ಬೆಂಗಳೂರು: ಬೆಂಗಳೂರು ಸೇರಿದಂತೆ ರಾಜ್ಯದ 9 ಜಿಲ್ಲೆಗಳು ಲಾಕ್ ಡೌನ್ ಆಗಲಿದ್ದು, ಆ ಜಿಲ್ಲೆಗಳಲ್ಲಿನ ಸಾರ್ವಜನಿಕ ಸಾರಿಗೆ ಸೇವೆಯನ್ನೂ ಮಾರ್ಚ್ 31ರವರೆಗೆ ಸ್ಥಗಿತಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಡಾಲರ್ಸ್ ಕಾಲೋನಿಯಲ್ಲಿರುವ ಧವಳಗಿರಿ ನಿವಾಸದಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಡಿಸಿಎಂ ಅಶ್ವಥ್ ನಾರಾಯಣ್, ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ ಸುಧಾಕರ್, ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ಮತ್ತು ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯ್ ಭಾಸ್ಕರ್ ಜೊತೆ ಸಿಎಂ ಬಿ.ಎಸ್. ಯಡಿಯೂರಪ್ಪ ತುರ್ತು ಸಭೆ ನಡೆಸಿದರು.
ಕೊರೊನಾ ಸೋಂಕಿತ ಜಿಲ್ಲೆಗಳ ಲಾಕ್ ಡೌನ್ ಮಾಡುವ ಕುರಿತು ಕೇಂದ್ರ ಸರ್ಕಾರ ಹೊರಡಿಸಿದ್ದ ಆದೇಶದ ಕುರಿತು ಸಮಾಲೋಚನೆ ನಡೆಸಿದರು. ಸಾಧಕ, ಬಾಧಕ ಹಾಗೂ ಪರಿಸ್ಥಿತಿ ನಿಯಂತ್ರಣ ಕುರಿತು ಚರ್ಚೆ ನಡೆಸಿದರು. ಅಂತಿಮವಾಗಿ ಕೊರೊನಾ ಸೋಂಕು ಹೆಚ್ಚು ಕಾಣಿಸಿಕೊಂಡಿರುವ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಕಲಬುರಗಿ, ಕೊಡಗು, ಚಿಕ್ಕಬಳ್ಳಾಪುರ, ಬೆಳಗಾವಿ, ಮಂಗಳೂರು, ಮೈಸೂರು ಸೇರಿ 9 ಜಿಲ್ಲೆಗಳನ್ನು ಕೇಂದ್ರದ ಸೂಚನೆ ಮೇರೆಗೆ ಸಂಪೂರ್ಣ ಲಾಕ್ ಡೌನ್ ಮಾಡುವ ನಿರ್ಧಾರ ಕೈಗೊಳ್ಳಲಾಯಿತು.
ಈ ಕುರಿತು ಸಿಎಂ ನಿವಾಸದಲ್ಲಿ ನಡೆದ ಸಭೆ ಬಳಿಕ ಮಾಧ್ಯಮದರೊಂದಿಗೆ ಮಾತನಾಡಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಕೊರೊನಾ ಬಗ್ಗೆ ಸಿಎಂ ಎಲ್ಲ ಸ್ಥಿತಿಗತಿ ಬಗ್ಗೆ ಮಾಹಿತಿ ಪಡೆದರು. ಕೆಲವು ಪ್ರಮುಖ ನಿರ್ಣಯಗಳನ್ನು ಮಾಡಲಾಗಿದೆ. ನಿರ್ಬಂಧಿತ ಜಿಲ್ಲೆಗಳ ಬಸ್ ಸಂಪರ್ಕ ರದ್ದುಪಡಿಸಲಾಗಿದೆ. ಇವತ್ತು ಜನತಾ ಕರ್ಫ್ಯೂ ಬಳಿಕ 144 ಸೆಕ್ಷನ್ ಹಾಕಲಾಗುತ್ತದೆ. ಮಧ್ಯರಾತ್ರಿ 12 ರಿಂದ ನಸುಕಿನಜಾವ 3 ರವರೆಗೆ 144 ಸೆಕ್ಷನ್ ಇರಲಿದೆ ಎಂದರು.
ನಾಳೆಯಿಂದ ಕೆಎಸ್ಆರ್‌ಟಿಸಿ, ಬಿಎಂಟಿಸಿ, ಮೆಟ್ರೋ ಸೇರಿ ಸಾರ್ವಜನಿಕ ಸಾರಿಗೆ ಸೇವೆ ಇರಲ್ಲ. ಆದರೆ ಅಲ್ಲಿ ಸರ್ಕಾರಿ ಕಚೇರಿ ಇರಲಿವೆ. ಟ್ಯಾಕ್ಸಿ, ಆಟೋ ಸೇವೆ ಇರಲಿದೆ. ಹಾಲು, ತರಕಾರಿ, ಔಷಧಿ, ಪೆಟ್ರೋಲ್, ಆಂಬ್ಯುಲೆನ್ಸ್, ಸೇರಿ ಅಗತ್ಯ ವಸ್ತುಗಳ ಸೇವೆ ಲಭ್ಯವಿರಲಿದೆ ಎಂದು ಮಾಹಿತಿ ನೀಡಿದರು.
ನಾಳೆ ದ್ವಿತೀಯ ಪಿಯುಸಿ ಕೊನೆಯ ವಿಷಯದ ಪರೀಕ್ಷೆ ಇದ್ದು ಅದೂ ನಡೆಯಲಿದೆ. ಪಿಯುಸಿ ಕೊನೆಯ ಪತ್ರಿಕೆ ಪರೀಕ್ಷೆಗೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬೇಕು. ಟ್ಯಾಕ್ಸಿ, ಬೈಕ್ ಮೂಲಕ ವಿದ್ಯಾರ್ಥಿಗಳೇ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಸಚಿವರು ತಿಳಿಸಿದರು.