ಬೆಂಗಳೂರು: ತಮಗಿರುವ ಅಲ್ಪ ಭೂಮಿಯಲ್ಲಿ ಮಿಶ್ರ ಬೆಳೆಯನ್ನು ಬೆಳಯುವ ಮೂಲಕ ಅಧಿಕ ಲಾಭವನ್ನು ಪಡೆಯುತ್ತಿದ್ದು, ವ್ಯವಸಾಯ ಎಂದರೆ ಮೂಗು ಮುರಿಯುವವರಿಗೆ ಕೃಷಿಯಲ್ಲೇ ಬದುಕು ಕಟ್ಟಿಕೊಂಡಿರುವ ಮಹಾದೇವಪುರದ ಈ ರೈತ ಕುಟುಂಬ ಮಾದರಿಯಾಗಿ ನಿಲ್ಲುತ್ತದೆ.
ಬೆಂಗಳೂರು ಪೂರ್ವ ತಾಲೂಕಿನ ಬಿದರಹಳ್ಳಿ ಹೋಬಳಿಯ ಜ್ಯೋತಿಪುರ ಗ್ರಾಮದ ಮುನಿರಾಜು ಅವರ ಕುಟುಂಬ ಕೃಷಿ ಇಲಾಖೆಯಿಂದ ಸಿಗುವ ಸೌಲಭ್ಯಗಳನ್ನು ಬಳಸಿಕೊಂಡು ತಮಗಿರುವ ಮೂರು ಎಕರೆ ಜಮೀನಿನಲ್ಲಿ ಇತರೆ ಬೆಳೆಗಳೊಂದಿಗೆ ರೇಷ್ಮೆ, ಸೊಪ್ಪು ಬೆಳೆಯುವ ಮೂಲಕ ಜೀವನ ನಡೆಸುತ್ತಿದ್ದಾರೆ.
ಇತರರಿಗೆ ಮಾದರಿ ಈ ರೈತ ಕುಟುಂಬ ಒಬ್ಬ ಬೆಳೆದ ಬೆಳೆಯನ್ನೇ ಮತ್ತೊಬ್ಬ ಬೆಳೆದು ಆರ್ಥಿಕ ನಷ್ಟ ಹೊಂದುವ ರೈತರಿಗೆ ಇವರ ಮಿಶ್ರ ಕೃಷಿ ಪಾಠವಾಗಿ ಪ್ರೇರಕ ಶಕ್ತಿಯಾಗಿದೆ. ಮಿಶ್ರ ಬೆಳೆ ಬೆಳೆದು ಪ್ರಗತಿಪರ ಹಾಗೂ ಮಾದರಿ ರೈತರಾಗಿದ್ದಾರೆ.
ತಮ್ಮ ಜಮೀನಿನಲ್ಲಿ ಹಿಪ್ಪುನೇರಳೆ ಸೊಪ್ಪು, ಟೋಮ್ಯಾಟೋ, ಮೆಣಸಿನಕಾಯಿ, ಬೀನ್ಸ್, ತೊಗರಿ ಇತರೆ ಮಿಶ್ರ ಬೆಳೆಗಳನ್ನು ಬೆಳೆಯುತ್ತಿದ್ದೇವೆ. ಇದರಿಂದ ನಮ್ಮ ಜೀವನ ಸಾಗಿಸಲು ಅನುಕೂಲವಾಗಿದೆ. ಕೃಷಿ ಇಲಾಖೆ ಆಗಾಗ ಬಂದು ಮಾಹಿತಿಯನ್ನು ನೀಡುತ್ತಿರುತ್ತಾರೆ. ನಾವು ಒಂದೇ ರೀತಿಯ ಬೆಳೆಯನ್ನು ಬೆಳೆಯದೆ ಮಿಶ್ರ ಬೆಳೆಯನ್ನು ಬೆಳೆಯುತ್ತಿದ್ದೇವೆ. ಕೃಷಿಯನ್ನು ನಂಬಿದವರಿಗೆ ಎಂದಿಗೂ ಮೋಸ ಆಗಿಲ್ಲ. ಆಗೋದು ಇಲ್ಲ. ಕೃಷಿಯಲ್ಲಿ ನೆಮ್ಮದಿಯ ಬದುಕು ಸಾಗಿಸುತ್ತಿದ್ದೇವೆ ಎಂದು ಮುನಿರಾಜು ಹೇಳುತ್ತಾರೆ.
ನಾವು ಸುಮಾರು 14 ವರ್ಷದಿಂದ ಈ ರೇಷ್ಮೆ ಬೆಳೆಯನ್ನು ಬೆಳೆಯುತ್ತಿದ್ದೇವೆ. ತಿಂಗಳಿಗೆ ರೇಷ್ಮೆ ಬೆಳೆಯೊಂದಿಗೆ ಇತರೆ ಬೆಳೆಗೆ ಒಂದು ಲಕ್ಷಕ್ಕೂ ಅಧಿಕ ಲಾಭ ಬರುತ್ತಿದ್ದು, ಮಕ್ಕಳ ಶಿಕ್ಷಣಕ್ಕೆ ಹಾಗೂ ಕುಟುಂಬ ನಿರ್ವಹಣೆಗೆ ಅನುಕೂಲವಾಗಿದೆ. ಇವರು ರೇಷ್ಮೆ ಬೆಳೆಗೆ ಹೆಚ್ಚು ಪ್ರಾಮುಖ್ಯತೆ ನೀಡಿ ಉತ್ತಮ ತಳಿ ಬೆಳೆದಿದ್ದರಿಂದ ಸರ್ಕಾರ 2015ರಲ್ಲಿ ಅತ್ಯುತ್ತಮ ರೈತ ಮಹಿಳೆ ಪ್ರಶಸ್ತಿ ನೀಡಿ ಗೌರವಿಸಿದೆ. ಕೃಷಿಯನ್ನೇ ಮುಂದುವರೆಸಿಕೊಂಡು ಕುಟುಂಬ ನಿರ್ವಹಣೆ ನಡೆಸುತ್ತಿದ್ದೇವೆ ಎಂದು ಮನಿರಾಜು ಅವರ ಪತ್ನಿ ಕವಿತಾ ಅಭಿಪ್ರಾಯ ವ್ಯಕ್ತಪಡಿಸಿದರು.
ಕೃಷಿಯನ್ನು ನಂಬಿ ಬದುಕು ನಡೆಸುವವರಿಗೆ ಭೂಮಿ ತಾಯಿ ಎಂದಿಗೂ ಕೈ ಬಿಡುವುದಿಲ್ಲ ಎಂಬುದನ್ನು ಮುನಿರಾಜು ಕುಟುಂಬ ತೋರಿಸಿ ಕೊಟ್ಟಿದ್ದು, ಇವರ ಈ ಕಾರ್ಯ ಇತರರಿಗೆ ಮಾದರಿಯಾಗಿದೆ.