ಕರ್ನಾಟಕ

karnataka

ETV Bharat / state

ಲಾಕ್​ಡೌನ್ ಇದ್ದರೂ ಕಳೆದ ವರ್ಷಕ್ಕಿಂತ ಶೇ.82 ರಷ್ಟು ಹೆಚ್ಚು ರಸಗೊಬ್ಬರ ಮಾರಾಟ

ಏಪ್ರಿಲ್-ಜೂನ್ ನಡುವಿನ ಅವಧಿಯಲ್ಲಿ ಒಟ್ಟು 111.61 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರವನ್ನು ರೈತರಿಗೆ ಮಾರಾಟ ಮಾಡಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 61.05 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರ ಮಾರಾಟವಾಗಿತ್ತು. ಅದಕ್ಕೆ ಹೋಲಿಸಿದರೆ ಈ ವರ್ಷ ದಾಖಲೆಯ ಶೇಕಡ 82.81ರಷ್ಟು ಅಧಿಕ ರಸಗೊಬ್ಬರ ಮಾರಾಟವಾಗಿದೆ ಎಂದು ಪತ್ರಿಕಾ ಪ್ರಕಟಣೆ ಮೂಲಕ ವಿವರಿಸಿದ್ದಾರೆ.

Union Minister DV Sadananda Gowda
; ಕೇಂದ್ರ ಸಚಿವ ಡಿ.ವಿ ಸದಾನಂದಗೌಡ

By

Published : Jul 3, 2020, 11:18 PM IST

ದೆಹಲಿ/ಬೆಂಗಳೂರು:ಕೋವಿಡ್ ಸಾಂಕ್ರಾಮಿಕ ಹಿನ್ನೆಲೆಯಲ್ಲಿ ರಾಷ್ಟ್ರವ್ಯಾಪಿ ಲಾಕ್​ಡೌನ್ ನಡುವೆಯೇ ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ ರೈತ ಸಮುದಾಯಕ್ಕೆ ದಾಖಲೆಯ ಪ್ರಮಾಣದಲ್ಲಿ ರಸಗೊಬ್ಬರ ಮಾರಾಟ ಮಾಡಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ. ಸದಾನಂದಗೌಡ ತಿಳಿಸಿದ್ದಾರೆ.

ಏಪ್ರಿಲ್-ಜೂನ್ ಅವಧಿಯಲ್ಲಿ 64.82 ಲಕ್ಷ ಮೆಟ್ರಿಕ್ ಟನ್ ಯೂರಿಯಾ (ಕಳೆದ ವರ್ಷಕ್ಕೆ ಹೋಲಿಸಿದರೆ ಶೇಕಡಾ 67 ರಷ್ಟು ಅಧಿಕ), 22.46 ಲಕ್ಷ ಮೆಟ್ರಿಕ್ ಟನ್ ಡಿಎಪಿ (ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.100 ಅಧಿಕ) ಮತ್ತು 24.32 ಲಕ್ಷ ಮೆಟ್ರಿಕ್ ಟನ್ ಕಾಂಪ್ಲೆಕ್ಸ್ ರಸಗೊಬ್ಬರವನ್ನು (ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.120ಕ್ಕೂ ಅಧಿಕ) ರೈತ ಸಮುದಾಯಕ್ಕೆ ಮಾರಾಟ ಮಾಡಲಾಗಿದೆ. ರಾಷ್ಟ್ರಮಟ್ಟದಲ್ಲಿ ಕೋವಿಡ್-19 ಲಾಕ್​ಡೌನ್​ನಿಂದಾಗಿ ಸಾಕಷ್ಟು ನಿರ್ಬಂಧಗಳ ನಡುವೆಯೇ ರೈಲ್ವೆ ಸಚಿವಾಲಯ, ರಾಜ್ಯ ಸರ್ಕಾರಗಳು, ಬಂದರು ಇಲಾಖೆಗಳ ನಿರಂತರ ಸಮಗ್ರ ಪ್ರಯತ್ನಗಳಿಂದಾಗಿ ದೇಶದಲ್ಲಿ ರಸಗೊಬ್ಬರ ಉತ್ಪಾದನೆ ಮತ್ತು ಸಾಗಣೆ ಯಾವುದೇ ಅಡೆತಡೆ ಇಲ್ಲದೆ ಮುಂದುವರೆದಿದೆ ಎಂದು ತಿಳಿಸಿದ್ದಾರೆ.

ಮುಂಬರುವ ಮುಂಗಾರು ಹಂಗಾಮಿನಲ್ಲಿ ರೈತರಿಗೆ ರಸಗೊಬ್ಬರ ಲಭ್ಯತೆ ಕೊರತೆ ಎದುರಾಗದಂತೆ ಕ್ರಮಕೈಗೊಳ್ಳಲಾಗುವುದು ಎಂದು ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ ನೀಡಿದ್ದ ಬದ್ಧತೆಯ ಭರವಸೆಯಂತೆ ನಡೆದುಕೊಳ್ಳಲಾಗಿದೆ. ನಾವು ಮುಂಗಾರು ಹಂಗಾಮಿನಲ್ಲಿ ರೈತರಿಗೆ ರಸಗೊಬ್ಬರ ಲಭ್ಯತೆ ಮತ್ತು ದಾಸ್ತಾನಿನ ಬಗ್ಗೆ ಸತತ ನಿಗಾ ಇರಿಸಿದ್ದೇವೆ. ರಾಜ್ಯಗಳಿಗೆ ಅಗತ್ಯವಿರುವಷ್ಟು ರಸಗೊಬ್ಬರವನ್ನು ದಾಸ್ತಾನು ಮಾಡಿಕೊಳ್ಳಲು ಅವಕಾಶ ಒದಗಿಸಲಾಗಿದೆ. ರಾಜ್ಯಗಳ ಕೃಷಿ ಸಚಿವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ ಎಂದು ಕೇಂದ್ರ ಸಚಿವರು ಹೇಳಿದ್ದಾರೆ. ಅಲ್ಲದೆ ತಮ್ಮ ಸಚಿವಾಲಯ ರೈತ ಸಮುದಾಯಕ್ಕೆ ಬಿತ್ತನೆಗೂ ಮುನ್ನ ರಸಗೊಬ್ಬರ ಲಭ್ಯವಾಗುವ ಬಗ್ಗೆ ಖಾತ್ರಿಪಡಿಸುವ ಬದ್ಧತೆಯನ್ನು ಹೊಂದಿದೆ ಎಂದು ಭರವಸೆ ನೀಡಿದ್ದಾರೆ.

ಕೇಂದ್ರ ಸರ್ಕಾರ ಅವಶ್ಯಕ ವಸ್ತುಗಳ ಕಾಯ್ದೆ ಅಡಿಯಲ್ಲಿ ದೇಶಾದ್ಯಂತ ರಸಗೊಬ್ಬರ ಘಟಕಗಳ ಕಾರ್ಯ ನಿರ್ವಹಣೆಗೆ ಅವಕಾಶ ಮಾಡಿಕೊಟ್ಟಿದೆ. ಆ ಮೂಲಕ ಲಾಕ್​ಡೌನ್ ಸಮಯದಲ್ಲಿ ರೈತ ಸಮುದಾಯಕ್ಕೆ ಯಾವುದೇ ಬಿಸಿ ತಟ್ಟದಂತೆ ನೋಡಿಕೊಳ್ಳಲಾಯಿತು. ರಸಗೊಬ್ಬರ ಘಟಕಗಳು, ರೈಲು ನಿಲ್ದಾಣಗಳು ಮತ್ತು ಬಂದರುಗಳಲ್ಲಿ ರಸಗೊಬ್ಬರವನ್ನು ತುಂಬುವುದು ಮತ್ತು ಇಳಿಸುವುದು ಸಮರೋಪಾದಿಯಲ್ಲಿ ನಡೆದಿದ್ದು, ಈ ವೇಳೆ ಕೋವಿಡ್-19 ಸಂಬಂಧ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಈ ವಿಷಯದಲ್ಲಿ ರಾಜಿ ಮಾಡಿಕೊಂಡಿಲ್ಲ ಕಾರ್ಮಿಕರು ಮತ್ತು ಎಲ್ಲಾ ಸಿಬ್ಬಂದಿಗಳಿಗೆ ಮಾಸ್ಕ್ ಹಾಗೂ ಇತರೆ ಮುನ್ನೆಚ್ಚರಿಕೆ ಉಪಕರಣಗಳನ್ನು ಒದಗಿಸಲಾಗಿತ್ತು ಎಂದು ಕೇಂದ್ರ ಸಚಿವ ಡಿ.ವಿ ಸದಾನಂದಗೌಡ ತಿಳಿಸಿದ್ದಾರೆ.

ABOUT THE AUTHOR

...view details