ಕರ್ನಾಟಕ

karnataka

ETV Bharat / state

ಅತ್ಯಾಚಾರ ಆರೋಪ: ಸ್ವಾಮೀಜಿ ಪೂರ್ವಾಶ್ರಮ ಸೋದರ ದೊರೆಸ್ವಾಮಿ ಜಾಮೀನು ಅರ್ಜಿ ವಜಾ - Highcourt

ಮುರುಘಾ ಮಠಕ್ಕೆ ಸೇರಿದ ವಿದ್ಯಾಪೀಠದಲ್ಲಿ ದೊರೆಸ್ವಾಮಿ ಕಾರ್ಯನಿರ್ವಾಹಕ ನಿರ್ದೇಶಕನಾಗಿ ಕೆಲಸ ಮಾಡುತ್ತಿದ್ದರು. ಈ ವೇಳೆ ಉಪನ್ಯಾಸಕಿಯೊಬ್ಬರಿಗೆ ಮದುವೆಯಾಗುವುದಾಗಿ ಹೇಳಿ ನಂಬಿಸಿ ಅವರ ಮೇಲೆ ಅತ್ಯಾಚಾರ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಎಂ.ಜಿ. ದೊರೆಸ್ವಾಮಿಗೆ ನಿರೀಕ್ಷಣಾ ಜಾಮೀನು ನೀಡಲು ಹೈಕೋರ್ಟ್ ನಿರಾಕರಿಸಿದೆ.

ಹೈಕೋರ್ಟ್
ಹೈಕೋರ್ಟ್

By

Published : Mar 1, 2021, 9:06 PM IST

ಬೆಂಗಳೂರು:ವಿವಾಹವಾಗುವುದಾಗಿ ನಂಬಿಸಿ ಉಪನ್ಯಾಸಕಿಯೊಬ್ಬರ ಮೇಲೆ ಅತ್ಯಾಚಾರ ಎಸಗಿದ ಆರೋಪದಡಿ ಬಂಧನ ಭೀತಿ ಎದುರಿಸುತ್ತಿರುವ ಚಿತ್ರದುರ್ಗದ ಪ್ರಭಾವಿ ಮಠದ ಸ್ವಾಮೀಜಿಯೊಬ್ಬರ ಪೂರ್ವಾಶ್ರಮದ ಸಹೋದರ ಎನ್ನಲಾದ ಎಂ.ಜಿ. ದೊರೆಸ್ವಾಮಿಗೆ ನಿರೀಕ್ಷಣಾ ಜಾಮೀನು ನೀಡಲು ಹೈಕೋರ್ಟ್ ನಿರಾಕರಿಸಿದೆ.

ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಆರೋಪಿ ದೊರೆಸ್ವಾಮಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ನ್ಯಾ. ಕೆ. ನಟರಾಜನ್ ಅವರಿದ್ದ ಏಕ ಸದಸ್ಯ ಪೀಠ ನಡೆಸಿ, ಈ ಆದೇಶ ಮಾಡಿದೆ. ಪೀಠ ತನ್ನ ಆದೇಶದಲ್ಲಿ ಪ್ರಕರಣದಲ್ಲಿನ ಆರೋಪಿಯ ವಿರುದ್ಧದ ಆರೋಪಗಳನ್ನು ಸಾಬೀತುಪಡಿಸುವಂತಹ ಸಾಕ್ಷ್ಯಾಧಾರಗಳು ಮೇಲ್ನೋಟಕ್ಕೆ ಕಂಡು ಬಂದಿವೆ. ಪ್ರಕರಣ ಗಂಭೀರ ಸ್ವರೂಪದ್ದಾಗಿದ್ದು, ಆರೋಪಿಯೂ ಪ್ರಭಾವಿ ವ್ಯಕ್ತಿಯಾಗಿದ್ದಾರೆ. ಪ್ರಸ್ತುತ ಪ್ರಕರಣದ ತನಿಖೆ ಪ್ರಗತಿಯಲ್ಲಿದ್ದು, ಈ ಹಂತದಲ್ಲಿ ಆರೋಪಿಗೆ ನಿರೀಕ್ಷಣಾ ಜಾಮೀನು ನೀಡಿದರೆ ತನಿಖೆಗೆ ಅಡ್ಡಿಯಾಗಬಹುದು ಎಂದು ಅಭಿಪ್ರಾಯಪಟ್ಟಿದೆ.

ಓದಿ: ಮ್ಯಾನ್​ಹೋಲ್​​ಗಿಳಿದು ಇಬ್ಬರ ಸಾವು ಪ್ರಕರಣ: ವಾರದಲ್ಲಿ ಚಾರ್ಜ್​ಶೀಟ್

ಪ್ರಕರಣದ ಹಿನ್ನೆಲೆ:ಮುರುಘಾ ಮಠಕ್ಕೆ ಸೇರಿದ ವಿದ್ಯಾಪೀಠದಲ್ಲಿ ದೊರೆಸ್ವಾಮಿ ಕಾರ್ಯನಿರ್ವಾಹಕ ನಿರ್ದೇಶಕನಾಗಿ ಕೆಲಸ ಮಾಡುತ್ತಿದ್ದರು. ಕಳೆದ 2019ರ ಸೆ.17ರಂದು ಕಾರ್ಯಾಗಾರವೊಂದರಲ್ಲಿ ಸಂತ್ರಸ್ತೆಯ ಮೊಬೈಲ್ ಸಂಖ್ಯೆ ಪಡೆದುಕೊಂಡಿದ್ದ ದೊರೆಸ್ವಾಮಿ, ಆಗಾಗ್ಗೆ ಕರೆ ಮಾಡಿ ಪರಿಚಯ ಬೆಳೆಸಿಕೊಂಡಿದ್ದರು. ಬಳಿಕ 2019ರ ಅಕ್ಟೋಬರ್‌ನಲ್ಲಿ ಸಂತ್ರಸ್ತೆಯನ್ನು ಯಶವಂತಪುರದ ಹೋಟೆಲ್ ಒಂದಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ, ಆರ್‌ಎಂಸಿ ಯಾರ್ಡ್ ಠಾಣೆ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ.

ಪ್ರಕರಣ ಸಂಬಂಧ ನಿರೀಕ್ಷಣಾ ಜಾಮೀನು ಕೋರಿ ದೊರೆಸ್ವಾಮಿ ಸಲ್ಲಿಸಿದ್ದ ಅರ್ಜಿಯನ್ನು ನಗರದ 55ನೇ ಹೆಚ್ಚುವರಿ ಸೆಷನ್ಸ್ ಕೋರ್ಟ್ ಫೆ.5ರಂದು ವಜಾಗೊಳಿಸಿತ್ತು. ಇದೇ ವೇಳೆ ಪ್ರಕರಣದ ಇತರೆ ಆರೋಪಿಗಳಾದ ಎ.ಜೆ. ಪರಮಶಿವಯ್ಯ, ಎನ್. ಗಂಗಾಧರ್ ಹಾಗೂ ಎಂ.ಟಿ. ಮಲ್ಲಿಕಾರ್ಜುನ್‌ಗೆ ಷರತ್ತುಬದ್ಧ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತ್ತು. ಇದೀಗ ಪ್ರಮುಖ ಆರೋಪಿ ದೊರೆಸ್ವಾಮಿಗೆ ಹೈಕೋರ್ಟ್ ಕೂಡ ನಿರೀಕ್ಷಣಾ ಜಾಮೀನು ನಿರಾಕರಿಸಿದೆ. ಆರೋಪಿ ತಲೆ ಮರೆಸಿಕೊಂಡಿದ್ದಾರೆ.

ABOUT THE AUTHOR

...view details