ಬೆಂಗಳೂರು:ವಿಧಾನ ಸಭೆಯಿಂದ ವಿಧಾನ ಪರಿಷತ್ಗೆ ನಡೆಯುವ ಚುನಾವಣೆಯಲ್ಲಿ, ಕಾಂಗ್ರೆಸ್ಗೆ ಲಭ್ಯವಿರುವ ಎರಡು ಸ್ಥಾನಗಳ ಪೈಕಿ ಒಂದನ್ನು ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯಕ್ಕೆ ಕಲ್ಪಿಸುವಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮೇಲೆ ಒತ್ತಡ ಹೆಚ್ಚುತ್ತಿದೆ.
ಜೂನ್ 29ಕ್ಕೆ ವಿಧಾನಪರಿಷತ್ಗೆ ಚುನಾವಣೆ ನಡೆಯಲಿದ್ದು, ಈ ಸಂದರ್ಭ ಕಾಂಗ್ರೆಸ್ ಪಕ್ಷದ ಮೂವರು ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದ ಸದಸ್ಯರ ಅವಧಿ ಪೂರ್ಣಗೊಳ್ಳುತ್ತಿದೆ. ಇವರಲ್ಲಿ ಒಬ್ಬರು ವಿಧಾನಸಭೆಯಿಂದ ಪರಿಷತ್ತಿಗೆ ನೇಮಕಗೊಂಡವರು ಆಗಿದ್ದರೆ, ಉಳಿದಿಬ್ಬರು ನಾಮನಿರ್ದೇಶಿತ ಸದಸ್ಯರಾಗಿದ್ದಾರೆ. ಇದೇ ತಿಂಗಳ ಕೊನೆಯಲ್ಲಿ ಕಾಂಗ್ರೆಸ್ನಿಂದ ಆಯ್ಕೆಯಾಗಿದ್ದ ನಜೀರ್ ಅಹ್ಮದ್, ಅಬ್ದುಲ್ ಜಬ್ಬಾರ್ ಹಾಗೂ ಇಕ್ಬಾಲ್ ಅಹ್ಮದ್ ಸರಡಗಿ ಅವಧಿ ಮುಕ್ತಾಯವಾಗಲಿದೆ. ಇದೀಗ ಇವರಲ್ಲಿ ಒಬ್ಬರಿಗೆ ಅವಕಾಶ ಮರು ಕಲ್ಪಿಸುವಂತೆ ಕಾಂಗ್ರೆಸ್ನಿಂದ ಒತ್ತಡ ಕೇಳಿ ಬರುತ್ತಿದೆ ಎನ್ನಲಾಗಿದೆ.
'ಡಿಕೆಶಿ'ಯನ್ನು ಭೇಟಿಯಾದ ಮುಸ್ಲಿಂ ನಿಯೋಗ ಡಿಕೆಶಿಭೇಟಿಯಾದ ನಿಯೋಗ:
ಈ ನಿಟ್ಟಿನಲ್ಲಿ ಕೇಂದ್ರದ ಮಾಜಿ ಸಚಿವ ಹಾಗೂ ರಾಜ್ಯಸಭೆಯ ಮಾಜಿ ಉಪ ಸಭಾಪತಿ ಕೆ. ರೆಹಮಾನ್ ಖಾನ್ ಅವರ ನೇತೃತ್ವದ ಮುಸ್ಲಿಂ ಮುಖಂಡರ ನಿಯೋಗ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿತು.
ಈ ಸಂದರ್ಭದಲ್ಲಿ ಕಾರ್ಯಾಧ್ಯಕ್ಷರಾದ ಸಲೀಂ ಅಹಮದ್, ರಾಜ್ಯಸಭಾ ಸದಸ್ಯ ಡಾ. ನಾಸಿರ್ ಹುಸೇನ್, ಶಾಸಕರಾದ ತನ್ವೀರ್ ಸೇಠ್, ಜಮೀರ್ ಅಹ್ಮದ್ ಖಾನ್, ಎನ್.ಎ. ಹ್ಯಾರಿಸ್, ರಹೀಂ ಖಾನ್, ರಿಜ್ವಾನ್ ಅರ್ಷದ್, ವಿಧಾನ ಪರಿಷತ್ ಸದಸ್ಯರಾದ ನಾಸೀರ್ ಅಹಮದ್, ಅಬ್ದುಲ್ ಜಬ್ಬಾರ್ ಇದ್ದರು.
ಎಲ್ಲರೂ ಒಕ್ಕೋರಲಿನಿಂದ ಡಿಕೆಶಿ ಅವರಲ್ಲಿ ಒಬ್ಬ ಮುಸ್ಲಿಂ ಸದಸ್ಯರಿಗೆ ಟಿಕೆಟ್ ನೀಡುವಂತೆ ಒತ್ತಡ ಹೇರಿದ್ದು, ಪಕ್ಷದ ಇತರ ನಾಯಕರೊಂದಿಗೆ ಚರ್ಚಿಸಿ ನಿರ್ಧಾರ ಪ್ರಕಟಿಸುವುದಾಗಿ ಡಿಕೆಶಿ ಭರವಸೆ ಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ.
ತೆರವಾಗುತ್ತಿರುವ ಒಟ್ಟು ಸ್ಥಾನಗಳ ಪೈಕಿ ಎರಡು ಸ್ಥಾನಗಳನ್ನು ಮಾತ್ರ ಮರಳಿ ಗಳಿಸುವ ಅವಕಾಶ ಕಾಂಗ್ರೆಸ್ಗೆ ಇದ್ದು, ಇದರಲ್ಲಿ ಅಲ್ಪಸಂಖ್ಯಾತ ಮುಸ್ಲಿಂ ಕೋಟಾದಡಿ ನಜೀರ್ ಅಹ್ಮದ್ ಹಾಗೂ ಒಬಿಸಿ ಕೋಟಾದಡಿ ಎಂ.ಸಿ. ವೇಣುಗೋಪಾಲ್ಗೆ ಅವಕಾಶ ಸಿಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.