ಬೆಂಗಳೂರು:ಕೊರೊನಾ ನಿಯಂತ್ರಣಕ್ಕೆ ಎಲ್ಲ ರೀತಿಯ ಕಾರ್ಯತಂತ್ರಗಳನ್ನ ಬಲಪಡಿಸಿದರೂ ಕೂಡ ರಾಜ್ಯದಲ್ಲಿ ಕೇವಲ 24 ಗಂಟೆಗಳಲ್ಲಿ 99 ಹೊಸ ಪಾಸಿಟಿವ್ ಕೇಸ್ ದೃಢಪಟ್ಟಿವೆ.
ಈ ಹಿಂದೆ ಒಂದೇ ದಿನ 69 ಪಾಸಿಟಿವ್ ಕೇಸ್ ದೃಢಪಟ್ಟಿದ್ದು, ದಾಖಲೆಯಾಗಿತ್ತು. ಇದೀಗ ಆ ದಾಖಲೆಯನ್ನು ಉಡೀಸ್ ಮಾಡಿ 99 ಹೊಸ ಪ್ರಕರಣಗಳು ಪತ್ತೆಯಾಗಿವೆ. ಇದರಲ್ಲಿ ಬಹುತೇಕ ಮುಂಬೈ- ಮಹಾರಾಷ್ಟ್ರ ಪ್ರಯಾಣ ಹಿನ್ನೆಲೆ ಹೊಂದಿರುವವರಲ್ಲೇ ಸೋಂಕು ಹೆಚ್ಚು ಕಾಣಿಸಿಕೊಂಡಿದೆ. ಈ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಆತಂಕ ಸೃಷ್ಟಿಯಾಗಿದೆ.
ರಾಜ್ಯದಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 1246ಕ್ಕೆ ಏರಿಕೆ ಕಂಡಿದ್ದು, ಅದರಲ್ಲಿ 530 ಮಂದಿ ಗುಣಮುಖರಾಗಿದ್ದಾರೆ. 12 ಜನರ ಸ್ಥಿತಿ ತೀವ್ರ ಗಂಭೀರವಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ಮುಂದುವರಿದಿದೆ. ಉಳಿದ 678 ಮಂದಿಗೆ ಪ್ರತ್ಯೇಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.
ಮೈಸೂರು ಕೊಡಗಿಗೆ ಮತ್ತೆ ವಕ್ಕರಿಸಿದ ಕೊರೊನಾ:
ಕೊರೊನಾ ಮುಕ್ತವಾಗಿದ್ದ ಮೈಸೂರು ಮತ್ತು ಕೊಡಗಿನಲ್ಲಿ ಇಂದು ಮತ್ತೆ ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. ಕೊಡಗು ಮತ್ತು ಮೈಸೂರಿನಲ್ಲಿ ತಲಾ ಒಂದೊಂದು ಪಾಸಿಟಿವ್ ಕೇಸ್ ಪತ್ತೆಯಾಗಿದ್ದು, ಈ ಕೇಸ್ಗಳು ಮುಂಬೈ- ಮಹಾರಾಷ್ಟ್ರದ ಹಿನ್ನೆಲೆ ಹೊಂದಿವೆ.