ಬೆಂಗಳೂರು:ಮತಾಂತರ ನಿಷೇಧ ಕಾಯ್ದೆ ಜಾರಿಯಾದ ನಂತರ ಸಿಲಿಕಾನ್ ಸಿಟಿಯಲ್ಲಿ ಮೊದಲ ಪ್ರಕರಣ ದಾಖಲಾಗಿದೆ. ಮದುವೆಯಾಗುವ ಭರವಸೆ ನೀಡಿ 18 ವರ್ಷದ ಉತ್ತರ ಪ್ರದೇಶದ ಯುವತಿಯನ್ನು ಮತಾಂತರ ಮಾಡಲಾಗಿದ್ದು, ಸೈಯದ್ ಮುಯೀನ್ ಎಂಬಾತನನ್ನು ಯಶವಂತಪುರ ಪೊಲೀಸರು ಬಂಧಿಸಿದ್ದಾರೆ.
ಯುವತಿ ಕುಟುಂಬದವರು ಮೂಲತಃ ಉತ್ತರ ಪ್ರದೇಶದ ಗೋರಖ್ಪುರ ಮೂಲದವರು. ಯುವತಿಯ ತಂದೆ ಪೇಂಟಿಂಗ್ ಕೆಲಸ ಮಾಡುತ್ತಿದ್ದು, ತಾಯಿ ಗೃಹಿಣಿಯಾಗಿದ್ದಾರೆ. ಇಬ್ಬರು ಸಹೋದರಿಯರು ಒಬ್ಬ ಸಹೋದರನೊಂದಿಗೆ ಯುವತಿ ಯಶವಂತಪುರ ವ್ಯಾಪ್ತಿಯ ಬಿ.ಕೆ.ನಗರದಲ್ಲಿ ಕಳೆದ 15 ವರ್ಷಗಳಿಂದ ವಾಸವಿದ್ದಳು. ಮಗಳು ಅನ್ಯ ಧರ್ಮದ ಯುವಕನನ್ನು ಪ್ರೀತಿಸುತ್ತಿದ್ದಾಳೆ ಎಂಬ ಶಂಕೆ ಮೇಲೆ ಆರು ತಿಂಗಳ ಹಿಂದೆ ಮಗಳಿಗೆ ಪೋಷಕರು ಬುದ್ಧಿ ಹೇಳಿದ್ದರು.
ಅಕ್ಟೋಬರ್ 5ರಂದು ಅಂಗಡಿಗೆ ಹೋಗಿಬರುವುದಾಗಿ ಹೋಗಿದ್ದ ಯುವತಿ ಮನೆಗೆ ವಾಪಸ್ ಬಂದಿರಲಿಲ್ಲ. ಈ ಹಿನ್ನೆಲೆ ಯಶವಂತಪುರ ಠಾಣೆಯಲ್ಲಿ ಯುವತಿ ಕುಟುಂಬಸ್ಥರು ನಾಪತ್ತೆ ಪ್ರಕರಣ ದಾಖಲಿಸಿದ್ದರು. ಆದರೆ, ವಾರದ ಬಳಿಕ ಬುರ್ಖಾ ಧರಿಸಿಕೊಂಡು ಯುವತಿ ಠಾಣೆಗೆ ಆಗಮಿಸಿದ್ದಳು.
ಮಗಳ ನಡೆ ಕಂಡು ಗಾಬರಿಗೊಂಡ ಪೋಷಕರು ಮುಯೀನ್ ವಿರುದ್ಧ ಮದುವೆಯ ಭರವಸೆ ಕೊಟ್ಟು ಮತಾಂತರ ಮಾಡಿದ್ದಾನೆ ಎಂದು ಆರೋಪಿಸಿ ಯಶವಂತಪುರ ಪೊಲೀಸ್ ಠಾಣೆಯಲ್ಲಿ ಮತ್ತೊಂದು ದೂರು ದಾಖಲಿಸಿದ್ದಾರೆ.
ಆರೋಪಿ ಮುಯೀನ್ ಮತ್ತು ಯುವತಿ ಪ್ರೀತಿಸುತ್ತಿದ್ದರು. ಮದುವೆಯಾಗಬೇಕಾದರೆ ಮತಾಂತರವಾಗಬೇಕು ಎಂದು ಮುಯೀನ್ ಯುವತಿಯ ಮೇಲೆ ಒತ್ತಡ ಹೇರಿದ್ದನಂತೆ. ಮುಯೀನ್ ಮಾತು ನಂಬಿ ಆತನ ಜೊತೆ ಹೋಗಿದ್ದ ಯುವತಿಯನ್ನು ಕಾನೂನು ಬಾಹಿರವಾಗಿ ಮಸೀದಿಯೊಂದರಲ್ಲಿ ಮತಾಂತರ ಮಾಡಲಾಗಿದೆ ಎಂದು ಯುವತಿಯ ಪೋಷಕರು ದೂರಿದ್ದಾರೆ. ಸದ್ಯ ಯಶವಂತಪುರ ಪೊಲೀಸ್ ಠಾಣೆಯಲ್ಲಿ ಮತಾಂತರ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ.
ಮತಾಂತರ ನಿಷೇಧ ಕಾಯ್ದೆಯ ಅನ್ವಯ ಮತಾಂತರ ಪ್ರಕ್ರಿಯೆಗೆ ಹಲವು ನಿಯಮಗಳನ್ನು ವಿಧಿಸಲಾಗಿದೆ. ಮತಾಂತರವಾಗುವ ವ್ಯಕ್ತಿ ಮೊದಲು ಡಿಸಿಗೆ ಅರ್ಜಿ ಸಲ್ಲಿಸಬೇಕಾಗುತ್ತದೆ. ಬಳಿಕ ಡಿಸಿ ಆ ವ್ಯಕ್ತಿಯ ಪೋಷಕರು ಹಾಗೂ ಆಪ್ತರ ಅಭಿಪ್ರಾಯ ಪಡೆದು 30 ದಿನಗಳ ಗಡುವು ನೀಡುತ್ತಾರೆ. ಯಾವುದೇ ಒತ್ತಡವಿಲ್ಲದೇ ತಮ್ಮಿಷ್ಟದಂತೆ ಮತಾಂತರವಾಗುತ್ತಿದ್ದರೆ ಜಿಲ್ಲಾಧಿಕಾರಿ ಅನುಮತಿ ನೀಡುತ್ತಾರೆ.
ಯಾವುದೇ ಒತ್ತಡ ಅಥವಾ ಆಮಿಷಕ್ಕೆ ಬಲಿಯಾಗಿ ಮತಾಂತರವಾದರೆ ಮತಾಂತರವಾಗಲು ಸಹಾಯ ಮಾಡುವ ಎಲ್ಲರ ಮೇಲೆ ಎಫ್ಐಆರ್ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಈಗ ಇದೇ ಕಾಯ್ದೆಯಂತೆ ಮುಯೀನ್ ಹಾಗೂ ಆತನಿಗೆ ಸಹಾಯ ಮಾಡಿದವರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದ್ದು, ಸದ್ಯ ಮುಯೀನ್ ಬಂಧಿಸಲಾಗಿದೆ. ಇನ್ನು ಮತಾಂತರಕ್ಕೆ ಬೆಂಬಲ ನೀಡಿದವರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಓದಿ:ಮತಾಂತರ ನಿಷೇಧ ಕಾಯ್ದೆಗೆ ರಾಜ್ಯಪಾಲರ ಅಂಕಿತ: ಕಾಯ್ದೆ ಉಲ್ಲಂಘಿಸಿದ್ರೆ ಯಾವ ಶಿಕ್ಷೆ?