ಬೆಂಗಳೂರು:ಆಯುಷ್ ಇಲಾಖೆ ವತಿಯಿಂದ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಕಾರ್ಯಕ್ರಮವನ್ನು ಬುಧವಾರ ಬೆಳಗ್ಗೆ 6.30 ರಿಂದ 8.30 ಗಂಟೆಯವರೆಗೆ ವಿಧಾನಸೌಧದ ಮುಂಭಾಗ ಆಚರಿಸಲಾಗುತ್ತಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ರಾಜ್ಯಪಾಲ ಥಾವರ್‌ಚಂದ್ ಗೆಲ್ಲೋಟ್ ನೆರವೇರಿಸುವರು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕೇಂದ್ರ ಸರ್ಕಾರದ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಹಾಗೂ ಮಾಹಿತಿ ತಂತ್ರಜ್ಞಾನ ರಾಜ್ಯ ಸಚಿವ ಎಂ. ರಾಜೀವ್ ಚಂದ್ರಶೇಖರ್ ಪಾಲ್ಗೊಳ್ಳಲಿದ್ದಾರೆ. ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಹಾಗೂ ಅನೇಕ ಹಿರಿಯ ಸಚಿವರು, ಸಂಸದರು, ವಿಧಾನ ಸಭೆ ಸದಸ್ಯರುಗಳು ಹಾಗೂ ವಿಧಾನ ಪರಿಷತ್ ಸದಸ್ಯರುಗಳು ಹಾಗೂ ಇನ್ನಿತರ ಗಣ್ಯರು ಭಾಗಿಯಾಗಲಿದ್ದಾರೆ.
ವಿಶೇಷ ಆಹ್ವಾನಿತರಾಗಿ ಅಂತಾರಾಷ್ಟ್ರೀಯ ಕ್ರಿಕೆಟ್ ಆಟಗಾರ ಬಿ.ಕೆ. ವೆಂಕಟೇಶ್ ಪ್ರಸಾದ್, ಅಂತಾರಾಷ್ಟ್ರೀಯ ಅಥ್ಲೀಟ್ ಅಂಜು ಚಾರ್ಜ್, ಚಲನಚಿತ್ರ ಅಭಿನೇತ್ರಿಯರಾದ ಭಾವನಾ ರಾಮಣ್ಣ, ಅಧಿತಿ ಪ್ರಭುದೇವ ಉಪಸ್ಥಿತಿ ಇರಲಿದೆ. ಯೋಗ ಕ್ಷೇತ್ರದಲ್ಲಿ ವಿಶೇಷ ಸಾಧನೆಗೈದ ಆಗಸ್ ಇಂದ್ರ ಉದಯನ್, ಗುರೂಜಿ ಬಸವರಾಜ ಹಡಗಲ, ಯೋಗಿ ಮನಮೋಹನ ಸಿಂಗ್ ಭಂಡಾರಿ, ವಿಕ್ಟರ್ ಟ್ರುವಿಯಾನೋ, ಡಾ.ಪ್ರಕಾಶ್ ಆಮೆ, ಡಾ.ಮಂದಾಕೀಸಿ ಆಮೆ ಹಾಗೂ ರವೀಂದ್ರ ಸಾಹೊ ಪಾಲ್ಗೊಳ್ಳಲಿದ್ದಾರೆ. ವಿವಿಧ ಸರ್ಕಾರಿ ಇಲಾಖೆಗಳು ಹಾಗೂ ಖಾಸಗಿ ಸಂಘ, ಸಂಸ್ಥೆಗಳ ಸುಮಾರು 2,500ರಿಂದ 3,000ಕ್ಕೂ ಅಧಿಕ ಯೋಗಾಸಕ್ತರು ಈ ಕಾರ್ಯಕ್ರಮದಲ್ಲಿ ಇರಲಿದ್ದಾರೆ ಎಂದು ಆಯುಷ್ ಇಲಾಖೆ ಪ್ರಕಟಣೆ ತಿಳಿಸಿದೆ.