ಪತ್ನಿಯ ಜತೆಗೆ ವಾಸಿಸುತ್ತಿದ್ದ. ಸುಲೇಮಾನ್ ಸಬೂಬು ಹೇಳಿ ಆಗಾಗ ತಂದೆಯಿಂದ ಹಣ ಪಡೆಯುತ್ತಿದ್ದ. ಇತ್ತೀಚೆಗೆ ತಂದೆ ಸಂಶೀರ್ ಮಗನಿಗೆ ಹಣ ಕೊಡಲು ನಿರಾಕರಿಸಿದ್ದ. ಇದರಿಂದ ಆಕ್ರೋಶಗೊಂಡ ಸುಲೇಮಾನ್, ಹಣ ಕೊಡದಿದ್ದರೆ 2ನೇ ಪತ್ನಿಯನ್ನು ಕೊಲೆ ಮಾಡುತ್ತೇನೆ ಎಂದು ತಂದೆಗೆ ಬೆದರಿಸಿದ್ದ.
ಇದರಿಂದ ಆತಂಕಗೊಂಡ ಸಂಶೀರ್ 2ನೇ ಪತ್ನಿಯನ್ನು ಟ್ಯಾನರಿ ರಸ್ತೆಯಲ್ಲಿರುವ ತವರು ಮನೆಗೆ ಕಳುಹಿಸಿದ್ದ. ಭಾನುವಾರ ರಾತ್ರಿ ಸಂಶೀರ್‌ನ ಮನೆಗೆ ಬಂದ ಸುಲೇಮಾನ್ ಹಣ ಕೊಡುವಂತೆ ಮತ್ತೆ ಬೆದರಿಸಿದ್ದ. ಹಣ ಕೊಡಲು ನಿರಾಕರಿಸಿದಾಗ 2ನೇ ಪತ್ನಿಯ ತವರು ಮನೆಗೆ ಹೋಗಿ ಆಕೆಯನ್ನು ಕೊಲೆ ಮಾಡುವುದಾಗಿ ಸುಲೇಮಾನ್ ಹೇಳಿದ್ದ.