ಬೆಂಗಳೂರು:ವೇಗವಾಗಿ ಬಂದ ಕಾರು ಬಿಎಂಟಿಸಿ ಬಸ್‌ಗೆ ಡಿಕ್ಕಿಯಾಗಿ ಅಗ್ನಿಗಾಹುತಿಯಾದ ಘಟನೆ ಇಂದು ಬೆಳಿಗ್ಗೆ ನಾಗರಭಾವಿ ಹೊರವರ್ತುಲ ರಸ್ತೆಯ ಚಂದ್ರಾಲೇಔಟ್ ಬಸ್ ನಿಲ್ದಾಣದ ಬಳಿ ನಡೆಯಿತು.
ಯಶವಂತಪುರದಿಂದ ನಾಯಂಡಹಳ್ಳಿಗೆ ತೆರಳುತ್ತಿದ್ದ ಬಸ್ ಬೆಳಿಗ್ಗೆ 9 ಗಂಟೆಯ ಸುಮಾರಿಗೆ ಪ್ರಯಾಣಿಕರನ್ನು ಇಳಿಸಲು ಹಾಗೂ ಹತ್ತಿಸಿಕೊಳ್ಳಲು ಚಂದ್ರಾಲೇಔಟ್ ಬಸ್ ನಿಲ್ದಾಣದಲ್ಲಿ ನಿಲ್ಲಿಸಲಾಗಿತ್ತು. ಈ ಸಂದರ್ಭದಲ್ಲಿ ವೇಗವಾಗಿ ಬಂದ ಕಾರು ಹಿಂಬದಿಯಿಂದ ಬಸ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಉಂಟಾದ ಘರ್ಷಣೆಯಿಂದ ಬೆಂಕಿ ಹತ್ತಿಕೊಂಡಿದ್ದು, ಕಾರು ಪೂರ್ತಿಯಾಗಿ ಅಗ್ನಿಗಾಹುತಿಯಾಯಿತು. ಬಸ್ಸಿನ ಹಿಂಬದಿ ಆಸನಗಳು ಸುಟ್ಟು ಕರಕಲಾಗಿವೆ. ಕಾರು ಚಾಲಕ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.