ಬೆಂಗಳೂರು :ಬಿಎಂಟಿಸಿ ಬಸ್ ಹರಿದ ಪರಿಣಾಮ ಮೂರು ವರ್ಷದ ಗಂಡು ಮಗು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಭಾನುವಾರ ಸಂಜೆ ಗಾರ್ವೇಭಾವಿಪಾಳ್ಯ ಜಂಕ್ಷನ್ನಲ್ಲಿ ನಡೆದಿದೆ. ಆಯಾನ್ ಪಾಷಾ (3) ಮೃತ ಮಗು ಎಂದು ಗುರುತಿಸಲಾಗಿದೆ.
ಆಯಾನ್ ಪಾಷಾ ದೊಡ್ಡಮ್ಮ ರುಸ್ಮಾರೊಂದಿಗೆ ಭಾನುವಾರ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದನು. ಈ ವೇಳೆ ಹಿಂಬದಿಯಿಂದ ಬಂದ ಬಿಎಂಟಿಸಿ ಬಸ್ ಇವರ ವಾಹನಕ್ಕೆ ಡಿಕ್ಕಿಯಾಗಿದೆ. ದ್ವಿಚಕ್ರ ವಾಹನದ ಹಿಂಬದಿಯಲ್ಲಿ ಕುಳಿತಿದ್ದ ಮಗು ಕೆಳಗೆ ಬಿದ್ದಿದ್ದು, ಈ ವೇಳೆ ಬಸ್ನ ಚಕ್ರ ಮಗುವಿನ ತಲೆ ಮೇಲೆ ಹರಿದಿದೆ.
ತಲೆ ಮೇಲೆ ಬಸ್ ಹರಿದ ಪರಿಣಾಮ ಮಗು ಸ್ಥಳದಲ್ಲೇ ಸಾವನ್ನಪ್ಪಿದೆ. ಕೂಡಲೇ ದೊಡ್ಡಮ್ಮ ರುಸ್ಮಾ ಅವರು ಮಗುವನ್ನು ತಮ್ಮ ಮಡಿಲಿನಲ್ಲಿ ಎತ್ತುಕೊಂಡು ರೋದಿಸತೊಡಗಿದರು. ಘಟನೆ ಸಂಬಂಧ ಹುಳಿಮಾವು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಿಎಂಟಿಸಿ ಚಾಲಕನನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆ ಕುರಿತು ಇನ್ನಷ್ಟು ಮಾಹಿತಿ ಲಭ್ಯವಾಗಬೇಕಿದೆ.
ಓದಿ:ನದಿಯಲ್ಲಿ ತೇಲಿ ಬಂತು ಪೆಟ್ಟಿಗೆ: ಕುತೂಹಲದಿಂದ ತೆರೆದಾಗ ಫಿರಂಗಿ ಬ್ಲಾಸ್ಟ್.. ಬಾಲಕ ಸಾವು, ಐವರ ಸ್ಥಿತಿ ಗಂಭೀರ
ಲಾರಿ ಗುದ್ದಿ ಓರ್ವ ಸಾವು:ಬೈಕ್ ಸವಾರನಿಗೆ ಹಿಂಬದಿಯಿಂದ ಲಾರಿಯೊಂದು ವೇಗವಾಗಿ ಬಂದು ಗುದ್ದಿದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಎಲೆಕ್ಟ್ರಾನಿಕ್ ಸಿಟಿ ನೈಸ್ ರಸ್ತೆಯಲ್ಲಿ ಸೋಮವಾರ ಮಧ್ಯಾಹ್ನ ಸಂಭವಿಸಿದೆ. ರಮೇಶ್ ನಾಯ್ಕ್ (37) ಮೃತ ಬೈಕ್ ಸವಾರ. ಅಪಘಾತದಿಂದ ಸಂಚಾರ ದಟ್ಟಣೆ ಉಂಟಾಗಿತ್ತು. ಸುದ್ದಿ ತಿಳಿದು ಸ್ಥಳಕ್ಕೆ ಬಂದ ಎಲೆಕ್ಟ್ರಾನಿಕ್ ಸಿಟಿ ಸಂಚಾರ ಪೊಲೀಸರು, ಮೃತದೇಹವನ್ನು ಕೋರಮಂಗಲ ಸೆಂಟ್ ಜಾನ್ಸ್ ಆಸ್ಪತ್ರೆಗೆ ರವಾನಿಸಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಲಾರಿ ಚಾಲಕನನ್ನು ಬಂಧಿಸಲಾಗಿದ್ದು, ಎಲೆಕ್ಟ್ರಾನಿಕ್ ಸಿಟಿ ಸಂಚಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಇತ್ತೀಚಿನ ಘಟನೆ- ನಾಲ್ಕು ವರ್ಷದ ಬಾಲಕ ಸಾವು: ಗುಡಿಸಲಿಗೆ ಆಧಾರವಾಗಿ ಸುತ್ತಲೂ ನಿಲ್ಲಿಸಿದ್ದ ಉದ್ದದ ಕಲ್ಲು (ಬಂಡೆ) ಕುಸಿದ ಪರಿಣಾಮ ನಾಲ್ಕು ವರ್ಷದ ಬಾಲಕ ಮೃತಪಟ್ಟಿದ್ದ ಘಟನೆ ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ರಾಯಪುರ ಗ್ರಾಮದಲ್ಲಿ ಸೆಪ್ಟಂಬರ್ 25 ರಂದು ನಡೆದಿತ್ತು.
ಶಾಂತಕುಮಾರ್ - ಮಲ್ಲೇಶ್ವರಿ ಪುತ್ರ ತೇಜಸ್ ಮೃತ ಬಾಲಕ. ಆಕಸ್ಮಿಕವಾಗಿ ತೆಂಗಿನ ಮರ ಗುಡಿಸಲಿನ ಮೇಲೆ ಬಿದ್ದಿದ್ದು, ಗುಡಿಸಲು ತೆಂಗಿನ ಮರದ ನಡುವೆ ಎಮ್ಮೆ ಸಿಲುಕಿಕೊಂಡಿತ್ತು. ಎಮ್ಮೆ ತನ್ನ ಪ್ರಾಣ ಕಾಪಾಡಿಕೊಳ್ಳಲು ಗುಡಿಸಲಿಗೆ ಉದ್ದದ ಕಲ್ಲಿನ ಕಡೆಗೆ (ಬಂಡೆ) ತಳ್ಳಿದ್ದರಿಂದ ಕಲ್ಲಿಗೆ ಬಾಲಕ ಸಿಲುಕಿ ಮೃತಪಟ್ಟಿದ್ದ. ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದರು. ಬಾಲಕನ ಕುಟುಂಬಕ್ಕೆ ಸಾಂತ್ವನ ಹೇಳಿ ಎರಡು ಲಕ್ಷ ರೂ. ನೆರವು ನೀಡಿದ್ದರು.