ಬೆಂಗಳೂರು: ಸ್ಯಾಂಡಲ್ವುಡ್ ಡ್ರಗ್ಸ್ ಜಾಲ ಬೆನ್ನತ್ತಿರುವ ಪೊಲೀಸರು ಬೆಂಗಳೂರಿನಲ್ಲಿ ನಡೆಯುವ ಡ್ರಗ್ಸ್ ದಂಧೆ ಮೇಲೆ ಹದ್ದಿನ ಕಣ್ಣಿಟ್ಟಿದ್ದು, ಗಾಂಜಾ ಜಪ್ತಿ ಮಾಡುತ್ತಿದ್ದಾರೆ. ಸದ್ಯ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಆರೋಪಿಗಳ ಬೃಹತ್ ಜಾಲ ಪತ್ತೆ ಮಾಡಿ ಸುಮಾರು 50 ಲಕ್ಷ ರೂ. ಮೌಲ್ಯದ 90 ಕೆಜಿ ಗಾಂಜಾ ವಶಪಡಿಸಿಕೊಂಡು 3 ಜನರನ್ನು ಬಂಧಿಸಿದ್ದಾರೆ.
ಸಿಸಿಬಿ ಭರ್ಜರಿ ಬೇಟೆ: 50 ಲಕ್ಷ ರೂ. ಮೌಲ್ಯದ 90 ಕೆಜಿ ಗಾಂಜಾ ಜಪ್ತಿ! - bangalore latest news
ಕಾಡುಗೋಡಿಯ ದೊಡ್ಡ ಬನಹಳ್ಳಿಯ ಸಫಲ್ ಮಾರ್ಕೆಟ್ ಹಿಂಭಾಗ ಇರುವ ವಿಂಧ್ಯಗಿರಿ ಬಿಡಿಎ ಅಪಾರ್ಟ್ಮೆಂಟ್ನಲ್ಲಿ ಶೇಖರಿಸಿಟ್ಟಿದ್ದ ಸುಮಾರು 50 ಲಕ್ಷ ರೂ. ಮೌಲ್ಯದ 90 ಕೆಜಿ ಗಾಂಜಾವನ್ನು ಸಿಸಿಬಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಅಜಾಮ್ ಪಾಷಾ, ಮಸ್ತಾನ್, ಮೊಹಮ್ಮದ್ ಅಬ್ಲಾಸ್ ಬಂಧಿತ ಆರೋಪಿಗಳು. ಕಾಡುಗೋಡಿಯ ದೊಡ್ಡ ಬನಹಳ್ಳಿಯ ಸಫಲ್ ಮಾರ್ಕೆಟ್ ಹಿಂಭಾಗ ಇರುವ ವಿಂಧ್ಯಗಿರಿ ಬಿಡಿಎ ಅಪಾರ್ಟ್ಮೆಂಟ್ನಲ್ಲಿ ವಾಸವಿದ್ದ ಬಂಧಿತ ಆರೋಪಿಗಳು, ಆಂಧ್ರ ಪ್ರದೇಶದ ವಿಶಾಖಪಟ್ಟಣದಿಂದ ನೂರಾರು ಕೆಜಿ ಗಾಂಜಾ ಖರೀದಿಸಿ ತಂದು ಅಪಾರ್ಟ್ಮೆಂಟ್ನಲ್ಲಿ ಶೇಖರಿಸಿ ನಂತರ ಮಾರಾಟ ಮಾಡುತ್ತಿದ್ದರು. ಈ ಮಾಹಿತಿ ಮೇರೆಗೆ ಅಪಾರ್ಟ್ಮೆಂಟ್ ಮೇಲೆ ಸಿಸಿಬಿ ದಾಳಿ ನಡೆಸಿದ್ದು, ಬೃಹತ್ ಪ್ರಮಾಣದ ಗಾಂಜಾ ವಶಪಡಿಸಿಕೊಂಡಿದ್ದಾರೆ.
ಆರೋಪಿಗಳನ್ನು ವಿಚಾರಣೆ ನಡೆಸಿದಾಗ ಆರೋಪಿಗಳು ವಿಲಾಸಿ ಜಿವನಕ್ಕೋಸ್ಕರ ಈ ರೀತಿಯ ಕೃತ್ಯದಲ್ಲಿ ಭಾಗಿಯಾಗಿರುವ ವಿಚಾರ ಬಾಯಿಬಿಟ್ಟಿದ್ದಾರೆ. ಹಾಗೆಯೇ ಆರೋಪಿ ಹಪ್ಪು ಎಂಬಾತ ತಲೆಮರೆಸಿಕೊಂಡಿದ್ದು, ಈತ ಹಾಗೂ ಬಂಧಿತ ಆರೋಪಿಗಳು ಆಂಧ್ರ ಪ್ರದೇಶಕ್ಕೆ ಹೋಗಿ ಅಲ್ಲಿ ಪ್ರವೀಣ್ ಎಂಬಾತನಿಂದ ಗಾಂಜಾ ಖರೀದಿ ಮಾಡಿ ಈಚರ್ ಕ್ಯಾಂಟರ್ ವಾಹನದಲ್ಲಿ ಪೊಲೀಸರ ಕಣ್ತಪ್ಪಿಸಿ ತರುತ್ತಿದ್ದರಂತೆ. ಸಬ್ ಪೆಡ್ಲರ್ ಮುಖಾಂತರ ಬೆಂಗಳೂರು ನಗರ ಹಾಗೂ ಗ್ರಾಮಂತಾರ ಜಿಲ್ಲೆಯ ವಿದ್ಯಾರ್ಥಿಗಳಿಗೆ, ಯುವಕರಿಗೆ ಮಾರಾಟ ಮಾಡುತ್ತಿದ್ದರು. ಸದ್ಯ ಬಂಧಿತ ಆರೋಪಿಗಳಿಂದ 90 ಕೆಜಿ ಗಾಂಜಾ, 3 ಮೊಬೈಲ್ ಫೋನ್, ಇನ್ನೋವಾ ಕಾರು ವಶಪಡಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.