ಬೆಂಗಳೂರು: ಅಪರಿಚಿತರು ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಪಪ್ಪಾ, ಹೆಲ್ಪ್ ಮೀ ಎಂದು ತಂದೆಗೆ ಮೊಬೈಲ್ನಲ್ಲಿ ಸಂದೇಶ ಕಳುಹಿಸಿದ ಬಾಲಕನ ಅಸಲಿ ವಿಚಾರವನ್ನು ಇದೀಗ ಪೊಲೀಸರು ಬಯಲಿಗೆಳೆದಿದ್ದಾರೆ.
ಮಗನೊಬ್ಬ ತಂದೆಗೆ ನನ್ನ ಮೇಲೆ ಯಾರೋ ಅಪರಿಚಿತರು ಹಲ್ಲೆ ಮಾಡಿದ್ದಾರೆ ಎಂದು ಮೊಬೈಲ್ನಲ್ಲಿ ಮೆಸೇಜ್ ಮಾಡಿದ ಬಳಿಕ ಆತಂಕಗೊಂಡ ಬಾಲಕನ ತಂದೆ ಜೀವನ್ ಭೀಮಾನಗರ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಕಾರ್ಯಪ್ರವೃತ್ತರಾದ ಪೊಲೀಸರು ತನಿಖೆ ನಡೆಸಿದಾಗ ಬಾಲಕನಾಡಿದ ನಾಟಕ ಬಹಿರಂಗವಾಗಿದೆ.
ಕೇರಳದ ಕೊಚ್ಚಿಯ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿರುವ ಸ್ಯಾಮುಯೆಲ್ ನಿನಾನ್ ಎಂಬುವರು ಸಂಬಂಧಿಕರೊಬ್ಬರ ಮದುವೆಯಲ್ಲಿ ಭಾಗಿಯಾಗಲು ಮಗನ ಜೊತೆ ಜೀವನ ಭೀಮಾನಗರದಲ್ಲಿರುವ ತಾತನ ಮನೆಗೆ ಕಳೆದ ವಾರ ಬಂದಿದ್ದರು. ಮಗನಿಗೆ ಶಾಲೆ ರಜೆ ಇದ್ದ ಕಾರಣ ತಾತನ ಮನೆಯಲ್ಲಿ ಬಿಟ್ಟು ಮತ್ತೆ ಕೇರಳಕ್ಕೆ ಬಂದಿದ್ದರು. ಡಿ. 31 ರಂದು ತಮ್ಮ ಮಗನನ್ನು ಹೆದರಿಸಿ ಅಪರಿಚಿತರು ಹಲ್ಲೆ ಮಾಡಿದ್ದಾರೆ ಎಂದು ಮಗನ ಪರವಾಗಿ ತಂದೆ ಸ್ಯಾಮುಯೆಲ್ ಪೊಲೀಸರಿಗೆ ದೂರು ನೀಡಿದ್ದರು.
ಹೊಸ ಕಥೆ ಕಟ್ಟಿದ ಬಾಲಕ:
ಮದುವೆ ಸಂಬಂಧ ತಾತನ ನಿವಾಸದಲ್ಲಿ ಉಳಿದುಕೊಂಡಿದ್ದೆ. ಡಿ.31ರಂದು ಯಾರೋ ಅಪರಿಚಿತರು ಮನೆಗೆ ಬಂದು ಬಾಗಿಲು ಹಾಕಿ ಮನೆಯಿಂದ ಹೊರ ಹೋಗದಂತೆ ನನಗೆ ಮತ್ತು ಬರುವ ಔಷಧಿಯನ್ನು ಹಣ್ಣಿನ ರಸಕ್ಕೆ ಬೆರೆಸಿ ಬಲವಂತವಾಗಿ ಕುಡಿಸಿದರು. ಬಳಿಕ ಸ್ನಾನದ ಮನೆಗೆ ಕರೆದುಕೊಂಡು ಹೋಗಿ ತಲೆ ಮೇಲೆ ನೀರು ಹಾಕಿದ್ದಾರೆ. ಪ್ರಜ್ಞೆ ಬರದಿದ್ದನ್ನು ಕಂಡು ಆರೋಪಿಗಳು ಭಯಪಟ್ಟು ವಶಕ್ಕೆ ಪಡೆದುಕೊಂಡಿದ್ದ ಮೊಬೈಲ್ ಮನೆಯಲ್ಲೇ ಬಿಟ್ಟು ಪರಾರಿಯಾಗಿದ್ದಾರೆ. ಪ್ರಜ್ಞೆ ಬಂದ ಬಳಿಕ ಅದೇ ಮೊಬೈಲ್ನಿಂದ ಕೇರಳದಲ್ಲಿರುವ ಅಪ್ಪನಿಗೆ ಪಪ್ಪಾ ಹೆಲ್ಪ್ ಮೀ ಎಂದು ಸಂದೇಶ ರವಾನಿಸಿದೆ. ಮಗನ ಸಂದೇಶ ನೋಡುತ್ತಿದ್ದಂತೆ ಆತಂಕಗೊಂಡ ತಂದೆ ಪರಿಚಿತರಿಗೆ ಕರೆ ಮಾಡಿ ಮಾಹಿತಿ ನೀಡಿ ಅವರ ಮೂಲಕ ಆಸ್ಪತ್ರೆಗೆ ದಾಖಲಿಸಿದ್ದರು. ಬಳಿಕ ಬೆಂಗಳೂರಿಗೆ ಬಂದು ಪೊಲೀಸರಿಗೆ ದೂರು ನೀಡಿದರು ಎಂದು ಬಾಲಕ ಹೇಳಿದ್ದಾನೆ.
ಓದಿ: ನಾನು ರಾಗಿಣಿಯನ್ನು ಇಷ್ಟಪಟ್ಟಿದ್ದು ನಿಜ, ಪ್ರಪೋಸ್ ಮಾಡಿದ್ದೂ ನಿಜ: ಶಿವಪ್ರಕಾಶ್ ಚಿಪ್ಪಿ
ತನಿಖೆ ವೇಳೆಯೇ ಮದ್ಯದ ಮಿಕ್ಸ್ ಕಥೆ:
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಾಲಕನನ್ನು ಪ್ರಶ್ನಿಸಿದಾಗ ಅಸಲಿ ವಿಚಾರ ಬೆಳಕಿಗೆ ಬಂದಿದೆ. ತನಿಖೆ ವೇಳೆ ಎಲ್ಲಿ ನಿಜ ಗೊತ್ತಾಗುತ್ತೆ ಎಂದು ಹೆದರಿ ಪೊಲೀಸರ ಬಳಿ ಎಲ್ಲವನ್ನೂ ಹೇಳಿದ್ದಾನೆ. ತನಗೆ ಕುಡಿಯುವ ಚಟ ಇತ್ತು. ಕುಡಿಯುವ ಆಸೆಯಿದ್ದ ಕಾರಣ, ತಾತ ಮನೆಯಲ್ಲಿ ಇಲ್ಲದಿರುವಾಗ ಮನೆಗೆ ಮೂರು ವೆರೈಟಿ ಬ್ರ್ಯಾಂಡ್ನ ಮದ್ಯ ತಂದಿದ್ದೆ. ಮೂರನ್ನು ಮಿಶ್ರಣ ಮಾಡಿ ಕುಡಿದುಬಿಟ್ಟೆ. ಆಗ ನನಗೆ ತಲೆ ಸುತ್ತುವ ಹಾಗೆ ಆಯ್ತು. ಎಲ್ಲಿ ತಾತನಿಗೆ ಗೊತ್ತಾಗುತ್ತೋ ಅಂತ ಹೆದರಿ ತಂದೆಗೆ ಪಪ್ಪಾ ಹೆಲ್ಪ್ ಮೀ ಎಂದು ಮೆಸೇಜ್ ಮಾಡಿದ್ದೆ. ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಹೇಳಿದರೆ ಸುಮ್ಮನಾಗುತ್ತಾರೆ ಎಂದು ಅಂದುಕೊಂಡು ಈ ರೀತಿಯ ಸುಳ್ಳು ಹೇಳಿದೆ ಎಂದು ಹೇಳಿಕೆ ನೀಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.