ಬೆಂಗಳೂರು: ಮತದಾನದ ಬಗ್ಗೆ ನಗರ ಮತ್ತು ಯುವ ಜನತೆಯಲ್ಲಿರುವ ನಿರಾಸಕ್ತಿಯನ್ನು ಹೋಗಲಾಡಿಸುವುದು ಚುನಾವಣಾ ಆಯೋಗದ ಪ್ರಮುಖ ಸವಾಲಾಗಿದೆ ಎಂದು ಭಾರತ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಹೇಳಿದರು. ರಾಜ್ಯ ಪ್ರವಾಸದಲ್ಲಿರುವ ಭಾರತ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ನೇತೃತ್ವದ ನಿಯೋಗ ಶುಕ್ರವಾರ ಮತದಾನದ ಮಹತ್ವ ತಿಳಿಸುವ ನಿಟ್ಟಿನಲ್ಲಿ ನಗರದ ಜೆ.ಎನ್. ಟಾಟಾ ಆಡಿಟೋರಿಮ್ನಲ್ಲಿ ರಾಜ್ಯ ಚುನಾವಣಾ ಆಯೋಗ ಮತ್ತು ಬಿಬಿಎಂಪಿ ಜಂಟಿಯಾಗಿ ಆಯೋಜಿಸಿದ್ದ ವೋಟ್ಸ್ಟ್ನಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮತದಾನದ ಬಗ್ಗೆ ಜನರಲ್ಲಿ ಅದರಲ್ಲೂ ಮುಖ್ಯವಾಗಿ ನಗರ ಪ್ರದೇಶದ ಹಾಗೂ ಯುವ ಜನರಲ್ಲಿರುವ ನಿರಾಸಕ್ತಿಯನ್ನು ಹೋಗಲಾಡಿಸುವುದು ಚುನಾವಣಾ ಆಯೋಗದ ಮುಂದೆ ಇರುವ ಪ್ರಮುಖ ಸವಾಲಾಗಿದೆ. ಜನರು ಮತದಾನದಲ್ಲಿ ಪಾಲ್ಗೊಳ್ಳದೇ ಇರುವ ಕಾರಣಗಳು, ನಂಬಿಕೆಗಳು, ಅಡೆತಡೆಗಳು, ಸವಾಲುಗಳನ್ನ ಅರ್ಥ ಮಾಡಿಕೊಳ್ಳುವುದು ಬಹಳ ಕ್ಲಿಷ್ಟಕರವಾಗಿದೆ ಎಂದು ತಿಳಿಸಿದರು.
ನಿರಾಸಕ್ತಿಯ ಮತದಾರರನ್ನ ಬದಲಾಯಿಸುವುದು ಬಹಳಷ್ಟು ಸಮಯ ತಗೆದುಕೊಳ್ಳುತ್ತದೆ. ಪ್ರಜಾಪ್ರಭುತ್ವದ ಹಬ್ಬವಾಗಿರುವ ಮತದಾನದಲ್ಲಿ ಜನರು ಆಸಕ್ತಿಯನ್ನು ತೋರುವಂತೆ ಮಾಡಬೇಕಾಗಿದೆ. ಇಂದಿನ ಯುವ ಜನತೆ ತಮ್ಮ ಒಂದು ಮತದಿಂದ ಯಾವುದೇ ಪರಿಣಾಮ ಬೀರುವುದಿಲ್ಲ ಎನ್ನುವ ತಪ್ಪು ತಿಳುವಳಿಕೆಯಲ್ಲಿದ್ದಾರೆ. ಇದನ್ನ ಹೋಗಲಾಡಿಸುವ ದೊಡ್ಡ ಸವಾಲು ನಮ್ಮ ಎದುರಿಗಿದೆ ಎಂದರು.
8 ಎಲ್‌ಇಡಿ ಜಾಗೃತಿ ಮೊಬೈಲ್ ವ್ಯಾನ್ಗೆ ಚಾಲನೆ:ಮತದಾರರ ಹೆಸರು ಪರಿಶೀಲನೆ, ಮತದಾನ ಜಾಗೃತಿ ಸೇರಿದಂತೆ ಮುಂತಾದ ಮಾಹಿತಿಗಳನ್ನು ಒದಗಿಸುವ 8 ಎಲ್‌ಇಡಿ ಮೊಬೈಲ್ ವ್ಯಾನ್‌ಗಳಿಗೆ ಚುನಾವಣಾ ಆಯುಕ್ತ ಚಾಲನೆ ನೀಡಿದರು. ಒಂದು ತಿಂಗಳ ಕಾಲ ಈ ಮೊಬೈಲ್ ವ್ಯಾನ್ ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳಲ್ಲಿ ಸಂಚರಿಸಲಿದೆ. ಈ ವೇಳೆ ಹಿರಿಯ ಮತ್ತು ತೃತಿಯ ಲಿಂಗಿ ಮತದಾರರಿಗೆ ಸನ್ಮಾನಿಸಲಾಯಿತು. ಜೊತೆಗೆ ಯುವ ಮತದಾರರಿಗೆ ಮತದಾರ ಚೀಟಿ ವಿತರಣೆ ಮಾಡಲಾಯಿತು. ನಂತರ ಚಿತ್ರಕಲಾವಿದರಿಂದ ಮುಖ್ಯಚುನಾವಣಾ ಆಯುಕ್ತರ ಹಾಗೂ ಮತದಾನದ ಜಾಗೃತಿ ಕುರಿತ ಚಿತ್ರವನ್ನು ಕಲಾವಿದರು ಸ್ಥಳದಲ್ಲಿಯೇ ಚಿತ್ರಿಸಿದರು.