ಬೆಂಗಳೂರು: ವಾಹನ ಚಾಲನೆ ವೇಳೆ ಸಂಚಾರ ನಿಯಮ ಉಲ್ಲಂಘಿಸಿ ಫೋನ್‌ನಲ್ಲಿ ಮಾತನಾಡುತ್ತ ಸ್ಕೂಟರಿಗೆ ಡಿಕ್ಕಿ ಹೊಡೆದ ಟಾಟಾ ಏಸ್ ಚಾಲಕನೊಬ್ಬ, ಈ ಬಗ್ಗೆ ಪ್ರಶ್ನಿಸಿದ ದ್ವಿಚಕ್ರ ವಾಹನ ಸವಾರನಿಗೆ ಚಾಕು ತೋರಿಸಿ ಬೆದರಿಕೆ ಹಾಕಿರುವ ಘಟನೆ ನಿನ್ನೆ ಮದ್ಯಾಹ್ನ ರಾಮಮೂರ್ತಿನಗರ ಬ್ರಿಡ್ಜ್ ಬಳಿ ನಡೆದಿದೆ. ತಮ್ಮ ತಂದೆಯೊಂದಿಗೆ ತೆರಳುತ್ತಿದ್ದ ಪ್ರಕಾಶ್ ಎಂಬುವವರ ಸ್ಕೂಟರಿನ ಬಲಭಾಗದಲ್ಲಿ ಸಾಗುತ್ತಿದ್ದ ಟಾಟಾ ಏಸ್ ಚಾಲಕ ಫೋನ್‌ನಲ್ಲಿ ಮಾತನಾಡುತ್ತಾ ಬಂದು ಡಿಕ್ಕಿ ಹೊಡೆದಿದ್ದಾನೆ.
ಇದನ್ನ ಪ್ರಶ್ನಿಸಿದ್ದಕ್ಕೆ ಸಿಟ್ಟಿಗೆದ್ದ ಆರೋಪಿ ಚಾಲಕ ತನ್ನ ವಾಹನದಿಂದ ಇಳಿದು ಚಾಕು ಹಿಡಿದು ಸಾರ್ವಜನಿಕರ ಎದುರೇ ಬೆದರಿಕೆ ಹಾಕಿದ್ದಾನೆ. ಘಟನೆ ಕುರಿತು ಪ್ರಕಾಶ್ ಟ್ವಿಟರ್ನಲ್ಲಿ ಬರೆದುಕೊಂಡಿದ್ದು, ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿರುವ ರಾಮಮೂರ್ತಿನಗರ ಠಾಣಾ ಪೊಲೀಸರು ಆರೋಪಿಗಾಗಿ ಹುಡುಕಾಟ ಆರಂಭಿಸಿದ್ದಾರೆ.
ಬಿಎಂಟಿಸಿ ಬಸ್ ಹರಿದು ವೃದ್ದನ ಕಾಲು ತುಂಡು:ಮತ್ತೊಂದು ಪ್ರಕರಣದಲ್ಲಿಬಿಎಮ್ಟಿಸಿ ಬಸ್ ಹರಿದ ಪರಿಣಾಮ ವೃದ್ಧರೊಬ್ಬರ ಎರಡೂ ಕಾಲುಗಳು ತುಂಡಾಗಿರುವ ಘಟನೆ ನಿನ್ನೆರಾತ್ರಿ ಯಶ್ವಂತಪುರ ಸರ್ಕಲ್ ಬಳಿ ನಡೆದಿದೆ. ರಸ್ತೆ ದಾಟಲು ನಿಂತಿದ್ದ 60 ವರ್ಷದ ವೃದ್ಧನ ಕಾಲುಗಳ ಮೇಲೆ ಬಸ್ಸಿನ ಚಕ್ರಗಳು ಹರಿದಿದ್ದು ಎರಡು ಕಾಲುಗಳು ತುಂಡಾಗಿವೆ. ಗಾಯಾಳು ವೃದ್ದರನ್ನು ಚಿಕಿತ್ಸೆಗಾಗಿ ಕೆ.ಸಿ ಜನರಲ್ ಆಸ್ಪತ್ರೆಗೆ ರವಾನಿಸಲಾಗಿದೆ. ಬೆರೊಂದು ಘಟನೆಯೊಂದರಲ್ಲಿ ವಾಟರ್ ಟ್ಯಾಂಕರ್ವೊಂದು ಹೋಟೆಲ್ ತ್ಯಾಜ್ಯ ತುಂಬಿದ್ದ ಬೊಲೆರೋ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಬೊಲೆರೋದಲ್ಲಿದ್ದ ತ್ಯಾಜ್ಯ ರಸ್ತೆ ಮೇಲೆಲ್ಲ ಬಿದ್ದ ಪರಿಣಾಮ ಕೆಲ ವಾಹನ ಸವಾರರು ರಸ್ತೆಗೆ ಜಾರಿ ಬಿದ್ದಿದ್ದಾರೆ. ಇದನ್ನು ಗಮನಿಸಿದ ಸ್ಥಳೀಯರು ತ್ಯಾಜ್ಯ ಬಿದ್ದ ಕಡೆಯೆಲ್ಲ ಡಸ್ಟ್ ಪೌಡರ್ ಹಾಕಿ ವಾಹನಗಳು ಜಾರದಂತೆ ಮಾಡಿದ್ದಾರೆ.