ಬೆಂಗಳೂರು: ಮಹಾದಾಯಿ ಹೋರಾಟದಲ್ಲಿ ಪ್ರಾಣ ಕಳೆದುಕೊಂಡ ರೈತರ ಕುಟುಂಬಗಳಿಗೆ ಪರಿಹಾರ ಸೇರಿದಂತೆ ತಮ್ಮ ವಿವಿಧ ಬೇಡಿಕೆಗಳ ಈಡೇರಿಸಲು ಸರ್ಕಾರದ ಮೇಲೆ ಒತ್ತಡ ಹೇರುವಂತೆ ವೀರೇಶ ಸೊಬರದಮಠ ನೇತೃತ್ವದ ರೈತರ ನಿಯೋಗ ಸಿದ್ದರಾಮಯ್ಯ ಅವರಿಗೆ ಇಂದು ಮನವಿ ಸಲ್ಲಿಸಿತು.
ಸುದ್ದಿಗಾರರ ಜತೆ ಈ ವೇಳೆ ಸಿದ್ದರಾಮಯ್ಯ ಮಾತನಾಡಿ, ಗೃಹ ಸಚಿವರು ಸದನದಲ್ಲಿ ಪಿಎಸ್ಐ ನೇಮಕಾತಿ ಅಕ್ರಮ ನಡೆದಿಲ್ಲ ಎಂದು ಜವಾಬ್ದಾರಿ ಸ್ಥಾನದಲ್ಲಿ ಇದ್ದು ಸುಳ್ಳು ಉತ್ತರ ಕೊಟ್ಟಿದ್ದಾರೆ. ಸುಳ್ಳು ಹೇಳಿದ ಮೇಲೆ ಸಚಿವರಾಗಿ ಹೇಗೆ ಮುಂದುವರಿತಾರೆ? ಯಾವ ನೈತಿಕತೆ ಇದೆ ಮುಂದುವರಿಯಲು. ಬಿಜೆಪಿ ಕೂಡ ಅವರನ್ನು ಮುಂದುವರಿಸಬಾರದು. ನಮ್ಮ ಕಾಲದಲ್ಲಿ ಅಕ್ರಮ ನಡೆದಿದ್ರೆ ಆವಾಗ ಯಾಕೆ ಸುಮ್ಮನಿದ್ರು. ಆಗ ಕಡ್ಲೆ ಪುರಿ ತಿಂತಾ ಇದ್ರಾ? ದಾಖಲೆ ಇದ್ರೆ ಬಿಡುಗಡೆ ಮಾಡಿ ಮಾತನಾಡಲಿ ಎಂದು ಹರಿಹಾಯ್ದರು.
ಕಾಂಗ್ರೆಸ್ ಕಾಲದಲ್ಲಿ ನಡೆದಿರುವ ನೇಮಕಾತಿ ಅಕ್ರಮಗಳ ಕುರಿತು ದಾಖಲೆ ಬಿಡುಗಡೆ ಮಾಡ್ತೇನೆ ಎಂಬ ಸಿಎಂ ಹೇಳಿಕೆಗೆ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿ, ಯಾಕೆ, ಪ್ರತಿ ಪಕ್ಷದಲ್ಲಿದ್ದಾಗ ಏನ್ ಮಾಡ್ತಿದ್ರಿ ನೀವು?. ಪಿಎಸ್ಐ ಪ್ರಕರಣದಲ್ಲಿ ನೈತಿಕತೆ ಇದ್ದರೆ ಗೃಹ ಸಚಿವರನ್ನು ವಜಾಮಾಡಬೇಕು ಎಂದು ಆಗ್ರಹಿಸಿದರು.
ಸಿದ್ದರಾಮಯ್ಯರನ್ನು ಭೇಟಿ ಮಾಡಿದ ವೀರೇಶ ಸೊಬರದಮಠ ನೇತೃತ್ವದ ರೈತರ ನಿಯೋಗ ಸಿದ್ದರಾಮಯ್ಯ ಭೇಟಿ ಬಳಿಕ ಸೊಬರದ ಮಠ ಮಾತನಾಡಿ, ಮಹದಾಯಿ ನೀರು ಹಂಚಿಕೆಯಾಗಿದೆ. ಮಲಪ್ರಭಾ ನದಿಗೆ ನೀರು ಜೋಡಣೆಯಾಗಬೇಕು. ಆದರೆ, ಪರಿಸರ ಇಲಾಖೆ ಕ್ಲಿಯರೆನ್ಸ್ ಇಲ್ಲ ಅಂತಾರೆ. ಸರ್ಕಾರ ಯಾಕೆ ಕ್ಲಿಯರೆನ್ಸ್ ಕೊಡಿಸ್ತಿಲ್ಲ. ಎರಡೂ ಕಡೆ ಅವರದೇ ಸರ್ಕಾರವಿದೆ. ಗೋವಾದ ಮೇಲೆ ಬೆರಳು ತೋರಿಸ್ತಾರೆ. ಅಲ್ಲಿನವರು ಅಧಿಕಾರ ಇಲ್ಲದಾಗ ಮಾತನಾಡ್ತಾರೆ. ಅವರದೇ ಸರ್ಕಾರ ಇದ್ದಾಗ ಮಾತನಾಡ್ತಿಲ್ಲ. ಪ್ರತ್ಯೇಕ ಉತ್ತರ ಕರ್ನಾಟಕ ಅಂತಾರೆ. ಯಾಕೆ ಈಗ ಅವರು ಮಾತನಾಡ್ತಿಲ್ಲ ಎಂದು ಹರಿಹಾಯ್ದರು.
ಬೊಮ್ಮಾಯಿ ಉತ್ತರಕರ್ನಾಟಕದವರು. ನೂರಾರು ಕಿಮೀ ಪಾದಯಾತ್ರೆ ಮಾಡಿದವರು. ಈಗ ಅವರೇ ಸಿಎಂ ಆಗಿದ್ದಾರೆ. 5 ಟಿಎಂಸಿಯಲ್ಲಿ 4 ಟಿಎಂಸಿ ಕುಡಿಯೋಕೆ ಕೊಡಬೇಕು. ಗೋವಾದವರ ಕಡೆ ಬೆರಳು ತೋರಿಸ್ತಾರೆ. ಚುನಾವಣೆವರೆಗೆ ಕಾಯ್ತಾ ಕೂತಿರಬಹುದು. ಆದರೆ, ನಾವು ಸುಮ್ಮನಿರಲ್ಲ. ಸರ್ಕಾರಕ್ಕೆ ಎಚ್ಚರಿಕೆ ಕೊಡೋಕೆ ಬಂದಿದ್ದೇವೆ. ಸಿದ್ದರಾಮಯ್ಯಗೆ ಮನವಿ ಸಲ್ಲಿಸಿದ್ದೇವೆ. ಸರ್ಕಾರದ ಮೇಲೆ ಒತ್ತಡ ತರುವಂತೆ ಹೇಳಿದ್ದೇವೆ ಎಂದರು.
ಇದನ್ನೂ ಓದಿ: ಡ್ರಗ್ಸ್ ಪ್ರಕರಣದ ಆರೋಪಿ ಕಿಶೋರ್ ಶೆಟ್ಟಿ ಅಂಗಿ ಬಿಚ್ಚಿಸಿ ನೀತಿ ಪಾಠ ಮಾಡಿದ ಕಮಿಷನರ್