ಕರ್ನಾಟಕ

karnataka

ETV Bharat / state

ಪೀಣ್ಯ ಫ್ಲೈಓವರ್ ಸದೃಢತೆಯ ಪರೀಕ್ಷೆಗೆ 9 ತಿಂಗಳ ಸಮಯ: ಕಳಪೆ ಕಾಮಗಾರಿಗೆ ಸಾರ್ವಜನಿಕರ ಅಸಮಾಧಾನ - public angry for poor work

ಪೀಣ್ಯ ಫ್ಲೈಓವರ್​​​ನಲ್ಲಿ ನಿನ್ನೆಯಿಂದ ಲಘು ವಾಹನಗಳ ಓಡಾಟಕ್ಕೆ ಮಾತ್ರ ಅವಕಾಶ ಮಾಡಿಕೊಡಲಾಗಿದೆ. ಆದ್ರೆ ಇದರ ಪೂರ್ತಿ ಪರೀಕ್ಷೆಗೆ 9 ತಿಂಗಳು ಬೇಕಾಗಿದೆ. ಭಾರತೀಯ ವಿಜ್ಞಾನ ಸಂಸ್ಥೆಯ ತಜ್ಞರು ಮೇಲ್ಸೇತುವೆ ಪರಿಶೀಲನೆ ಮಾಡಿದ್ದು, ವಿವಿಧ ಪರೀಕ್ಷೆಗಳನ್ನು ನಡೆಸಲು 6 ರಿಂದ 9 ತಿಂಗಳು ಬೇಕಾಗಿದೆ ಎಂದಿದ್ದಾರೆ. ಕಳಪೆ ಕಾಮಗಾರಿ ಮಾಡಿರುವುದಕ್ಕೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

Minister of Public Works C.C. Patil
ಪೀಣ್ಯ ಫ್ಲೈಓವರ್ ಸದೃಡತೆಯ ಪರೀಕ್ಷೆಗೆ 9 ತಿಂಗಳ ಸಮಯ

By

Published : Feb 17, 2022, 6:08 PM IST

ಬೆಂಗಳೂರು:ನಗರದಿಂದ ಹಲವು ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಪೀಣ್ಯ ಫ್ಲೈಓವರ್ ರಿಪೇರಿ ಕಾಮಗಾರಿ ಪೂರ್ಣಗೊಂಡಿದ್ದು, ಲಘುವಾಹನಗಳ ಸಂಚಾರಕ್ಕೆ ಫ್ಲೈಓವರ್ ಮುಕ್ತಾವಾಗಿದೆ. ಆದ್ರೆ ಕಳಪೆ ನಿರ್ಮಾಣ ಕಾಮಗಾರಿಗೆ ಸಾರ್ವಜನಿಕ ವಲಯದಲ್ಲಿ ಅಸಮಾಧಾನ ವ್ಯಕ್ತವಾಗಿದೆ.

ಪೀಣ್ಯ ಫ್ಲೈಓವರ್​​​ನಲ್ಲಿ ನಿನ್ನೆಯಿಂದ ಲಘು ವಾಹನಗಳ ಓಡಾಟಕ್ಕೆ ಮಾತ್ರ ಅವಕಾಶ ಮಾಡಿಕೊಡಲಾಗಿದೆ. ಇದರ ಪೂರ್ತಿ ಪರೀಕ್ಷೆಗೆ 9 ತಿಂಗಳು ಬೇಕಾಗಿದೆ. ಕಾರು,ಬೈಕ್‌, ಆಟೋ ಸಂಚಾರಕ್ಕಷ್ಟೇ ಅವಕಾಶ ಕಲ್ಪಿಸಲಾಗಿದೆ. ಭಾರತೀಯ ವಿಜ್ಞಾನ ಸಂಸ್ಥೆಯ ತಜ್ಞರು ಮೇಲ್ಸೇತುವೆ ಪರಿಶೀಲನೆ ಮಾಡಿದ್ದಾರೆ. ವಿವಿಧ ಪರೀಕ್ಷೆಗಳನ್ನು ನಡೆಸಲು 6 ರಿಂದ 9 ತಿಂಗಳು ಬೇಕಾಗಿದೆ. ಪರಿಶೀಲನೆ ನಂತರವಷ್ಟೇ ಭಾರಿ ವಾಹನಕ್ಕೆ ಅವಕಾಶ ಸಿಗಲಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ.

ಈ ಕುರಿತು ರಾಜ್ಯ ಸರ್ಕಾರಕ್ಕೆ ಐಐಎಸ್​ಸಿ ತಜ್ಞರು ರಿಪೋರ್ಟ್​ ನೀಡಿದ್ದಾರೆ. ನಿನ್ನೆ ಮಧ್ಯಾಹ್ನದಿಂದ ಲಘುವಾಹನ ಸಂಚಾರ ಪ್ರಾರಂಭವಾಗಿದೆ. ಮೇಲ್ಸೇತುವೆ ಹೆಚ್ಚು ಭಾರ ತಡೆದುಕೊಳ್ಳುತ್ತದೆಯೇ? ಬಾಗಿರುವ ಕೇಬಲ್‌ಗಳನ್ನು ಸ್ಥಳಾಂತರ ಮಾಡಬೇಕೇ? ಪಿಲ್ಲರ್‌ಗಳ ಸಮಸ್ಯೆ ಇಲ್ಲವೇ ಎಂಬ ಬಗ್ಗೆ ಪರಿಶೀಲಿಸುಲು ಭಾರತೀಯ ವಿಜ್ಞಾನ ಸಂಸ್ಥೆಯ ರಾಸಾಯನಿಕ ವಿಶ್ಲೇಷಣೆ, ನಿರ್ಮಾಣ ಮತ್ತು ವಿಫಲತೆ ತಂಡ ಪರೀಕ್ಷೆ ಮಾಡಬೇಕಾಗಿದೆ ಎಂದು ಹೇಳಿದ್ದಾರೆ.

ಕಳಪೆ ಕಾಮಗಾರಿಗೆ ಸಾರ್ವಜನಿಕರ ಅಸಮಾಧಾನ

ಸುದೀರ್ಘ ಪರಿಶೀಲನೆ ನಡೆಸಿ ನಂತರ ತಜ್ಞರ ತಂಡ ವಿಸ್ತೃತ ವರದಿ ನೀಡಲಿದ್ದಾರೆ. 8ನೇ ಮೈಲಿ ಜಂಕ್ಷನ್‌ ಬಳಿ 102, 103 ನೇಯ ಪಿಲ್ಲರ್‌ಗಳಲ್ಲಿ ಮೊದಲು ದೋಷವಿತ್ತು. ಸೆಗ್ಮೆಂಟ್‌ ಒಳಗಡೆ ಸಂಪರ್ಕ ಕಲ್ಪಿಸಲು 6 ಕೇಬಲ್‌ ಅಳವಡಿಸಲಾಗಿತ್ತು. ಇದರಲ್ಲಿ 3 ಕೇಬಲ್‌ ಬಾಗಿದ್ದರಿಂದ ಸಮಸ್ಯೆ ಉಂಟಾಗಿತ್ತು. ಫೆಬ್ರವರಿ 6 ಮತ್ತು 13 ರಂದು 2 ಸಲ ಭಾರಿ ವಾಹನ ಲೋಡ್‌ ಟೆಸ್ಟ್‌ ಆಗಿತ್ತು. ಸದ್ಯದ ವರದಿಯ ಪ್ರಕಾರ ಬಸ್‌, ಲಾರಿ ಸೇರಿ ಭಾರಿ ವಾಹನ ಸರ್ವೀಸ್‌ ರಸ್ತೆಯಲ್ಲಿ ಸಂಚರಿಸಬೇಕಾಗಿದೆ ಎಂದು ಪ್ರಾಧಿಕಾರದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಹೆದ್ದಾರಿಯ ಫ್ಲೈಓವರ್ ಕುರಿತು ಮಾಹಿತಿ:ಬೆಂಗಳೂರು - ನೆಲಮಂಗಲ ನಡುವೆ 6 ಪಥಗಳ ಹೆದ್ದಾರಿ ರಸ್ತೆ ಹಾಗೂ 4.5 ಕಿ.ಮೀ. ಮೇಲ್ಸೇತುವೆ ನಿರ್ಮಾಣಕ್ಕೆ ಹೈದರಾಬಾದ್ ಮೂಲದ ನವಯುಗ ಇಂಜಿನಿಯರಿಂಗ್ ಸಂಸ್ಥೆಗೆ 710 ಕೋಟಿ ರೂ.ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಗುತ್ತಿಗೆ ನೀಡಿತ್ತು.

ಹೆದ್ದಾರಿಯಲ್ಲಿ ಬರುವ ಕೆಳ ಸೇತುವೆಗಳು ಹಾಗೂ ಸರ್ವೀಸ್ ರಸ್ತೆಗಳನ್ನು ನಿರ್ಮಿಸಬೇಕೆಂಬ ಷರತ್ತು ಇತ್ತು. 2007ರ ಡಿಸೆಂಬರ್‌ನಲ್ಲಿ ಟೆಂಡರ್‌ಗೆ ಅನುಮೋದನೆ ನೀಡಿದ್ದು, 2009ರ ಅಂತ್ಯಕ್ಕೆ ಪೂರ್ಣಗೊಳಿಸಲು ಗಡುವು ನೀಡಿತ್ತು. ಜತೆಗೆ 20 ವರ್ಷಗಳವರೆಗೆ ನಿರ್ವಹಣೆ ಹೊಣೆಗಾರಿಕೆ ನೀಡಲಾಗಿತ್ತು.

ನಿರ್ವಹಣಾ ಅವಧಿಯಲ್ಲಿಯೇ ಕೇಬಲ್ ಸೆಗ್ಮೆಂಟ್ ಜೋಡಣೆಯಲ್ಲಿ ದೋಷ ಪತ್ತೆಯಾಗಿರುವುದು ಕಳಪೆ ಕಾಮಗಾರಿ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಈ ಬಗ್ಗೆ ರಾಜ್ಯ ಸರ್ಕಾರವು ಮೇಲ್ಸೇತುವೆ ಕಳಪೆಯಾಗಿದೆ ಎಂದು ತಿಳಿಸಿದ್ದು, ಭಾರಿ ಗಾತ್ರರ ವಾಹನಗಳ ಸಂಚಾರಕ್ಕೆ ಶಾಶ್ವತ ನಿರ್ಬಂಧ ವಿಧಿಸುವ ಸಾಧ್ಯತೆ ಇದೆ.

ಸಾರ್ವಜನಿಕ ಪ್ರತಿಕ್ರಿಯೆ: ಈ ಕುರಿತು ಶೆಟ್ಟಿಹಳ್ಳಿ ವಾರ್ಡ್ ಅಬ್ಬಿಗೆರೆ ನಿವಾಸಿ ದಿಲೀಪ್ ರಾಜು ಈಟಿವಿ ಭಾರತದ ಜೊತೆ ಮಾತನಾಡಿದ್ದು, ಗೊರಗುಂಟೆಪಾಳ್ಯ ಸಿಗ್ನಲ್​​ನಿಂದ 8ನೇ ಮೈಲಿಯ ಫ್ಲೈ ಓವರ್ ದುರಸ್ತಿಯಾಗಿದೆ ಸರಿ ಮಾಡಬೇಕು ಎಂದು ಡಿಸೆಂಬರ್​ನಿಂದ ಜನವರಿವರೆಗೆ 15 ದಿನ ಸಮಯ ತೆಗೆದುಕೊಳ್ಳಲಾಗಿತ್ತು. ಆದರೆ, ತಿಂಗಳ ಮೇಲೆ ಫ್ಲೈ ಓವರ್ ಬಂದ್ ಮಾಡಿದಾಗ ಸುತ್ತಮುತ್ತಲಿನ ಸಾರ್ವಜನಿಕರಿಗೆ ಅನುಮಾನ ಬಂದಿತ್ತು ಎಂದು ಹೇಳಿದ್ದಾರೆ.

102, 103 ನಂಬರ್ ಪಿಲ್ಲರ್ ಮಾತ್ರ ರಿಪೇರಿ ಅಲ್ಲ. ಪೂರ್ತಿ ಮೇಲ್ಸೇತುವೆ ತೊಂದರೆಗೀಡಾಗಿದೆ ಎಂದು ಗೊತ್ತಾಗಿತ್ತು. ದುರಸ್ತಿಯ ಸಮಯದಲ್ಲಿ 5 ರಿಂದ 10 ನಿಮಿಷ ತೆಗೆದುಕೊಳ್ಳುತ್ತಿದ್ದ ದಾರಿ 1 ರಿಂದ 1.5 ಗಂಟೆಯಾಗುತ್ತಿತ್ತು ಎಂದು ವಸ್ತುಸ್ಥಿತಿ ಬಿಚ್ಚಿಟ್ಟಿದ್ದಾರೆ.

ಇದನ್ನೂ ಓದಿ:ಮನೆಯವರು ಹಿಜಾಬ್​ ಹಾಕು ಅಂತಾರೆ..ಕಾಲೇಜಲ್ಲಿ ಬೇಡ ಅಂತಾರೆ..ಏನು ಮಾಡೋದು?: ವಿದ್ಯಾರ್ಥಿನಿ ಅಳಲು

ಆ್ಯಂಬುಲೆನ್ಸ್​ಗೆ ಕೂಡ ಜಾಗವಿಲ್ಲದಾಗಿತ್ತು. 2 ರಿಂದ 3 ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗಳಿವೆ. ಮುಖ್ಯ ರಸ್ತೆ, ಸರ್ವೀಸ್ ರಸ್ತೆ ಬ್ಲಾಕ್ ಆದರೆ ಸಾವು ಬದುಕಿನ ಹೋರಾಟದಲ್ಲಿರುವ ರೋಗಿ ಎಲ್ಲಿಗೆ ಹೋಗಬೇಕು ಎಂದು ಪ್ರಶ್ನಿಸಿದ್ದಾರೆ.

ಈಗ ಸಂಪೂರ್ಣ ಬೀಳಿಸಿ ಹೊಸದಾಗಿ ಕಟ್ಟುವ ಮಾತು ಬಂದಿದ್ದು , ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಮನವಿಯೇನೆಂದರೆ ಜನರ ತೆರಿಗೆ ಹಣ ಪೋಲು ಮಾಡಬಾರದು ಸಂಬಂಧಪಟ್ಟ ಅಧಿಕಾರಿಗಳ ಮತ್ತು ರಾಜಕಾರಿಣಿಗಳ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡು ನಿರ್ಮಾಣ ಮಾಡಬೇಕು ಎಂದು ಸಾರ್ವಜನಿಕರ ಪರವಾಗಿ ಒತ್ತಾಯಿಸಿದ್ದಾರೆ.

ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ್ ಪರಿಶೀಲನೆ:ಕೆಲವು ದಿನಗಳಿಂದ ದುರಸ್ತಿಗಾಗಿ ಮುಚ್ಚಲಾಗಿದ್ದ ಪೀಣ್ಯ ಫ್ಲೈಓವರ್ ಸೇತುವೆಯನ್ನು ಲಘು ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟ ಹಿನ್ನೆಲೆ ಇಂದು ಲೋಕೋಪಯೋಗಿ ಸಚಿವ ಸಿ.ಸಿ .ಪಾಟೀಲರು ಖುದ್ದಾಗಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಈ ಸಂದರ್ಭದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮತ್ತು ಲೋಕೋಪಯೋಗಿ ಇಲಾಖೆಯ ಹಿರಿಯ ಅಧಿಕಾರಿಗಳು ಹಾಜರಿದ್ದರು. ಈ ಮೇಲ್ಸೇತುವೆಯಲ್ಲಿ ಲಘು ವಾಹನಗಳ ಸುಗಮ ಸಂಚಾರಕ್ಕೆ ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದರು.

ABOUT THE AUTHOR

...view details