ದೇವನಹಳ್ಳಿ(ಬೆಂಗಳೂರು): ಮುದ್ದಿನ ನಾಯಿಮರಿಯೊಂದಿಗೆ ಕುಟುಂಬದವರು ದೆಹಲಿ ಮತ್ತು ಅಮೃತಸರಕ್ಕೆ 12 ದಿನಗಳ ಪ್ರವಾಸ ಹೊರಟ್ಟಿದ್ದರು, ಆದರೆ ಏರ್ ಇಂಡಿಯಾ ನಾಯಿಮರಿಯೊಂದಿಗೆ ಪ್ರಯಾಣಿಸಲು ನಿರಾಕರಿಸಿದೆ. ಇದರಿಂದ ಬೇಸತ್ತ ಕುಟುಂಬ, ತಮ್ಮ ಪ್ರವಾಸ ರದ್ದು ಮಾಡಿ ವಿಮಾನ ಯಾನ ಸಂಸ್ಥೆಯ ಕ್ರಮದ ಬಗ್ಗೆ ವಿಡಿಯೋ ಮಾಡಿ ಬೇಸರ ವ್ಯಕ್ತಪಡಿಸಿದೆ.
ಬೆಂಗಳೂರಿನ ಸಚಿನ್ ಶೆಣೈ ಪತ್ನಿ ಉಮಾ ಮತ್ತು ಮಗಳು ಆರ್ಯ ಜೊತೆಗೆ ಅವರ ಮುದ್ದಿನ ನಾಯಿ ನಾಯಿ ಫ್ಲಫಿಯೊಂದಿಗೆ 12 ದಿನಗಳ ಉತ್ತರ ಪ್ರವಾಸಕ್ಕೆ ಹೊರಟ್ಟಿದ್ದರು. ಕಳೆದ ಶನಿವಾರ ದೇವನಹಳ್ಳಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ AI 503 ವಿಮಾನದಲ್ಲಿ ದೆಹಲಿಗೆ ಪ್ರಯಾಣಿಸಲಿದ್ದರು. ಪ್ರಾರಂಭದಲ್ಲಿ ನಾಯಿ ಮರಿ ಜೊತೆ ಪ್ರಯಾಣಿಸಲು ಅವಕಾಶ ನೀಡಿದ ವಿಮಾನ ಯಾನ ಸಂಸ್ಥೆ ಸಿಬ್ಬಂದಿ, ವಿಮಾನ ಹತ್ತುವ ಸಮಯದಲ್ಲಿ ನಾಯಿಮರಿ ಪ್ರಯಾಣಕ್ಕೆ ಪೈಲಟ್ ನಿರಾಕರಿಸಿದ್ದಾರೆ. ಇದರಿಂದಾಗಿ ಕುಟುಂಬದ ಸದಸ್ಯನಂತಿದ್ದ ಮುದ್ದಿನ ಫ್ಲಫಿ ಬಿಟ್ಟು ಹೋಗಲು ಮನಸಾಗದೆ ತಮ್ಮ ಪ್ರವಾಸವನ್ನೇ ರದ್ದು ಮಾಡಿದ್ದಾರೆ.
ವಿಮಾನ ಸಂಸ್ಥೆಯ ಕ್ರಮದ ಬಗ್ಗೆ ಬೇಸರಗೊಂಡ ಸಚಿನ್ ಶೆಣೈ ಏರ್ ಪೋರ್ಟ್ನಲ್ಲಿಯೇ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಕ್ಕೆ ಹಂಚಿಕೊಂಡಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗಿದೆ.