ಬೆಂಗಳೂರು:ತನಗೆ ಸಿಗದಿದ್ದ ಹುಡುಗಿ ಬೇರೆ ಯಾರಿಗೂ ಸಿಗಬಾರದು ಎಂದು, ಪ್ರೇಮಿಯೊಬ್ಬ ತನ್ನ ಪ್ರೇಯಸಿಗೆ ಮಚ್ಚಿನ ಏಟು ಕೊಟ್ಟು ನಂತರದಲ್ಲಿ ತಾನು ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಕುರಿತಾಗಿ ಅನ್ನಪೂರ್ಣೇಶ್ವರಿ ನಗರ ಪೊಲೀಸರು ತನಿಖೆಯನ್ನು ಕೈಗೊಂಡಿದ್ದು, ತನಿಖೆಯಲ್ಲಿ ಕೆಲ ವಿಚಾರಗಳು ಬಯಲಿಗೆ ಬಂದಿವೆ.
ರಾಜ್ಯ ಮಟ್ಟದ ಕಬಡ್ಡಿ ಆಟಗಾರನಾಗಿದ್ದ ಗಿರೀಶ್, ಯುವತಿಯೊಬ್ಬಳನ್ನು ಮೂರು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದ. ಇಬ್ಬರು ಕೂಡ ಮಂಡ್ಯದ ನಿವಾಸಿಗಳಾಗಿದ್ದು, ಐದಾರು ತಿಂಗಳ ಹಿಂದೆ ಇಬ್ಬರು ಮನೆಯವರ ಭಯಕ್ಕೆ ಹೆದರಿ ಓಡಿ ಹೋಗಿದ್ದರು.
ಬಳಿಕ ಯುವತಿಗೆ ಗಿರೀಶ್ನೊಂದಿಗೆ ಮದುವೆ ಮಾಡಿಸುವುದಾಗಿ ನಂಬಿಸಿ, ಸಂಬಂಧಿಕರೊಬ್ಬರು ವಾಪಸ್ ಕರೆಸಿದ್ದರು. ಆಗ ಯುವತಿಯನ್ನು ಮಂಡ್ಯದ ಬದಲು ಬೆಂಗಳೂರಿನ ಸಂಬಂಧಿಕರ ಮನೆಯಲ್ಲಿರಿಸಿದ್ದರು. ಬಳಿಕ ಆಕೆಯ ಕುಟುಂಬಸ್ಥರು ಇಬ್ಬರನ್ನು ಬೇರೆ ಮಾಡಿದ್ದರು.
ಕಬಡ್ಡಿ ಆಟಗಾರನನ್ನು ಪಾಗಲ್ ಮಾಡಿದ ಪ್ರಿಯತಮೆ ಹೆಚ್ಚಿನ ಓದಿಗಾಗಿ: ಶಾಕಿಂಗ್: ಬೆಂಗಳೂರಲ್ಲಿ ಹಾಡಹಗಲೇ ಪ್ರೇಯಸಿ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ ಪಾಗಲ್ ಪ್ರೇಮಿ!
ಬಳಿಕ ಪ್ರೇಯಸಿಯ ಸಂಪರ್ಕವಿಲ್ಲದೇ ಹುಚ್ಚನಂತಾಗಿ ಕುಗ್ಗಿ ಹೋಗಿದ್ದ ಗಿರೀಶ್, ಒಂದು ತಿಂಗಳ ಹಿಂದೆಯೇ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದ. ಆದರೆ ಪ್ರೇಯಸಿಯು ಮೂರು ವರ್ಷದ ಪ್ರೀತಿಗೆ ಎಳ್ಳು ನೀರು ಬಿಟ್ಟು, ಬೇರೆ ಯುವಕನ ಜೊತೆ ಮದುವೆಯಾಗಲು ರೆಡಿಯಾಗಿದ್ದಳು.
ಹೀಗಾಗಿ ನಿನ್ನೆ ಹುಡುಗನನ್ನು ನೋಡಲು ಹೊರಟು ಹೊರಗಡೆ ಬಂದಿದ್ದಳು. ಬೇರೆ ಹುಡುಗನ ಜೊತೆ ತನ್ನ ಪ್ರೇಯಸಿ ಮದುವೆಯಾಗಬಾರದು. ಆತನ ಪರಿಚಯವಾಗುವ ಮೊದಲೇ ಪ್ರಿಯತಮೆಯನ್ನು ಮುಗಿಸಬೇಕೆಂದು ಮಚ್ಚಿನಿಂದ ದಾಳಿ ಮಾಡಿದ್ದಾನೆ. ನಂತರ ತಾವರೆಕೆರೆಯ ಬಳಿ ವಿಷ ಸೇವಿಸಿ ಗಿರೀಶ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸದ್ಯ ಆ ಯುವತಿ ಖಾಸಗಿ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದು, ತನಿಖೆ ಮುಂದುವರೆದಿದೆ.