ಬೆಂಗಳೂರು :ಇಂದು ನಡೆದ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ(ಟಿಇಟಿ)ಗೆ ಶೇ.8ರಷ್ಟು ಅಭ್ಯರ್ಥಿಗಳು ಗೈರಾಗಿದ್ದರು. ಕೋವಿಡ್ ಮಾರ್ಗಸೂಚಿಯಂತೆ ಇಂದು ಟಿಇಟಿ ಪರೀಕ್ಷೆ ನಡೆದಿದ್ದು, ಎರಡು ಪತ್ರಿಕೆ ಸೇರಿ ಶೇ.8ರಷ್ಟು ಅಭ್ಯರ್ಥಿಗಳು ಪರೀಕ್ಷೆಗೆ ಗೈರು ಹಾಜರಾಗಿದ್ದಾರೆ.
ಶೇ.92ರಷ್ಟು ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪರೀಕ್ಷೆಯ ಪತ್ರಿಕೆ-1ಕ್ಕೆ ನೋಂದಾಯಿಸಿಕೊಂಡ ಒಟ್ಟು 1,02,281 ಅಭ್ಯರ್ಥಿಗಳಲ್ಲಿ 93,151 ಹಾಜರಾಗಿದ್ದು, 9130 ಅಭ್ಯರ್ಥಿಗಳು ಗೈರು ಹಾಜರಾಗಿರುತ್ತಾರೆ.
ಅದರಂತೆ ಪತ್ರಿಕೆ-2ಕ್ಕೆ ನೋಂದಾಯಿಸಿಕೊಂಡ ಒಟ್ಟು 1,49,551 ಅಭ್ಯರ್ಥಿಗಳಲ್ಲಿ 1,38,455 ಹಾಜರಾಗಿದ್ದು, 11,096 ಅಭ್ಯರ್ಥಿಗಳು ಹಾಜರಾಗಿರುತ್ತಾರೆ. ಒಟ್ಟಾರೆ ಪತ್ರಿಕೆ-1ರಲ್ಲಿ ಶೇ.91ರಷ್ಟು ಮತ್ತು ಪತ್ರಿಕೆ-2ರಲ್ಲಿ ಶೇ.93ರಷ್ಟು ಹಾಜರಾತಿ ಇದೆ.
ಓದಿ: ರಾಜ್ಯದಲ್ಲಿಂದು 1189 ಹೊಸ ಪಾಸಿಟಿವ್ ಪ್ರಕರಣ : 22 ಸೋಂಕಿತರು ಬಲಿ
ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆಯು ಭಾಷೆ-1 ಮತ್ತು ಭಾಷೆ-2ರಲ್ಲಿ ಎಂಟು ಭಾಷೆಗಳನ್ನು (ಕನ್ನಡ, ಇಂಗ್ಲಿಷ್, ಉರ್ದು, ತಮಿಳು, ತೆಲುಗು, ಮರಾಠಿ, ಹಿಂದಿ ಮತ್ತು ಸಂಸ್ಕೃತ) ಹಾಗೂ ಐಚ್ಛಿಕ ವಿಷಯದ ಪತ್ರಿಕೆಗಳು ಏಳು ಭಾಷಾ ಮಾಧ್ಯಮಗಳನ್ನು (ಕನ್ನಡ, ಇಂಗ್ಲೀಷ್, ಉರ್ದು, ತಮಿಳು, ತೆಲುಗು, ಮರಾಠಿ, ಮತ್ತು ಹಿಂದಿ) ಒಳಗೊಂಡಿತ್ತು.