ಕರ್ನಾಟಕ

karnataka

ETV Bharat / state

ಜನತಾದಳ TO ಬಿಜೆಪಿ: ನೂತನ ಸಿಎಂ ಬಸವರಾಜ ಬೊಮ್ಮಾಯಿ ರಾಜಕೀಯ ಕಿರು ಪರಿಚಯ - ನೂತನ ಸಿಎಂ

ರಾಜ್ಯ ರಾಜಕೀಯದ ಕ್ಷೀಪ್ರ ಬೆಳವಣಿಗೆಯ ನಡುವೆ ಬಿಎಸ್ ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದು ಇದೀಗ ಬಸವರಾಜ ಬೊಮ್ಮಾಯಿ ನೂತನ ಮುಖ್ಯಮಂತ್ರಿಯಾಗಿ ನೇಮಕವಾಗಿದ್ದಾರೆ. ಮೂಲ ಬಿಜೆಪಿಗರಲ್ಲದ ಬೊಮ್ಮಾಯಿಗೆ ಬಿಎಸ್​​ವೈ ಬಿಜೆಪಿಯಲ್ಲಿ ಭದ್ರ ಬುನಾದಿ ಹಾಕಿಕೊಟ್ಟಿದ್ದಾರೆ. ಬೊಮ್ಮಾಯಿ ಅವರ ರಾಜಕೀಯ ಪರಿಚಯ ಇಲ್ಲಿದೆ.

a-brief-political-profile-of-newly-appointed-cm-basavaraja-bommai
ಬೊಮ್ಮಾಯಿಯ ರಾಜಕೀಯ ಕಿರುಪರಿಚಯ

By

Published : Jul 28, 2021, 1:33 PM IST

ಬೆಂಗಳೂರು: ಮೆಕ್ಯಾನಿಕಲ್​ ಎಂಜಿನಿಯರಿಂಗ್​ ಪಧವೀದರರಾಗಿದ್ದ ಬೊಮ್ಮಾಯಿ ಉದ್ಯಮ ಬಿಟ್ಟು ರಾಜಕೀಯ ಎಂಟ್ರಿ ಪಡೆದುಕೊಂಡು. ಇವರ ರಾಜಕೀಯ ಪ್ರಯಾಣವೇ ವಿಶಿಷ್ಟವಾಗಿದ್ದು, ಜನತಾಪರಿವಾರದಿಂದ ಬಿಜೆಪಿಯಲ್ಲಿ ಶಾಸಕ, ಸಚಿವ ಮತ್ತೀಗ ಸಿಎಂ ಆಗಿ ಅಧಿಕಾರಕ್ಕೇರಿದ ಧೀಮಂತ ನಾಯಕ

ಬಸವರಾಜ ಬೊಮ್ಮಾಯಿ 1960ರ ಜನವರಿ 28ರಂದು ಧಾರಾವಾಡ ಜಿಲ್ಲೆಯ ಹುಬ್ಬಳ್ಳಿಯಲ್ಲಿ ಜನಿಸಿದರು. ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್. ಆರ್. ಬೊಮ್ಮಾಯಿ ಪುತ್ರರಾದ ಇವರು ರಾಜಕೀಯ ಹಿನ್ನೆಲೆ ಹೊಂದಿದವರು. ಬೊಮ್ಮಾಯಿ - ಗಂಗಮ್ಮ ದಂಪತಿಗಳ ನಾಲ್ಕು ಮಕ್ಕಳಲ್ಲಿ ಬೊಮ್ಮಾಯಿ ಹಿರಿಯವರು. ಬೊಮ್ಮಾಯಿಯ ಪತ್ನಿ ಹೆಸರು ಚೆನ್ನಮ್ಮ ಹಾಗೂ ಅವರಿಗೆ ಇಬ್ಬರು ಮಕ್ಕಳಿದ್ದಾರೆ.

ಉದ್ಯಮ ಬಿಟ್ಟು ರಾಜಕೀಯ

ಮೆಕ್ಯಾನಿಕಲ್‌ ಇಂಜಿನಿಯರಿಂಗ್‌ ಪದವಿ ಪಡೆದಿರುವ ಅವರು, ಕೃಷಿ ಹಾಗೂ ತಮ್ಮದೇ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದರು. ಜೊತೆಗೆ ಕರ್ನಾಟಕ ರಾಜ್ಯ ಕ್ರಿಕೆಟ್‌ ಅಸೋಸಿಯೇಷನ್‌ನ ಧಾರವಾಡದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.

ರಾಜಕೀಯ ಜೀವನವನ್ನ ಜನತಾದಳದ ಮೂಲಕ ಆರಂಭಿಸಿದರು. 1995ರಲ್ಲಿ ಜನತಾದಳದ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡರು. 1996 ಮತ್ತು 1997ರಲ್ಲಿ ಅಂದಿನ ಮುಖ್ಯಮಂತ್ರಿ ಜೆಹೆಚ್‌ ಪಟೇಲ್‌ ಅವರಿಗೆ ರಾಜಕೀಯ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದರು. ನಂತರ 1997ರಲ್ಲಿ ಮೊದಲ ಬಾರಿಗೆ ಸ್ಥಳೀಯ ಸಂಸ್ಥೆಗಳಿಂದ ‌ವಿಧಾನ ಪರಿಷತ್‌ಗೆ ಆಯ್ಕೆಯಾಗಿ ವಿಧಾನಸೌಧ ಪ್ರವೇಶಿಸಿದರು. 2007ರಲ್ಲಿ ಧಾರವಾಡದಿಂದ ನರಗುಂದದವರೆಗೆ 232 ಕಿಮೀ ದೂರವನ್ನ 21 ದಿನಗಳ ಕಾಲ ರೈತರೊಂದಿಗೆ ಹೆಜ್ಜೆ ಹಾಕಿ ರೈತ ಹೋರಾಟಕ್ಕೆ ಬಲ ತುಂಬಿದ್ದರು.

ಜೆಡಿಯು ತೊರೆದು ಬಿಜೆಪಿಗೆ

ಜನತಾ ಪರಿವಾರ ಇಬ್ಭಾಗ ಆದಾಗ ಎಸ್.ಆರ್.ಬೊಮ್ಮಾಯಿ ಅವರು ಹೆಚ್.ಡಿ.ದೇವೇಗೌಡ ನೇತೃತ್ವದ ಜೆಡಿಎಸ್‌ಗೆ ಹೋದರೆ, ಬಸವರಾಜ ಬೊಮ್ಮಾಯಿ ಮಾತ್ರ ಜೆಡಿಯುಗೆ ಸೇರ್ಪಡೆಯಾದರು. ಜೆಡಿಯುಗೆ ದೇವೇಗೌಡರು ಪ್ರಧಾನಿಯಾಗಿದ್ದಾಗ ಕೇಂದ್ರದಲ್ಲಿ ಎಸ್.ಆರ್.ಬೊಮ್ಮಾಯಿಗೆ ಮಾನವ ಸಂಪನ್ಮೂಲ ಸಚಿವ ಸ್ಥಾನ ನೀಡಿದ್ದರು. 1997ರಲ್ಲಿ ಜನತಾ ಪಕ್ಷದಿಂದ. ತಮ್ಮ 37ನೇ ವಯಸ್ಸಿನಲ್ಲಿ ಅವರು ವಿಧಾನ ಪರಿಷತ್ತಿನ ಸ್ಥಳೀಯ ಸಂಸ್ಥೆಗಳಿಂದ (ಧಾರವಾಡ-ಹಾವೇರಿ-ಗದಗ) ಆಯ್ಕೆಯಾಗಿದ್ದರು.

ಅಲ್ಲಿಂದ ಬಸವರಾಜ ಬೊಮ್ಮಾಯಿ ಹಿಂದೆ ತಿರುಗಿ ನೋಡಿದ್ದೇ ಇಲ್ಲ. 2003ರಲ್ಲಿ ಮತ್ತೆ ಅದೇ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ಆಯ್ಕೆಯಾದರು. ಅಲ್ಲಿಂದ ರಾಜಕೀಯವಾಗಿ ಶಾಶ್ವತ ನೆಲೆ ಕಂಡುಕೊಳ್ಳಲು ಬೊಮ್ಮಾಯಿ ಶಿಗ್ಗಾಂವಿ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡರು. ಅಷ್ಟರಲ್ಲಿ ಅವರು ಬಿಜೆಪಿಗೆ ಸೇರಿದ್ದರು. ಜೆಡಿಯುನಲ್ಲಿದ್ದ ಬಸವರಾಜ್‌ ಬೊಮ್ಮಾಯಿ ಅವರನ್ನು 2008ರಲ್ಲಿ ಯಡಿಯೂರಪ್ಪ ಬಿಜೆಪಿಗೆ ಕರೆತಂದರು. ಬಳಿಕ ಹಾವೇರಿಯ ಶಿಗ್ಗಾಂವ್ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ಚುನಾವಣೆಗೆ ಸ್ಪರ್ಧಿಸಿ 2008ರಲ್ಲಿ ಬಿಜೆಪಿಯಿಂದ ವಿಧಾನಸಭೆ ಪ್ರವೇಶಿಸಿದರು.

ಬಿಎಸ್​ವೈ ಆಪ್ತ ಎಂಬ ಗುರುತು

ಹಾವೇರಿ ಜಿಲ್ಲೆಯ ಶಿಗ್ಗಾವಿ ವಿಧಾನಸಭೆ ಕ್ಷೇತ್ರದ ಶಾಸಕರಾಗಿದ್ದ ಬೊಮ್ಮಾಯಿ ಯಡಿಯೂರಪ್ಪನವರ ಸಂಪುಟದಲ್ಲಿ ಗೃಹ ಹಾಗೂ ಸಂಸದೀಯ ವ್ಯವಹಾರಗಳ ಖಾತೆ ಸಚಿವರಾದರು. ಬಳಿಕ ರಾಜಕೀಯ ಬೆಳವಣಿಗೆಯಲ್ಲಿ ಬಿಎಸ್​​ವೈ ಬಿಜೆಪಿ ತೊರೆದಾಗ ಬೊಮ್ಮಾಯಿ ಬಿಜೆಪಿಯಲ್ಲಿಯೇ ಉಳಿದು ಪಕ್ಷನಿಷ್ಠೆ ಮೆರೆದಿದ್ದರು. ಈ ವೇಳೆಗಾಗಲೇ ಬಿಎಸ್​ವೈ ಆಪ್ತ ವಲಯದಲ್ಲಿ ಕಾಣಿಸಿಕೊಂಡಿದ್ದರು. ಬಳಿಕ ಬಿಎಸ್​ವೈ ಮತ್ತೆ ಬಿಜೆಪಿಗೆ ಮರಳಿದಾಗ ಇಬ್ಬರ ನಡುವಿನ ಸ್ನೇಹ ಇನ್ನಷ್ಟು ಗಟ್ಟಿಯಾಗಿತ್ತು.

ಬಳಿಕ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೇರಿದಾಗ ಪ್ರಭಲ ಹುದ್ದೆ ಸಿಗುವ ನಿರೀಕ್ಷೆಯಲ್ಲಿದ್ದ ಬೊಮ್ಮಾಯಿಗೆ ಗೃಹ ಸಚಿವ ಹುದ್ದೆ ಒಲಿದುಬಂದಿತ್ತು. ಇದೀಗ ಬಿಜೆಪಿಯ ಪ್ರಬಲ ನಾಯಕರ ನಡುವೆಯೂ ಬೊಮ್ಮಾಯಿಗೆ ಸಿಎಂ ಪಟ್ಟ ದೊರಕಿದೆ.

ABOUT THE AUTHOR

...view details