ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಪೀಕ್ ಲೇವಲ್ಗೆ ಹೋಗುತ್ತಿದ್ದು, ಇಷ್ಟು ದಿನ 2,000 ಗಡಿ ದಾಟುತ್ತಿದ್ದ ಸೋಂಕಿತರ ಸಂಖ್ಯೆ ಇಂದು 3,176 ಹೊಸ ಪಾಸಿಟಿವ್ ಕೇಸ್ ಪತ್ತೆಯಾಗಿ ಆತಂಕ ಸೃಷ್ಟಿಸಿದೆ.
ರಾಜ್ಯದಲ್ಲಿ ಹೆಚ್ಚುತ್ತಿದೆ ಕೊರೊನಾ ಸೋಂಕು ಪ್ರಸರಣ: ಬೆಂಗಳೂರಿನಲ್ಲಿ ಚಿಕಿತ್ಸೆಗೆ 8,654 ಬೆಡ್ ರೆಡಿ - ಕೊರೊನಾ
ರಾಜ್ಯದಲ್ಲಿ ಕೊರೊನಾ ತನ್ನ ಅಟ್ಟಹಾಸ ಮುಂದುವರೆಸಿದೆ. ಇಂದು ಒಂದೇ ದಿನ 3,176 ಕೋವಿಡ್ ಪ್ರಕರಣ ದಾಖಲಾಗಿದೆ.
ಇತ್ತ 87 ಸೋಂಕಿತರು ಕೊರೊನಾಗೆ ಬಲಿಯಾಗಿದ್ದು, ಅನ್ಯ ಕಾರಣಕ್ಕೆ 6 ಮಂದಿ ಮೃತಪಟ್ಟಿದ್ದಾರೆ. ಈವರೆಗೆ ರಾಜ್ಯದಲ್ಲಿ 928 ಮಂದಿ ಸೋಂಕಿನಿಂದ ಅಸುನೀಗಿದ್ದಾರೆ. ಒಟ್ಟಾರೆ ರಾಜ್ಯದಲ್ಲಿ 47,253 ಮಂದಿಗೆ ಸೋಂಕು ತಗುಲಿದ್ದು, ಅದರಲ್ಲಿ 18,466 ಜನ ಗುಣಮುಖರಾಗಿದ್ದಾರೆ. 27,853 ಸೋಂಕಿತರು ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಐಸಿಯುನಲ್ಲಿ 597 ಇದ್ದು ಚಿಕಿತ್ಸೆ ಮುಂದುವರೆದಿದೆ. ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ಇದರೊಟ್ಟಿಗೆ ನಿಗಾವಣೆಯಲ್ಲಿರುವವರ ಸಂಖ್ಯೆಯು ಏರಿಕೆ ಕಂಡಿದೆ. ಬರೋಬ್ಬರಿ 95,078 ಮಂದಿ ನಿಗಾವಣೆಯಲ್ಲಿದ್ದು, ಇದರಲ್ಲಿ 50,241 ಪ್ರಾಥಮಿಕ ಸಂಪರ್ಕಿತರು, 44,837 ದ್ವಿತೀಯ ಸಂಪರ್ಕಿತರು ಇದ್ದಾರೆ.
ರಾಜ್ಯದಲ್ಲಿ ಈವರೆಗೆ 9,02,026 ಮಂದಿ ಕೊರೊನಾ ಪರೀಕ್ಷೆ ಮಾಡಲಾಗಿದೆ. 8,31,246 ಮಂದಿ ವರದಿ ನೆಗೆಟಿವ್ ಬಂದಿದ್ದು, 47,253 ಮಂದಿಗೆ ಸೋಂಕು ತಗುಲಿದೆ. ಇಂದು ಒಂದೇ ದಿನ 22204 ಮಾದರಿಗಳನ್ನು ಪರೀಕ್ಷಿಸಿದ್ದು, 18,082 ನೆಗೆಟಿವ್ ಬಂದಿದ್ದು, 3176 ಪಾಸಿಟಿವ್ ರಿಪೋರ್ಟ್ ಬಂದಿದೆ. ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾದ ಹಿನ್ನೆಲೆ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿಂದ ಒಟ್ಟು 8,654 ಹಾಸಿಗೆಗಳು ಇದ್ದು, ಇದರಲ್ಲಿ 2574 ಹಾಸಿಗೆಗಳು ಭರ್ತಿಯಾಗಿವೆ. 6084 ಹಾಸಿಗೆಗಳು ಲಭ್ಯವಿದ್ದು, ಇದರಲ್ಲಿ ಜನರಲ್ ವಾರ್ಡ್ 4455, ಹೆಚ್ಡಿಯು(ಹೈ ಫ್ಲೋ ಆಕ್ಸಿಜನ್ ಬೆಡ್)908, ಐಸಿಯು 352, 360 ವೆಂಟಿಲೇಟರ್ ಖಾಲಿ ಇವೆ.