ಕರ್ನಾಟಕ

karnataka

ETV Bharat / state

5 ಲಕ್ಷ ಕೋಟಿ ದಾಟಿದ ಸಾಲದ ಹೊರೆ.. ರಾಜ್ಯದ ಪ್ರತಿ ನಾಗರಿಕನ ತಲೆ ಮೇಲೆ 80 ಸಾವಿರ ಸಾಲದ ಶೂಲ

ರಾಜ್ಯದ ಪರಿಸ್ಥಿತಿ ಸಾಲ‌ ಮಾಡಿಯಾದರೂ ತುಪ್ಪ ತಿನ್ನು ಎಂಬಂತಾಗಿದೆ. ರಾಜ್ಯದ ಅಭಿವೃದ್ಧಿಗಾಗಿ, ಬದ್ಧ ವೆಚ್ಚಗಳನ್ನು ಭರಿಸಲು ಸಾಲದ ಮೊರೆ ಹೋಗುವ ಅನಿವಾರ್ಯತೆ ಬಂದಿದೆ. ಈ ಬಾರಿಯ ಬಜೆಟ್​ನಲ್ಲೂ ಸಾಲವನ್ನೇ ಆಸರೆಯಾಗಿಸಿರುವ ಸರ್ಕಾರ ಮತ್ತಷ್ಟು ಸಾಲಕ್ಕೆ ಅಂಟಿಕೊಂಡು ಪ್ರತಿಯೊಬ್ಬ ನಾಗರಿಕನ‌ ತಲೆ ಮೇಲೆ ಸುಮಾರು 80,000 ರೂ. ಸಾಲದ ಹೊರೆ ಹಾಕಿದೆ.

citizen
citizen

By

Published : Mar 5, 2022, 6:45 AM IST

ಬೆಂಗಳೂರು: ಪ್ರತಿ ವರ್ಷ ರಾಜ್ಯದ ಸಾಲದ ಹೊರೆ ಏರುತ್ತಲೇ ಇದೆ. ರಾಜ್ಯದ ಹಣಕಾಸು ಸ್ಥಿತಿಯನ್ನು ನಿರ್ವಹಿಸಲು ಸರ್ಕಾರ ಸಾಲವನ್ನೇ ಬಹುವಾಗಿ ನೆಚ್ಚಿಕೊಂಡಿದೆ. ಈ ಬಾರಿಯ ಬಜೆಟ್​ನಲ್ಲೂ ಸಾಲವನ್ನೇ ಆಸರೆಯಾಗಿಸಿರುವ ಸರ್ಕಾರ ಮತ್ತಷ್ಟು ಸಾಲಕ್ಕೆ ಅಂಟಿಕೊಂಡು ಪ್ರತಿಯೊಬ್ಬ ನಾಗರಿಕನ‌ ತಲೆ ಮೇಲೆ ಸುಮಾರು 80,000 ರೂ. ಸಾಲದ ಹೊರೆ ಹಾಕಿದೆ.

ಸದ್ಯದ ರಾಜ್ಯದ ಪರಿಸ್ಥಿತಿ ಸಾಲ‌ ಮಾಡಿಯಾದರೂ ತುಪ್ಪ ತಿನ್ನು ಎಂಬಂತಾಗಿದೆ. ರಾಜ್ಯದ ಅಭಿವೃದ್ಧಿಗಾಗಿ, ಬದ್ಧ ವೆಚ್ಚಗಳನ್ನು ಭರಿಸಲು ಸಾಲದ ಮೊರೆ ಹೋಗುವ ಅನಿವಾರ್ಯತೆ ಬಂದಿದೆ. ಪ್ರತಿ ಸರ್ಕಾರಗಳು ಸಾಲವನ್ನೇ ಬಹುವಾಗಿ ನೆಚ್ಚಿಕೊಂಡಿದೆ. ಸಾಲ ಮಾಡಿ ಆಡಳಿತ ನಡೆಸುವುದನ್ನ ಇತ್ತೀಚಿಗಿನ ಸರ್ಕಾರಗಳು ರೂಢಿ ಮಾಡಿಕೊಂಡಿವೆ. ಆದಾಯ ಮೂಲಗಳು ಬರಿದಾಗುತ್ತಿದ್ದು, ಅತ್ತ ವೇತನ, ಪಿಂಚಣಿ, ಸಹಾಯಧನ ಒಳಗೊಂಡ ಬದ್ಧ ವೆಚ್ಚ ಏರಿಕೆಯಾಗುತ್ತಿದೆ. ರಾಜ್ಯದ ಆರ್ಥಿಕತೆಯನ್ನು ನಿಭಾಯಿಸಲು ಸರ್ಕಾರ ಬಹುವಾಗಿ ಸಾಲವನ್ನೇ ನೆಚ್ಚಿಕೊಳ್ಳುತ್ತಿದೆ. ಆ ಮೂಲಕ ಜನರ‌ ಮೇಲಿನ ಸಾಲದ ಹೊರೆಯೂ ಉಲ್ಬಣವಾಗುತ್ತಿದೆ.

ರಾಜ್ಯ ಸರ್ಕಾರ 2022-23ರಲ್ಲಿ 72,000 ಕೋಟಿ ಸಾಲ ಮಾಡಲು ನಿರ್ಧರಿಸಿರುವುದಾಗಿ ಸಿಎಂ ಬಜೆಟ್ ಭಾಷಣದಲ್ಲಿ ತಿಳಿಸಿದ್ದಾರೆ. ಕೇಂದ್ರ ಸರ್ಕಾರದಿಂದ 3089.36 ಕೋಟಿ ಸಾಲ ಮಾಡಲು ನಿರ್ಧರಿಸಿದರೆ, ಮುಕ್ತ ಮಾರುಕಟ್ಟೆಯಲ್ಲಿ 67,911 ಕೋಟಿ ರೂ. ಸಾಲ ಮಾಡಲು ಯೋಜಿಸಿದೆ. ಆ ಮೂಲಕ 2022-23 ಅಂತ್ಯಕ್ಕೆ ರಾಜ್ಯದ ಒಟ್ಟು ಹೊಣೆಗಾರಿಕೆ 5,18,366 ಕೋಟಿ ರೂ. ಮುಟ್ಟಲಿದೆ. ಸಾಲದ ಸುಳಿಯತ್ತ ಹೋಗುತ್ತಿರುವ ರಾಜ್ಯ, ಆ ಮೂಲಕ ಪ್ರತಿಯೊಬ್ಬ ನಾಗರಿಕನ ತಲೆಗೆ ಸಾಲದ ಹೊರೆಯನ್ನು ಕಟ್ಟುತ್ತಿದೆ.

ಪ್ರತಿಯೊಬ್ಬರ ತಲೆ‌ ಮೇಲೆ 80,000 ರೂ. ಸಾಲದ ಹೊರೆ: ಹೌದು, ಸದ್ಯಕ್ಕೆ ಪ್ರತಿಯೊಬ್ಬ ರಾಜ್ಯದ ನಾಗರಿಕನ ಮೇಲೆ ಬರೋಬ್ಬರಿ 80,000 ರೂ. ಸಾಲದ ಹೊರೆ ಬಿದ್ದಿದೆ. ಆ ಮೂಲಕ ರಾಜ್ಯದ ಪ್ರತಿ ನಾಗರಿಕನ ಮೇಲೆ ಪ್ರತಿವರ್ಷ ಸಾಲದ ಭಾರ ದುಪ್ಪಟ್ಟಾಗುತ್ತಿದೆ.

ಇದನ್ನೂ ಓದಿ:ಚೊಚ್ಚಲ ಬಜೆಟ್ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಸಮರ್ಥನೆ ಏನು?

ಪ್ರತಿಯೊಬ್ಬ ನಾಗರಿಕ ಸರ್ಕಾರಗಳ ಕಳಪೆ ಹಣಕಾಸು ನಿರ್ವಹಣೆಯಿಂದ ಸಾಲದ ಸುಳಿಯಲ್ಲಿ ಸಿಲುಕುವಂತಾಗಿದೆ. 2022-23ರ ಕೊನೆಗೆ ರಾಜ್ಯದ ಹೊಣೆಗಾರಿಕೆ 5,18,366 ಕೋಟಿ ರೂ.ಗೆ ತಲುಪಲಿದೆ. ಆ ಮೂಲಕ ಸಾಲದ ಹೊರೆ ಏರುತ್ತಲೇ ಇದೆ. ಸರ್ಕಾರ ಪ್ರತಿವರ್ಷ ಸಾಲದ‌ ಮೊರೆ ಹೋಗುತ್ತಿದ್ದ ಹಾಗೇ ರಾಜ್ಯದ ಜನರನ್ನೂ ಅವರಿಗೆ ಅರಿವಾಗದಂತೆ ಸಾಲದ ಶೂಲಕ್ಕೆ ತಳ್ಳುತ್ತಿದೆ.

ರಾಜ್ಯ ಸರ್ಕಾರ 2019-20ರಲ್ಲಿ 48,601 ಕೋಟಿ ರೂ. ಸಾಲ ಎತ್ತುವಳಿ ಮಾಡಿತ್ತು. ಆವಾಗ ರಾಜ್ಯದ ಒಟ್ಟು ಸಾಲ (ಹೊಣೆಗಾರಿಕೆ) 3,37,520 ಕೋಟಿ ರೂ. ಇತ್ತು. ಇನ್ನು 2020-21ರಲ್ಲಿ ರಾಜ್ಯ ಸರ್ಕಾರ 61,900 ಕೋಟಿ ರೂ‌. ಸಾಲ ಮಾಡಿತ್ತು. ಆ ಮೂಲಕ ಆ ಸಾಲಿನಲ್ಲಿ ರಾಜ್ಯ ಒಟ್ಟು ಋಣ ಭಾರ 3,98,219 ಕೋಟಿ ರೂ. ತಲುಪಿತ್ತು.

ಇನ್ನು 2021-22 ಸಾಲಿನಲ್ಲಿ ರಾಜ್ಯ ಸರ್ಕಾರ 71,332 ಕೋಟಿ ರೂ. ಸಾಲ ಮಾಡಲು ನಿರ್ಧರಿಸಿತ್ತು. ಆ ಮೂಲಕ ರಾಜ್ಯದ ಒಟ್ಟು ಸಾಲ ಹಾಗೂ ಋಣಭಾರ ಮಾರ್ಚ್ ಅಂತ್ಯಕ್ಕೆ 4,57,899 ಕೋಟಿ ರೂ‌.ಗೆ ಏರಿಕೆಯಾಗಲಿದೆ. ಇದೀಗ 2022-23 ಸಾಲಿನಲ್ಲಿ ರಾಜ್ಯದ ಒಟ್ಟು ಸಾಲ 5,18,366 ಕೋಟಿ ರೂ. ತಲುಪಲಿದೆ ಎಂದು ಅಂದಾಜಿಸಲಾಗಿದೆ. 2023-24ಕ್ಕೆ ರಾಜ್ಯದ ಒಟ್ಟು ಸಾಲ ಅಂದಾಜು 5,73,790 ಕೋಟಿ ರೂ. ತಲುಪಲಿದೆ. 2024-25ರಲ್ಲಿ ರಾಜ್ಯದ ಒಟ್ಟು ಸಾಲದ ಹೊರೆ 6,42,578 ಕೋಟಿ ರೂ.ಗೆ ತಲುಪಲಿದೆ ಎಂದು ಅಂದಾಜು ಮಾಡಲಾಗಿದೆ.

2020-21 ಸಾಲಿಗೆ ಹೋಲಿಸಿದರೆ ಪ್ರಸಕ್ತ ವರ್ಷದಲ್ಲಿ ಸಾಲದ‌ ಪ್ರಮಾಣ ಸುಮಾರು 34% ಹೆಚ್ಚಳವಾಗಿದೆ. ಈ ಬಾರಿ ಸಾಲದ ಪ್ರಮಾಣ ಮತ್ತಷ್ಟು ಏರಿಕೆಯಾಗಿರುವುದರಿಂದ ರಾಜ್ಯದ ಜನರ ಮೇಲಿನ ಸಾಲದ ಹೊರೆಯೂ ಉಲ್ಬಣವಾಗಿದೆ.

ABOUT THE AUTHOR

...view details