ಬೆಂಗಳೂರು :ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ 80 ವರ್ಷ ಮೇಲ್ಪಟ್ಟವರಿಗೆ ಮತ್ತು ವಿಕಲಚೇತನರಿಗೆ ಮನೆಯಿಂದಲೇ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದು ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ತಿಳಿಸಿದ್ದಾರೆ. ಬೆಂಗಳೂರಿನ ರಾಜ್ಯ ಚುನಾವಣಾ ಆಯೋಗದ ಕಚೇರಿಯಲ್ಲಿ ಮಾಧ್ಯಮಗೋಷ್ಟಿ ನಡೆಸಿ ಈ ಮಾಹಿತಿ ನೀಡಿದರು.
ಏ.29ರಿಂದ ಮೇ 6ರವರೆಗೆ ಮತದಾನ ಪ್ರಕ್ರಿಯೆ ನಡೆಯಲಿದ್ದು, 99,529 ಮತದಾರರು ಮನೆಯಿಂದಲೇ ತಮ್ಮ ಹಕ್ಕನ್ನು ಚಲಾಯಿಸಲು ನೊಂದಾಯಿಸಿಕೊಂಡಿದ್ದಾರೆ. ಹಿರಿಯ ಮತದಾರರು 12.15 ಲಕ್ಷ ಮತದಾರರಿದ್ದಾರೆ. ಈ ಪೈಕಿ 5.46 ಪುರುಷರು, 6.69 ಮಹಿಳೆಯರು ಮತ್ತು ಇತರೆ 16 ಮಂದಿ ಇದ್ದಾರೆ. 12.15 ಲಕ್ಷ ಮತದಾರರ ಪೈಕಿ 80,250 ಮತದಾರರು ಮನೆಯಿಂದಲೇ ಮತದಾನ ಮಾಡಲು ನೋಂದಾಯಿಸಿಕೊಂಡಿದ್ದಾರೆ. ಇದೇ ರೀತಿ 5.71 ಲಕ್ಷ ವಿಕಲಚೇತನ ಮತದಾರರಿದ್ದು, 3.35 ಲಕ್ಷ ಪುರುಷರು, 2.35 ಲಕ್ಷ ಮಹಿಳೆಯರು, 61 ಇತರೆ ಮತದಾರದಿದ್ದಾರೆ. ಇವರಲ್ಲಿ 19,279 ಮತದಾರರು ಮನೆಯಿಂದಲೇ ಮತದಾನ ಮಾಡಲು ನೋಂದಾಯಿಸಿಕೊಂಡಿದ್ದಾರೆ ಎಂದು ಮುಖ್ಯಚುನಾವಣಾಧಿಕಾರಿ ತಿಳಿಸಿದರು.
ಶನಿವಾರದಿಂದ (ಏ.29) ಮನೆಯಿಂದಲೇ ಮತದಾನ ಮಾಡಿಸಿಕೊಳ್ಳುವ ಕಾರ್ಯ ಆರಂಭಗೊಳ್ಳಲಿದ್ದು, ಇದಕ್ಕಾಗಿ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಮೇ 6ರವರೆಗೆ ಮನೆಯಿಂದ ಮತದಾನಕ್ಕೆ ಅವಕಾಶ ಇದೆ. ಮನೆಯಿಂದ ಮತದಾನ ಪಡೆದುಕೊಳ್ಳಲು ಚುನಾವಣಾ ಸಿಬ್ಬಂದಿ ನೋಂದಾಯಿತ ವ್ಯಕ್ತಿಗಳಿಗೆ ಯಾವಾಗ, ಯಾವ ಸಮಯಕ್ಕೆ ಬರಲಾಗುತ್ತದೆ ಎಂಬುದರ ಬಗ್ಗೆ ಮೊದಲೇ ಮಾಹಿತಿ ನೀಡಲಾಗುತ್ತದೆ. ಇಲ್ಲಿಯೂ ಗೌಪ್ಯ ಮತದಾನವಾಗಲಿದೆ. ಇಬ್ಬರು ಚುನಾವಣಾಧಿಕಾರಿ, ಒಬ್ಬರು ವಿಡಿಯೋಗ್ರಾಫರ್, ಒಬ್ಬರು ಪೊಲೀಸ್ ಸಿಬ್ಬಂದಿ ಮತ್ತು ರಾಜಕೀಯ ಪಕ್ಷಗಳ ಏಜೆಂಟ್‌ಗಳು ಉಪಸ್ಥಿತರಿರಲಿದ್ದಾರೆ. ಇವರ ಸಮ್ಮುಖದಲ್ಲಿ ಮತದಾನ ಪ್ರಕ್ರಿಯೆಯನ್ನು ನಡೆಸಲಾಗುತ್ತದೆ. ಮನೆಯಿಂದ ಮತದಾನ ಮಾಡಿದ ಬಳಿಕ ಯಾರಿಂದ, ಎಲ್ಲಿ, ಯಾವ ಕ್ಷೇತ್ರದಲ್ಲಿ ಮತದಾನವಾಗಿದೆ ಎಂಬುದನ್ನು ಗುರುತಿಸಿಕೊಳ್ಳಲಾಗುತ್ತದೆ ಎಂಬ ಮಾಹಿತಿ ನೀಡಿದರು.
ಒಟ್ಟು ಮತದಾರರ ವಿವರ :ಚುನಾವಣೆಯಲ್ಲಿ 5.31 ಕೋಟಿ ಮತದಾರರ ಮತ ಚಲಾಯಿಸಲು ಅರ್ಹರಿದ್ದಾರೆ. ಇವರಲ್ಲಿ ಕೇವಲ 3.5 ಲಕ್ಷ ಮಂದಿಗೆ ಗುರುತಿನ ಚೀಟಿ ತಲುಪಿಸುವ ಕಾರ್ಯ ಮಾತ್ರ ಬಾಕಿ ಇದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ, ಪಾರದರ್ಶಕ ಹಾಗೂ ನ್ಯಾಯ ಸಮ್ಮತವಾಗಿ ಚುನಾವಣೆ ನಡೆಸಲು ಸಕಲ ಸಿದ್ಧತೆ ಕೈಗೊಂಡಿದ್ದು, ಈ ಹಿಂದೆ ಅಂದರೆ ಜ.15ರಂದು ಪ್ರಕಟಿಸಿದ್ದ ಮತದಾರರ ಅಂತಿಮ ಪಟ್ಟಿಯಲ್ಲಿ 5.30 ಕೋಟಿ ಮತದಾರರು ಮತದಾನದ ಅರ್ಹತೆ ಹೊಂದಿದ್ದರು. ಇದಾದ ಬಳಿಕ 16.04 ಲಕ್ಷ ಮತದಾರರು ನೋಂದಣಿ ಮಾಡಿಕೊಂಡಿದ್ದಾರೆ. ಈ ಹಿನ್ನೆಲೆ ಒಟ್ಟು 5.31 ಮತದಾರರು ತಮ್ಮ ಹಕ್ಕು ಚಲಾಯಿಸಲು ಅರ್ಹತೆ ಸಂಪಾದಿಸಿದ್ದಾರೆ. ಇವರಲ್ಲಿ 2.67 ಕೋಟಿ ಮತದಾರರು ಪುರುಷರು, 2.64 ಕೋಟಿ ಮಹಿಳಾ ಮತದಾರರು ಮತ್ತು 4927 ಇತರೆ ಮತದಾರರಿದ್ದಾರೆ. ಮೊದಲ ಬಾರಿಗೆ ಮತ ಚಲಾಯಿಸುವವ ಯುವ ಮತದಾರರು 11.71 ಲಕ್ಷ ಇದ್ದು, 6.45 ಲಕ್ಷ ಪುರುಷರು, 5.26 ಲಕ್ಷ ಮಹಿಳೆಯರು, 181 ಇತರರು ಇದ್ದಾರೆ ಎಂದು ಮುಖ್ಯಚುನಾವಣಾಧಿಕಾರಿ ಮೀನಾ ವಿವರಿಸಿದರು.
3,048 ಅನಿವಾಸಿ ಮತದಾರರಿದ್ದು, 2,172 ಪುರುಷರು, 875 ಮಹಿಳೆಯರು, ಒಬ್ಬರು ಇತರೆ ಮತದಾರರಿದ್ದಾರೆ. 2022ರ ಸೆಪ್ಟೆಂಬರ್ ತಿಂಗಳಿನಿಂದ 2023ರ ಏಪ್ರಿಲ್ 25ರವರೆಗೆ 37.94 ಲಕ್ಷ ಮತದಾರರ ಗುರುತಿನ ಚೀಟಿಗಳನ್ನು ವಿತರಣೆ ಮಾಡಲಾಗಿದೆ. ಇನ್ನು 3.5 ಲಕ್ಷ ಬಾಕಿ ಇದ್ದು, ಈ ತಿಂಗಳ ಅಂತ್ಯಕ್ಕೆ ವಿತರಣೆ ಮಾಡಲಾಗುವುದು. ಇನ್ನು, ಮತದಾರರ ಚೀಟಿಯನ್ನು ಮತದಾನ ದಿನಾಂಕದ 10 ದಿನಗಳ ಮುಂಚಿತವಾಗಿ ಎಲ್ಲಾ ಅರ್ಹ ಮತದಾರರಿಗೆ ಜಿಲ್ಲಾ ಚುನಾವಣಾಧಿಕಾರಿಯಿಂದ ವಿತರಣೆ ಮಾಡಲಾಗುವುದು. ಮತದಾರರ ಚೀಟಿ ವಿತರಣೆ ಬಳಿಕ ಅವರಿಂದ ಸಹಿಯನ್ನು ಪಡೆದುಕೊಳ್ಳಲಾಗುವುದು ಎಂಬುದನ್ನು ಮುಖ್ಯಚುನಾವಣಾಧಿಕಾರಿ ಮಾಹಿತಿ ನೀಡಿದ್ರು.