ಕರ್ನಾಟಕ

karnataka

ETV Bharat / state

ಪಾಲಿಕೆಯಲ್ಲಿ ಸಾವಿರಾರು ಕೋಟಿ ಅವ್ಯವಹಾರ ಪತ್ತೆ: 3 ದಿನದ ಎಸಿಬಿ ಕಾರ್ಯಾಚರಣೆ ಹೀಗಿತ್ತು - ಎಸಿಬಿ ದಾಳಿ

ಎಸಿಬಿಯ 200 ಅಧಿಕಾರಿಗಳು ಮತ್ತು ಸಿಬ್ಬಂದಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಕಂದಾಯ, ನಗರ ಯೋಜನೆ, ಟಿ.ಡಿ.ಆರ್, ಬೃಹತ್ ನೀರುಗಾಲುವೆ ಸೇರಿದಂತೆ ವಿವಿಧ ವಿಭಾಗಗಳ ಮೇಲೆ ದಾಳಿ ನಡೆಸಿದ್ದು, ಪಾಲಿಕೆಯಲ್ಲಿ ಸಾವಿರಾರು ಕೋಟಿ ಅವ್ಯವಹಾರ ನಡೆದಿರುವುದು ಬಯಲಿಗೆ ಬಂದಿದೆ.

ಎಸಿಬಿ ದಾಳಿ
ಎಸಿಬಿ ದಾಳಿ

By

Published : Mar 3, 2022, 7:01 AM IST

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಕಂದಾಯ, ನಗರ ಯೋಜನೆ, ಟಿಡಿಆರ್, ಬೃಹತ್ ನೀರುಗಾಲುವೆ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಸಾವಿರಾರು ಕೋಟಿ ರೂಪಾಯಿಯಷ್ಟು ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿರುವುದು ಎಸಿಬಿ ದಾಳಿಯಿಂದ ಕಂಡು ಬಂದಿದೆ. ಫೆಬ್ರವರಿ 25, 28ನೇ ತಾರೀಖು ಹಾಗೂ ಮಾರ್ಚ್ 3ರ ದಾಳಿಯ ಬಳಿಕ ಎಸಿಬಿ ಬಿಡುಗಡೆ ಮಾಡಿರುವ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಬುಧವಾರ ಸಹ ಎಸಿಬಿಯ 200 ಅಧಿಕಾರಿ ಮತ್ತು ಸಿಬ್ಬಂದಿ ಹಾಗೂ ಬಿಬಿಎಂಪಿಯ 3 ವಲಯಗಳು ಸೇರಿದಂತೆ 35 ತಂಡಗಳಾಗಿ ಪಾಲಿಕೆಯ ವಿವಿಧ ಕಚೇರಿಗಳಿಗೆ ತೆರಳಿ, ಪಾಲಿಕೆಯ ವಿವಿಧ ಕಡತ, ದಾಖಲೆಗಳನ್ನು ಪರಿಶೀಲನೆ ನಡೆಸಿದ ಬಳಿಕ ಇಷ್ಟೊಂದು ಬೃಹತ್ ಪ್ರಮಾಣದ ಅಕ್ರಮ ನಡೆದಿರುವುದನ್ನು ಬೆಳಕಿಗೆ ಬಂದಿದೆ ಎಂದು ಎಸಿಬಿ ಹೇಳಿದೆ.

ಎಸಿಬಿ ದಾಳಿ

ಕಳೆದ ಹಲವು ವರ್ಷಗಳಿಂದ ಪಾಲಿಕೆಯ ಜಾಹೀರಾತು ವಿಭಾಗದಲ್ಲಿ 267 ಕೋಟಿ ರೂ. ಜಾಹೀರಾತು ತೆರಿಗೆ ಸಂಗ್ರಹ ಬಾಕಿಯಿದೆ. ಬಸ್ ತಂಗುದಾಣ ಮತ್ತು ವಾಲ್​​ಗೆ ಅಳವಡಿಸಿರುವ ಜಾಹೀರಾತುಗಳಿಂದ ಸುಮಾರು 27 ಕೋಟಿ ರೂ. ಗೂ ಅಧಿಕ ತೆರಿಗೆ ಸಂಗ್ರಹ ಮಾಡಿಲ್ಲ. ಬಸ್ ತಂಗುದಾಣದಲ್ಲಿ ಅಳವಡಿಸಿರುವ ಜಾಹೀರಾತುಗಳಿಂದ ಪಾಲಿಕೆಗೆ ಸುಮಾರು 6 ಕೋಟಿ ರೂ. ಕರ ಸಂಗ್ರಹ ಮಾಡಿಲ್ಲ.

ಒಟ್ಟಾರೆ ಜಾಹೀರಾತು ವಿಭಾಗದಲ್ಲಿ ನಿಯಮದ ಪ್ರಕಾರ, ಜಾಹೀರಾತು ತೆರಿಗೆ ಸಂಗ್ರಹಿಸದೇ ಪಾಲಿಕೆ ಮತ್ತು ಸರ್ಕಾರಕ್ಕೆ ಅಂದಾಜು 300 ಕೋಟಿ ರೂಪಾಯಿಗಳಿಗೂ ಅಧಿಕ ನಷ್ಟ ಉಂಟಾಗಿರುವುದು ದಾಖಲೆಗಳಿಂದ ತಿಳಿದು ಬಂದಿದೆ.

ಸರ್ಕಾರದ ಕರಾಬು ಜಮೀನುಗಳಿಗೂ ಟಿಡಿಆರ್ ಹಂಚಿಕೆ: ವರ್ಗಾವಣೆ ಮಾಡಬಹುದಾದ ಹಕ್ಕುಗಳನ್ನು ಪಡೆಯಲು ಕಳಪೆ ಗುಣಮಟ್ಟದ ಕಟ್ಟಡಗಳನ್ನು ನಿರ್ಮಿಸಿ, ಹೆಚ್ಚಿನ ಮೊತ್ತದ ಟಿಡಿಆರ್ ಮಂಜೂರು ಮಾಡಿಸಿಕೊಳ್ಳಲಾಗಿದೆ. ಬಳಿಕ ಅದೇ ಜಾಗದಲ್ಲಿ ಹೊಸ ಕಟ್ಟಡವನ್ನು ನಿರ್ಮಾಣ ಮಾಡಲಾಗಿದೆ ಎಂಬ ಅಂಶ ಕಂಡುಬಂದಿದೆ. ರಸ್ತೆ ಅಗಲೀಕರಣ ಮಾಡದಿದ್ದರೂ ಪರಿಹಾರ ಪಾವತಿಸಲಾಗಿದೆ. ನಕಲಿ ದಾಖಲೆ ಸೃಷ್ಟಿಸಿ ಟಿಡಿಆರ್ ಮಂಜೂರು ಮಾಡಿರುವುದು ಎಸಿಬಿ ಕಡತ ಪರಿಶೀಲನೆಯ ವೇಳೆ ಕಂಡುಬಂದಿದೆ ಎಂದು ತಿಳಿಸಿದೆ.

ಕಡತ ಪರಿಶೀಲನೆ

ಹೆಚ್ಚಿನ ಟಿಡಿಆರ್ ನಿಗದಿ:ಪಾಲಿಕೆಯ ಅಧಿಕಾರಿಗಳು ಡೆವಲಪ್​ಮೆಂಟ್ ರೈಟ್ಸ್ ಸರ್ಟಿಫಿಕೇಟ್ ನೀಡಿದ ಬಳಿಕ ಬಹುಮಹಡಿ ಕಟ್ಟಡಗಳ ಎಫ್.ಎ.ಆರ್ ಹೆಚ್ಚಿಸಬೇಕಾಗುತ್ತದೆ. ಆದರೆ, ಡಿಆರ್​​​ಸಿ ಹೆಚ್ಚಿನ ಟಿಡಿಆರ್ ನಿಗದಿಪಡಿಸಿ ಕೋಟ್ಯಂತರ ರೂಪಾಯಿ ಮೊತ್ತದ ಅವ್ಯವಹಾರ ನಡೆಸಿರುವುದು ದಾಖಲೆ ಶೋಧನೆ ಸಂದರ್ಭದಲ್ಲಿ ಕಂಡುಬಂದಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದೆ.

ದಾಖಲೆಗಳಲ್ಲಿ ಲೋಪದೋಷವಿದ್ದರೂ ಜಾಣ ಮೌನ: ಮುಖ್ಯ ಆಯುಕ್ತರ ಅಡಿಯಲ್ಲಿ ಪ್ರಧಾನ ಎಂಜಿನಿಯರ್ ನೇತೃತ್ವದಲ್ಲಿ ತಾಂತ್ರಿಕ ಜಾಗೃತ ಕೋಶವಿದ್ದು, ಆ ಕೋಶಕ್ಕೆ ಬಿಬಿಎಂಪಿಯ ಕಾಮಗಾರಿಗಳು, ಆಂತರಿಕ ಪರಿಶೀಲನೆ ಬಗ್ಗೆ ಬಂದ ಸಮಗ್ರ ವರದಿಗಳಲ್ಲಿ ಸಾಕಷ್ಟು ಲೋಪದೋಷಗಳು ಕಂಡು ಬಂದಿದ್ದರೂ, ಈ ಬಗ್ಗೆ ಸಂಬಂಧಿಸಿದ ಯಾವುದೇ ಕ್ರಮವಹಿಸಿಲ್ಲ. ದಾಖಲೆ ಮತ್ತು ಕಡತಗಳನ್ನು ಸೃಷ್ಟಿಸಿ ಟಿಡಿಆರ್ ಮಂಜೂರು ಮಾಡಲಾಗಿರುವುದು ಎಸಿಬಿ ಪರಿಶೀಲನೆ ವೇಳೆ ಕಂಡುಬಂದಿದೆ.

ಕಡತ ಪರಿಶೀಲನೆ

ಕಟ್ಟಡ ಪೂರ್ಣಗೊಳ್ಳುವ ಮುನ್ನವೇ ಸರ್ಟಿಫಿಕೇಟ್ ವಿತರಣೆ: ಕೆರೆ ಮತ್ತು ಬಫರ್ ಜೋನ್​ಗಳಲ್ಲಿ ಅನಧಿಕೃತವಾಗಿ ಅಪಾರ್ಟ್​ಮೆಂಟ್​ಗಳನ್ನು ನಿರ್ಮಾಣ ಮಾಡಲು ಸ್ಥಳ ಪರಿಶೀಲನೆ ಮಾಡದೇ ನಕ್ಷೆಯನ್ನು ಮಂಜೂರು ಮಾಡಿ ಖಾತೆ ಸೃಷ್ಟಿಸಲಾಗಿದೆ. ಕೆಲವು ನಿರ್ಮಾಣ ಹಂತದಲ್ಲಿರುವ ಕಟ್ಟಡಗಳಿಗೆ ಆ ಕಟ್ಟಡ ಪೂರ್ಣವಾಗುವ ಮುನ್ನವೇ ಸ್ವಾಧೀನ ಪ್ರಮಾಣಪತ್ರ (ಒಸಿ) ನೀಡಲಾಗಿದೆ. 3 ಅಂತಸ್ತಿನ ಕಟ್ಟಡ ನಿರ್ಮಾಣಕ್ಕೆ ಅನುಮತಿ ಪಡೆದು 6 ಅಂತಸ್ತಿನ ಕಟ್ಟಡ ನಿರ್ಮಿಸಿದರೂ ಪಾಲಿಕೆ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ.

10 ಮಹಡಿಗಳಿಗಿಂತ ಮೇಲ್ಪಟ್ಟ ಹಾಗೂ 2 ಎಕರೆಗಿಂತಲೂ ಹೆಚ್ಚಿನ ವಿಸ್ತೀರ್ಣದಲ್ಲಿ ಕಟ್ಟಲಾಗಿರುವ ಅಪಾರ್ಟ್​ಮೆಂಟ್ ಅಥವಾ ಕಟ್ಟಡಗಳಿಗೆ ಸಂಬಂಧಿಸಿದ ಕಡತಗಳನ್ನು ಪರಿಶೀಲಿಸಲಾಗುತ್ತಿದೆ. ಇವುಗಳಿಂದ ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ತೆರಿಗೆ ಬರಬೇಕಿರುವುದು ಮೇಲ್ನೋಟಕ್ಕೆ ಪತ್ತೆಯಾಗಿವೆ ಎಂದು ತಿಳಿಸಿದೆ.

ವಾಣಿಜ್ಯ ಸಂಕೀರ್ಣಗಳಿಗೆ ಕಡಿಮೆ ತೆರಿಗೆ: ಬಿಬಿಎಂಪಿಯ ವಲಯ ಕಚೇರಿಗಳ ವ್ಯಾಪ್ತಿಯಲ್ಲಿನ ವಾಣಿಜ್ಯ ಸಂಕೀರ್ಣಗಳಿಗೆ ಹಾಗೂ ವಸತಿ ಉದ್ದೇಶಿತ ಸ್ವತ್ತುಗಳಿಗೆ ಕಡಿಮೆ ಆಸ್ತಿ ತೆರಿಗೆ ವಿಧಿಸಲಾಗುತ್ತಿದೆ. ಬಹುಮಹಡಿ, ಸಾಫ್ಟ್​ವೇರ್ ಮತ್ತು ಬಾಡಿಗೆ ಉದ್ದೇಶಕ್ಕಾಗಿ ನಿರ್ಮಾಣ ಮಾಡಿರುವ ಕಟ್ಟಡಗಳನ್ನು ವಸತಿ ಉದ್ದೇಶದ ಸ್ವತ್ತುಗಳೆಂದು ಪರಿಗಣಿಸಿ ಕಡಿಮೆ ತೆರಿಗೆ ನಿಗದಿಪಡಿಸಲಾಗಿದೆ. ಹೊಸದಾಗಿ ಕಟ್ಟಿರುವ ವಾಣಿಜ್ಯ ಸಂಕೀರ್ಣಗಳಿಗೆ ಹಳೆಯ ತೆರಿಗೆ ನಿಗದಿ ಮಾಡಿ ಆ ಮೂಲಕ ಪಾಲಿಕೆಗೆ ಕೋಟ್ಯಂತರ ರೂಪಾಯಿ ನಷ್ಟ ಉಂಟು ಮಾಡಿರುವುದು ಪತ್ತೆಯಾಗಿದೆ.

ಕಡತ ಪರಿಶೀಲನೆ

ಪೆಂಟ್ ಹೌಸ್ ಅಕ್ರಮ: ತೆರಿಗೆ ನಿಗದಿಪಡಿಸುವ ವಿಷಯಕ್ಕೆ ಸಂಬಂಧಿಸಿದಂತೆ ಕಾನೂನು ಬಾಹಿರವಾಗಿ ಕ್ರಮ ಕೈಗೊಂಡು ಬಿಬಿಎಂಪಿಗೆ 217 ಕೋಟಿ ರೂಪಾಯಿ ನಷ್ಟ ಉಂಟು ಮಾಡಿದ 7 ಕಡತಗಳನ್ನು ಎಸಿಬಿ ಅಧಿಕಾರಿಗಳು ತಮ್ಮ ವಶಕ್ಕೆ ಪಡೆದು ಪರಿಶೀಲನೆ ನಡೆಸಿದ್ದಾರೆ. ನಗರದ ಕೆಲವೊಂದು ಕಡೆಗಳಲ್ಲಿ ಪೆಂಟ್​ಹೌಸ್ ನಿರ್ಮಿಸಿದರೂ ಪಾಲಿಕೆಗೆ ತೆರಿಗೆ ಹಣ ಪಾವತಿಸದೆ ಅಪಾರ ನಷ್ಟ ಉಂಟಾಗಿರುವುದು ಶೋಧನೆಯ ವೇಳೆ ಬಹಿರಂಗವಾಗಿದೆ.

ಬೃಹತ್ ನೀರುಗಾಲುವೆ ವಿಭಾಗದಲ್ಲಿ ನಗದು ಪತ್ತೆ: ಪಾಲಿಕೆಯ ಬೃಹತ್ ನೀರುಗಾಲುವೆ ವಿಭಾಗದ ಸಹಾಯಕ ಅಭಿಯಂತರರ ಕಚೇರಿಯಲ್ಲಿ 1.18 ಲಕ್ಷ ರೂ. ಸೂಕ್ತ ದಾಖಲೆಗಳಿಲ್ಲದ ನಗದು ಹಣ ಪತ್ತೆಯಾಗಿದ್ದು, ವಶಕ್ಕೆ ಪಡೆಯಲಾಗಿದೆ . 2017ನೇ ಇಸ್ವಿಯಿಂದ ಇಲ್ಲಿಯ ತನಕ 1,050 ಕೋಟಿ ರೂ. ಮೌಲ್ಯದ ಟೆಂಡರ್ ಕಾಮಗಾರಿಗಳ ಫೇಕ್ ದಾಖಲೆ ಸೃಷ್ಟಿಸಲಾಗಿದೆ ಎಂದು ತಿಳಿಸಿದೆ.

ಘನತ್ಯಾಜ್ಯ ನಿರ್ವಹಣಾ ವಿಭಾಗದಲ್ಲಿ 100 ಕೋಟಿ ಅವ್ಯವಹಾರ:ಪಾಲಿಕೆಯ ಘನತ್ಯಾಜ್ಯ ನಿರ್ವಹಣಾ ವಿಭಾಗದಲ್ಲಿ 2014-15ನೇ ಸಾಲಿನ ಲೆಕ್ಕಪರಿಶೋಧನಾ ವರದಿಯ ಪ್ರಕಾರ, 75 ಕೋಟಿ ರೂ. ಹೆಚ್ಚುವರಿ ಬಿಲ್ ಆಗಿರುವ ಬಗ್ಗೆ ವರದಿಯಲ್ಲಿ ನಮೂದಿಸಲಾಗಿದೆ. ಆದರೂ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡಿಲ್ಲ. ಅಂದಾಜಿನ ಪ್ರಕಾರ, ಘನತ್ಯಾಜ್ಯ ನಿರ್ವಹಣಾ ವಿಭಾಗದಲ್ಲಿ 100 ಕೋಟಿ ರೂ. ಹೆಚ್ಚು ಅವ್ಯವಹಾರ ನಡೆದಿರುವ ಬಗ್ಗೆ ಮಾಹಿತಿಯಿದ್ದು, ಕಡತ ಪರಿಶೀಲನಾ ಕಾರ್ಯ ನಡೆಯುತ್ತಿದೆ ಎಂದು ಹೇಳಿದೆ.

ಹಣಕಾಸು ವಿಭಾಗದಲ್ಲಿ ಹಲವು ವರ್ಷಗಳಿಂದ ಟೆಂಡರ್ ಅವ್ಯವಹಾರ:ಹಣಕಾಸು ವಿಭಾಗದಲ್ಲಿ ಹಲವು ವರ್ಷಗಳಿಂದ ಭಾರಿ ಮೊತ್ತದ ಟೆಂಡರ್ ಅವ್ಯವಹಾರ ಮೇಲ್ನೋಟಕ್ಕೆ ಕಂಡುಬಂದಿದೆ. ದೊಡ್ಡ ಮೊತ್ತದ ಕಾಮಗಾರಿ ನಿರ್ವಹಿಸುವ ಗುತ್ತಿಗೆದಾರರಿಗೆ ಬಿಲ್ ಪಾವತಿಸಿ, ಸಣ್ಣ ಮೊತ್ತದ ಕಾಮಗಾರಿ ನಡೆಸಿದ ಕಾಂಟ್ರಾಕ್ಟರ್​ಗಳಿಗೆ ಹಣ ಪಾವತಿಸಿದೆ ಬಾಕಿ ಉಳಿಸಿಕೊಳ್ಳಲಾಗಿದೆ.

ABOUT THE AUTHOR

...view details