ಬೆಂಗಳೂರು: ಕೌನ್ ಬನೇಗಾ ಕರೋಡ್ಪತಿ ಕಾರ್ಯಕ್ರಮದ ಲಕ್ಕಿ ಡ್ರಾದಲ್ಲಿ 25 ಲಕ್ಷ ರೂಪಾಯಿ ಗೆದ್ದಿರುವುದಾಗಿ ನಂಬಿಸಿ, ಅದಕ್ಕಾಗಿ ಜಿಎಸ್ಟಿ ಪಾವತಿಸಬೇಕೆಂದು ಹೇಳಿ ಎಂಜಿನಿಯರಿಂಗ್ ವಿದ್ಯಾರ್ಥಿಗೆ ಸೈಬರ್ ಖದೀಮರು 84 ಸಾವಿರ ರೂಪಾಯಿ ವಂಚಿಸಿದ್ದಾರೆ.
ಲಕ್ಕಿ ಡ್ರಾದಲ್ಲಿ 25 ಲಕ್ಷ ರೂ ಗೆದ್ದಿರುವುದಾಗಿ ಕರೆ: ವಿದ್ಯಾರ್ಥಿಗೆ 84 ಸಾವಿರ ಪಂಗನಾಮ - Husband of Kaun Banega Karod
ಬಸವನಗುಡಿಯ ಎನ್.ಆರ್. ಕಾಲೋನಿ ವಾಸಿ ಕಾರ್ತಿಕ್ ಎಂಬಾತ ಸೈಬರ್ ಖದೀಮರಿಂದ ಮೋಸ ಹೋಗಿ ದಕ್ಷಿಣ ವಿಭಾಗದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಖಾಸಗಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಕಾರ್ತಿಕ್ ಎಂಬಾತನಿಗೆ ಕಳೆದ ಜ.29 ರಂದು ಕರೆ ಮಾಡಿದ ಖದೀಮರು, ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮದಿಂದ ಮಾತನಾಡುತ್ತಿದ್ದೇವೆ. ನೀವು ಲಕ್ಕಿ ಡ್ರಾದಲ್ಲಿ 25 ಲಕ್ಷ ರೂಪಾಯಿ ವಿಜೇತರಾಗಿದ್ದೀರಿ. ಹಣ ಕ್ಲೇಮ್ ಮಾಡಿಕೊಳ್ಳಲು ಜಿಎಸ್ಟಿ ಕ್ಲಿಯರನ್ಸ್ ಮಾಡಬೇಕು ಎಂದು ನಂಬಿಸಿದ್ದಾರೆ. ಇದನ್ನು ನಂಬಿದ ಎಂಜಿನಿಯರಿಂಗ್ ವಿದ್ಯಾರ್ಥಿ ತಂದೆ ತಾಯಿ ಬಳಿ ಪ್ರಾಜೆಕ್ಟ್ ವರ್ಕ್ ಎಂದು ಹೇಳಿ 80 ಸಾವಿರ ಪಡೆದಿದ್ದಾನೆ.
ನಂತರ ಸೈಬರ್ ಕಳ್ಳರು ಸೂಚಿಸಿದ ಅಕೌಂಟ್ಗೆ ಹಣ ವರ್ಗಾವಣೆ ಮಾಡಿದ್ದ. ಬಳಿಕ ಮತ್ತೆ ವರಸೆ ಶುರು ಮಾಡಿದ ಖದೀಮರು, ಲಾಟರಿ ಹಣಕ್ಕಾಗಿ ಇನ್ನಷ್ಟು ಹಣ ಪಾವತಿ ಮಾಡಬೇಕೆಂದು ಬೇಡಿಕೆ ಇಟ್ಟಿದ್ದಾರೆ. ಇದರಿಂದ ಅನುಮಾನಗೊಂಡು ಪ್ರಶ್ನಿಸಿದಾಗ ಮೋಸ ಹೋಗಿರುವುದು ಗೊತ್ತಾಗಿದೆ. ಸದ್ಯ ಇಂಜಿನಿಯರಿಂಗ್ ವಿದ್ಯಾರ್ಥಿ ಸೈಬರ್ ಪೊಲೀಸರಿಗೆ ದೂರು ನೀಡಿದ್ದಾನೆ.