ಬೆಂಗಳೂರು: ಹಿರಿಯ ನಾಗರಿಕರ ಯೋಜನೆಯ ಹಣವನ್ನು ಬ್ಯಾಂಕ್ ಖಾತೆಗೆ ವರ್ಗಾಯಿಸುವ ನೆಪದಲ್ಲಿ 86 ವರ್ಷದ ವಯೋವೃದ್ಧನಿಗೆ ಇಬ್ಬರು ಮಹಿಳೆಯರು ಸೇರಿದಂತೆ ಐವರು ಮೋಸ ಮಾಡಿದ್ದು, ಈ ಘಟನೆ ಸಂಬಂಧಿಸಿದಂತೆ ವಿಜಯನಗರ ಠಾಣಾ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.
ಮೋಸ ಹೋಗಿದ್ದು ಹೇಗೆ?
ಇಲ್ಲಿನ ವಿಜಯನಗರ ನಿವಾಸಿಯನ್ನು 2020ರ ನವೆಂಬರ್‌ನಲ್ಲಿ ಸೋನಿಯಾ ಸಿಂಗ್ ಎಂಬ ಮಹಿಳೆ ಸಂಪರ್ಕಿಸಿ ಹಿರಿಯ ನಾಗರಿಕರ ಯೋಜನೆಯಡಿ 3.5 ಲಕ್ಷ ರೂ.ಗಳು ಹಂಚಿಕೆಯಾಗಿದೆ. ತ್ವರಿತವಾಗಿ ಹಣ ಪಡೆದುಕೊಳ್ಳಿ. ಇಲ್ಲದಿದ್ದರೆ, ಸರ್ಕಾರಕ್ಕೆ ವಾಪಸ್ ಹೋಗುತ್ತದೆ ಎಂದಿದ್ದಾರೆ. ಹೀಗಾಗಿ ಹಣವನ್ನು ಪಡೆಯಲು ಒಪ್ಪಿಗೆ ಸೂಚಿಸಿದ್ದರು.
ಮೊದಲು ಸೇವಾ ಶುಲ್ಕವೆಂದು 20,999 ರೂ. ಮೊತ್ತವನ್ನು 2021ರ ಮಾರ್ಚ್ 10 ರಂದು ಮುಂಬೈ ನಗರದ ಒಂದು ಬ್ಯಾಂಕ್ ಖಾತೆಗೆ ವರ್ಗಾಯಿಸಿದ್ದಾರೆ. ನಂತರ ಮಾರ್ಚ್ 23ರಂದು ಅಭಿಷೇಕ್ ಶರ್ಮಾ ಮತ್ತು ಮಲ್ಹೋತ್ರಾ ಎಂಬ ಇಬ್ಬರು ವ್ಯಕ್ತಿಗಳು ಕರೆ ಮಾಡಿ 3.5 ಲಕ್ಷ ರೂ ಅನುಮೋದಿಸಲಾಗಿದೆ ಎಂದಿದ್ದಾರೆ.
ಅನುಮೋದನೆ ಸಂಖ್ಯೆಯಾಗಿ AR0079432P ನೀಡಿದ್ದಾರೆ. ಮೇ 27 ರಂದು ಸುದೀಪ್ ತ್ಯಾಗಿ ಎನ್ನುವ ಮತ್ತೊಬ್ಬ ವ್ಯಕ್ತಿ ದೂರವಾಣಿ ಕರೆ ಮಾಡಿ, ಮತ್ತೊಂದು ಯೋಜನೆಗೆ ಆಯ್ಕೆಯಾಗಿರುವುದಾಗಿ ತಿಳಿಸಿದ್ದಾರೆ. ಒಟ್ಟು 6.2 ಲಕ್ಷ ರೂ ಹಂಚಿಕೆಯಾಗಿದೆ ಎಂದಾಗ ಆತ ಹೇಳಿದಂತೆ 73 ಸಾವಿರ ರೂ. ಸೇವಾ ಶುಲ್ಕ ಜಮೆ ಮಾಡಲು ಮುಂದಾಗಿದ್ದಾರೆ. ತ್ಯಾಗಿ ಎಂಬಾತ ನೀಡಿದ ಬ್ಯಾಂಕ್ ಖಾತೆಗೆ ಹಣವನ್ನು ವರ್ಗಾಯಿಸಿದ್ದಾರೆ.
ಇದನ್ನು ಓದಿ: ಕೊರೊನಾ ಭೀತಿ:ಆಷಾಢ ಶುಕ್ರವಾರದಂದು ನಾಡ ಅಧಿದೇವತೆ ಚಾಮುಂಡೇಶ್ವರಿಗೆ ಸರಳ ಪೂಜೆ
ಜುಲೈ 1 ರಂದು, ಮಲ್ಹೋತ್ರಾ ಎಂದು ಗುರುತಿಸಿಕೊಂಡ ವ್ಯಕ್ತಿ ಕರೆ ಮಾಡಿ ಕ್ಲಿಯರೆನ್ಸ್ ಶುಲ್ಕವಾಗಿ ಇನ್ನೂ 50 ಸಾವಿರ ರೂ. ಕೇಳಿದ್ದಾನೆ. ಈ ವೇಳೆ ಅನುಮಾನಗೊಂಡು ಮಲ್ಹೋತ್ರಾ ಎನ್ನುವ ವ್ಯಕ್ತಿಗೆ 6.2 ಲಕ್ಷ ರೂ.ಗಳ ಅಗತ್ಯ ನನಗಿಲ್ಲ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೆ ನನ್ನ ಹಣವನ್ನು ವರ್ಗಾಯಿಸುವಂತೆ ವಿನಂತಿಸಿದ್ದಾರೆ. ಆದರೆ, ಆತ ತಕ್ಷಣ ಸಂಪರ್ಕ ಕಡಿತಗೊಳಿಸಿದ್ದಾನೆ ಎಂದು ವೃದ್ಧ ತನ್ನ ದೂರಿನಲ್ಲಿ ತಿಳಿಸಿದ್ದಾರೆ.
ಆರೋಪಿಗಳ ಶೀಘ್ರ ಪತ್ತೆ ಭರವಸೆ:
ಪೊಲೀಸ್ ಅಧಿಕಾರಿಗಳು ಪ್ರಕರಣದ ಬಗ್ಗೆ ಮಾಹಿತಿ ನೀಡಿ ಬ್ಯಾಂಕ್ ಖಾತೆಗಳ ವಿವರಗಳನ್ನು ಸಂಗ್ರಹಿಸಿದ್ದಾರೆ. ಆದರೆ, ಅವು ಸದ್ಯ ನಿಷ್ಕ್ರಿಯವಾಗಿರುವುದು ಕಂಡುಬಂದಿದೆ. ಆರೋಪಿಗಳು ಮೊಬೈಲ್ಗಳನ್ನು ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ. ಆದರೆ, ಖದೀಮರನ್ನು ಶೀಘ್ರದಲ್ಲೇ ಪತ್ತೆಹಚ್ಚುವುದಾಗಿ ಪೊಲೀಸರು ಭರವಸೆ ನೀಡಿದ್ದಾರೆ.