ಬೆಂಗಳೂರು :ಹಿಜಾಬ್-ಕೇಸರಿ ಶಾಲು ವಿವಾದದಿಂದ ರಾಜ್ಯಾದ್ಯಂತ 1-8ನೇ ತರಗತಿ ಹೊರತುಪಡಿಸಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿತ್ತು. ಈಗಾಗಲೇ ಕೋವಿಡ್ನಿಂದಾಗಿ ಮಕ್ಕಳ ಕಲಿಕೆಗೆ ಧಕ್ಕೆ ಆಗಿರುವುದನ್ನು ಗಮನದಲ್ಲಿಟ್ಟುಕೊಂಡು ಹೈಕೋರ್ಟ್ ಶಾಲಾ-ಕಾಲೇಜು ಆರಂಭಿಸುವಂತೆ ಸೂಚನೆ ನೀಡಿದೆ. ಅದರಂತೆ ಮೊದಲ ಭಾಗವಾಗಿ ಇಂದಿನಿಂದ 9 ಮತ್ತು 10ನೇ ತರಗತಿ ಆರಂಭವಾಗಲಿವೆ.
ಬಿಗಿ ಪೊಲೀಸ್ ಭದ್ರತೆಯಲ್ಲಿ ಶಾಲೆ ಆರಂಭವಾಗಲಿದ್ದು, ಹೈಸ್ಕೂಲ್‌ಗಳ ಬಳಿ ಕಟ್ಟೆಚ್ಚರ ವಹಿಸುವಂತೆ ನಿರ್ದೇಶನ ನೀಡಲಾಗಿದೆ. ಮುಖ್ಯವಾಗಿ ಶಾಲಾ ಆವರಣದಲ್ಲಿ ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶ ಕಲ್ಪಿಸುವುದು. ವಿದ್ಯಾರ್ಥಿಗಳು ಹೊರತುಪಡಿಸಿ, ಬೇರೆ ಯಾರಾದರೂ ಕಂಡು ಬಂದ್ರೆ ಕ್ರಮ ಜರುಗಿಸುವುದು.
ಯಾವುದೇ ಅಹಿತಕರ ಘಟನೆ ನಡೆಯದಂತೆ ಕ್ರಮಕೈಗೊಳ್ಳುವಂತೆ ತಿಳಿಸಲಾಗಿದೆ. ಇನ್ನು ಪ್ರಮುಖವಾಗಿ ವಿದ್ಯಾರ್ಥಿ ಸಂಘಟನೆಗಳ ಮೇಲೆ ನಿಗಾ ವಹಿಸುವಂತೆಯೂ ಸೂಚಿಸಲಾಗಿದೆ.
ಆಯಾ ಜಿಲ್ಲೆಯ ಜಿಲ್ಲಾಧಿಕಾರಿ, ಎಸ್ಪಿ ಹಾಗೂ ಶಿಕ್ಷಣಾಧಿಕಾರಿಗಳಿಗೆ ಸಂಪೂರ್ಣ ಹೊಣೆ ವಹಿಸಲಾಗಿದೆ. ಹಿಜಾಬ್ ಮತ್ತು ಕೇಸರಿ ಶಾಲು ವಿಚಾರ, ಹೆಚ್ಚು ಗಲಾಟೆಯಾದ ಜಿಲ್ಲೆಗಳ ಶಾಲೆಗಳಿಗೆ ಹೆಚ್ಚು ಭದ್ರತೆಗೆ ಒತ್ತು ನೀಡಲಾಗಿದೆ. ವಿವಾದ ಸೃಷ್ಟಿಯಾದ ಉಡುಪಿಯಿಂದ ಹಿಡಿದು ಶಿವಮೊಗ್ಗ, ಬಾಗಲಕೋಟೆ, ಮೈಸೂರು, ಮಂಡ್ಯ, ಬೀದರ್, ಧಾರವಾಡ, ಕೊಪ್ಪಳ, ಚಿತ್ರದುರ್ಗ ಜಿಲ್ಲೆಗಳ ಡಿಸಿ, ಎಸ್ಪಿಗೆ ಭದ್ರತೆಯ ಹೊಣೆ ವಹಿಸಲಾಗಿದೆ. ಅಲ್ಲದೆ, ಶಾಲೆಗಳಿಗೆ ಎಸ್ಪಿ ಭೇಟಿ ನೀಡಬೇಕು.