ಬೆಂಗಳೂರು: ನಗರದಲ್ಲಿ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿರುವ ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಪೊಲೀಸ್ ಕಮೀಷನರೇಟ್ ವ್ಯಾಪ್ತಿಯ 8 ಕಾನೂನು ಹಾಗೂ ಸುವ್ಯವಸ್ಥೆ ವಿಭಾಗಗಳಲ್ಲಿರುವ ಡಿಸಿಪಿಗಳ ಜೊತೆಗೆ ವಲಯಕ್ಕೊಂದು ಹೆಚ್ಚುವರಿ ಉಪ ಪೊಲೀಸ್ ಆಯುಕ್ತ ಹುದ್ದೆ ಸೃಷ್ಟಿಸುವಂತೆ ಕೋರಿ ರಾಜ್ಯ ಸರ್ಕಾರಕ್ಕೆ ರಾಜ್ಯ ಪೊಲೀಸ್ ಇಲಾಖೆ ಪ್ರಸ್ತಾವ ಸಲ್ಲಿಸಿದೆ.
ರಾಜ್ಯದ ಆಯಾ ಜಿಲ್ಲೆಗಳಲ್ಲಿ ಎಸ್ಪಿ ಜೊತೆಗೆ ಹೆಚ್ಚುವರಿ ಉಪಪೊಲೀಸ್ ಆಯುಕ್ತರು ಈಗಾಗಲೇ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ ಬೆಂಗಳೂರಿನಂತಹ ಮಹಾನಗರದಲ್ಲಿ ಆಯಾ ವಿಭಾಗದಲ್ಲಿ ಡಿಸಿಪಿ ಮಾತ್ರವಿದ್ದು, ಹೆಚ್ಚುವರಿ ಉಪಪೊಲೀಸ್ ಆಯುಕ್ತರಿಲ್ಲ. ಹೀಗಾಗಿ ಅಪರಾಧ ಪ್ರಕರಣಕ್ಕೆ ನಿಯಂತ್ರಣ, ಬಂದೋಬಸ್ತ್ ಹಾಗೂ ತನಿಖಾ ಮೇಲ್ವಿಚಾರಣೆ ಸೇರಿದಂತೆ ಮುಂತಾದ ಆಡಳಿತ ವ್ಯವಸ್ಥೆಯನ್ನ ಪರಿಣಾಮಕಾರಿ ಜಾರಿ ತರಲು ಎಂಟು ವಲಯಗಳಲ್ಲಿ ಎಂಟು ಹೆಚ್ಚುವರಿ ಉಪ ಪೊಲೀಸ್ ಆಯುಕ್ತರ ಹೊಸ ಹುದ್ದೆಗಳ ಅಗತ್ಯವಿದ್ದು, ಈ ಸಂಬಂಧ ಪೊಲೀಸ್ ಇಲಾಖೆಯಿಂದ ಗೃಹ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ನಗರದಲ್ಲಿ 1 ಕೋಟಿಗಿಂತ ಹೆಚ್ಚು ಜನರು ವಾಸವಾಗಿದ್ದಾರೆ. ಪ್ರತಿನಿತ್ಯ ನಗರದಲ್ಲಿ ನೂರಾರು ಪ್ರಕರಣ ದಾಖಲಾಗುತ್ತಿದೆ. ಪೊಲೀಸರು ಸಮಗ್ರ ತನಿಖೆ ನಡೆಸಿ ಸಕಾಲಕ್ಕೆ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಬೇಕು. ಅದರೊಂದಿಗೆ ವಿವಿಧ ಬೇಡಿಕೆ ಈಡೇರಿಕೆಗಾಗಿ ಆಗ್ರಹಿಸಿ ನಗರದಲ್ಲಿ ನಡೆಯುವ ಪ್ರತಿಭಟನೆ-ಧರಣಿ ಹಾಗೂ ಸಭೆ-ಸಮಾರಂಭಗಳಿಗೆ ಪೊಲೀಸ್ ಬಂದೋಬಸ್ತ್ ನೀಡಬೇಕು. ನಗರಕ್ಕೆ ಬರುವ ವಿವಿಐಪಿಗಳಿಗೂ ಭದ್ರತೆ ಒದಗಿಸುವ ಜವಾಬ್ದಾರಿವಿದೆ. ಅಪರಾಧ ಪ್ರಕರಣ ಹತ್ತಿಕ್ಕಿಸಲು ಹಾಗೂ ಆಡಳಿತದಲ್ಲಿ ಪಾರದರ್ಶಕತೆ ತರಲು ಆಯಾ ವಿಭಾಗದ ಡಿಸಿಪಿಗಳಿಗೆ ಕಷ್ಟವಾಗುತ್ತಿದೆ. ಅಲ್ಲದೆ ಡಿಸಿಪಿ ಅನುಪಸ್ಥಿತಿಯಲ್ಲಿ ನಿಭಾಯಿಸಲು ಹೆಚ್ಚುವರಿ ಪೊಲೀಸ್ ಆಯುಕ್ತರ ಹುದ್ದೆ ಅಗತ್ಯವಾಗಿದ್ದು ಮಂಜೂರು ಮಾಡುವಂತೆ ಕೋರಲಾಗಿದೆ.
ಎಸಿಪಿ, ಪಿಐ, ಪಿಎಸ್ಐ ಹುದ್ದೆಗಳು ಮೇಲ್ದರ್ಜೆಗೆ:8 ಕಾನೂನು ಸುವ್ಯವಸ್ಥೆ ವಿಭಾಗಗಳಿಗೆ ಹೆಚ್ಚುವರಿ ಉಪ ಪೊಲೀಸ್ ಆಯುಕ್ತರ ಹುದ್ದೆಗಳನ್ನು ಹಾಲಿವಿರುವ ಎಸಿಪಿ ದರ್ಜೆ ಹುದ್ದೆಗಳನ್ನು ಮೇಲ್ದರ್ಜೆಗೇರಿಸಬೇಕು. ಎಸಿಪಿ ದರ್ಜೆಯ ಹುದ್ದೆಯನ್ನು ಹಾಲಿ ಇರುವ ಇನ್‌ಸ್ಪೆಕ್ಟರ್ ಹುದ್ದೆ ಮೇಲ್ದರ್ಜೆಗೆ ಹಾಗೂ ಸಬ್ ಇನ್ ಸ್ಪೆಕ್ಟರ್ ಹುದ್ದೆಗಳನ್ನು ಇನ್ ಸ್ಪೆಕ್ಟರ್ ಹುದ್ದೆಗಳನ್ನು ಮೇಲ್ದರ್ಜೆಗೇರಿಸಿ ಸೃಜನೆ ಮಾಡುವ ಅಗತ್ಯವಿದೆ.