ಯಲಹಂಕ :ಬೆಂಗಳೂರು ಕೃಷಿ ವಿಶ್ವವಿದ್ಯಾಲಯ(ಜಿಕೆವಿಕೆ)ಆವರಣದಲ್ಲಿ ನಡೆಯುತ್ತಿರುವ ಕೃಷಿ ಮೇಳ-2021ಕ್ಕೆ(gkvk krishi mela)ಇಂದು ತೆರೆ ಬಿದ್ದಿದೆ. ನವೆಂಬರ್ 11ರಂದು ಕೃಷಿ ಮೇಳಕ್ಕೆ ಚಾಲನೆ ಸಿಕ್ಕಿತ್ತು.
ನಾಲ್ಕು ದಿನಗಳು ನಡೆದ ಮೇಳದಲ್ಲಿ 8 ಲಕ್ಷ ಜನರು ಭೇಟಿ ನೀಡಿ ಕೃಷಿ ಆವಿಷ್ಕಾರಗಳ ಬಗ್ಗೆ ಮಾಹಿತಿ ಪಡೆದರು. ಸಾಮಾಜಿಕ ಜಾಲತಾಣಗಳಲ್ಲಿ 38.11 ಲಕ್ಷ ಜನರು ಕೃಷಿ ಮೇಳ ವೀಕ್ಷಣೆ ಮಾಡಿದ್ದಾರೆ. ಕೃಷಿ ವಸ್ತು ಪ್ರದರ್ಶನ ಮತ್ತು ಮಾರಾಟದ ಮಳಿಗೆಗಳಲ್ಲಿ 4.25 ಕೋಟಿ ವಹಿವಾಟು ನಡೆದಿದೆ.
ಯಲಂಹಕ ಬಳಿಯ ಬೆಂಗಳೂರು ಕೃಷಿ ವಿಶ್ವವಿದ್ಯಾಲಯ (ಜಿಕೆವಿಕೆ) ಆವರಣದಲ್ಲಿ ನಡೆದ ಕೃಷಿಮೇಳದ ಸಮಾರೋಪ ಸಮಾರಂಭದಲ್ಲಿ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್( (governor Thawar Chand Gehlot ಭಾಗವಹಿಸಿದರು. ಮೊದಲಿಗೆ 10 ನೂತನ ತಳಿಗಳ ಪ್ರಾತ್ಯಕ್ಷಿತೆಯನ್ನ ವೀಕ್ಷಣೆ ಮಾಡಿ, ನಂತರ ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಕಳದೆ 57 ವರ್ಷಗಳಲ್ಲಿ 200ಕ್ಕೂ ಹೆಚ್ಚು ಪ್ರಭೇದಗಳನ್ನು ಮತ್ತು 334 ಕೃಷಿ ತಂತ್ರಜ್ಞಾನಗಳನ್ನ ಬಿಡುಗಡೆ ಮಾಡಿದೆ. ಕೃಷಿ ಅಭಿವೃದ್ಧಿ ವಿಶ್ವವಿದ್ಯಾಲಯ ಪ್ರಮುಖ ಪಾತ್ರವನ್ನ ವಹಿಸಿದೆ.
ವಿಶ್ವವಿದ್ಯಾಲಯದ ಪ್ರತಿಯೊಂದು ಕೃಷಿ ವಿಜ್ಞಾನ ಕೇಂದ್ರವು ತಲಾ ಒಂದು ಗ್ರಾಮವನ್ನು ದತ್ತು ತೆಗೆದುಕೊಂಡು ಜಿಲ್ಲಾ ಮಟ್ಟದಲ್ಲಿ ಮಾದರಿ ಗ್ರಾಮವನ್ನಾಗಿ ಮಾಡುತ್ತಿರುವುದಕ್ಕೆ ಶ್ಲಾಘಿಸಿದರು.
ಕೃಷಿ ಸಾಧಕರಿಗೆ ಪ್ರಶಸ್ತಿ ಪ್ರದಾನ :ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನ ಮಾಡಲಾಗಿತು, ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ರಾಜ್ಯ ಮಟ್ಟದ ಅತ್ಯುತ್ತಮ ರೈತ ಪ್ರಶಸ್ತಿಯನ್ನ ಎಂ.ಸಿ. ರಂಗಸ್ವಾಮಿ, ಡಾ. ಎಂ.ಹೆಚ್, ಮರೀಗೌಡ ರಾಜ್ಯ ಮಟ್ಟದ ಅತ್ಯುತ್ತಮ ತೋಟಗಾರಿಕೆ ಪ್ರಶಸ್ತಿ ಟಿ.ಎಂ. ಅರವಿಂದ, ಕ್ಯಾನ್ ಬ್ಯಾಂಕ್ ರಾಜ್ಯ ಮಟ್ಟದ ಅತ್ಯುತ್ತಮ ರೈತ ಮಹಿಳಾ ಪ್ರಶಸ್ತಿ ವೈ.ಜಿ. ಮಂಜುಳ, ಕ್ಯಾನ್ ಬ್ಯಾಂಕ್ ರಾಜ್ಯ ಮಟ್ಟದ ಅತ್ಯುತ್ತಮ ರೈತ ಪ್ರಶಸ್ತಿ ನವೀನ್ ಕುಮಾರ್ , ಡಾ. ಆರ್, ದ್ವಾರಕೀನಾಥ್ ಅತ್ಯುತ್ತಮ ರೈತ ಪ್ರಶಸ್ತಿ ಮುನಿರೆಡ್ಡಿ, ಡಾ. ಆರ್, ದ್ವಾರಕೀನಾಥ್ ಅತ್ಯುತ್ತಮ ವಿಸ್ತರಣಾ ಕಾರ್ಯಕರ್ತ ಪ್ರಶಸ್ತಿ ಡಾ.ಎಂ.ಪಿ. ಮಲ್ಲಿಕಾರ್ಜುನಗೌಡ, ಡಾ.ಎಂ.ಹೆಚ್, ಮರೀಗೌಡ ಅತ್ಯುತ್ತಮ ತೋಟಗಾರಿಕಾ ಸಂಶೋಧನಾ ರಾಷ್ಟ್ರಿಯ ದತ್ತಿ ಪ್ರಶಸ್ತಿ ಡಾ.ಹೆಚ್.ಪಿ, ಮಹೇಶ್ವರಪ್ಪರಿಗೆ ಕೊಟ್ಟು ಗೌರವಿಸಲಾಯಿತು.
ಕೃಷಿ ಮೇಳ-2021ಕ್ಕೆ ಭೇಟಿ ನೀಡಿದ 8 ಲಕ್ಷ ಜನರು :ನಾಲ್ಕು ದಿನಗಳು ನಡೆದ ಕೃಷಿ ಮೇಳ -2021ಕ್ಕೆ 8 ಲಕ್ಷ ಜನರು ಭೇಟಿ ನೀಡಿ ಕೃಷಿ ಮಾಹಿತಿ ಪಡೆದರು. ಮೊದಲನೆ ದಿನ- 66 ಸಾವಿರ, ಎರಡನೇಯ ದಿನ 1.70 ಲಕ್ಷ, ಮೂರನೇ ದಿನ 3 ಲಕ್ಷ, ನಾಲ್ಕನೇ ದಿನ 2.64 ಲಕ್ಷ ಜನರು ಭೇಟಿ ನೀಡಿದ್ದಾರೆ.
ಕೃಷಿ ಮೇಳ-2021 ಅನ್ನು ಸಾಮಾಜಿಕ ಜಾಲತಾಣಗಳಲ್ಲಿ ನೇರ ಪ್ರಸಾರ ಮಾಡಲಾಗಿದೆ. ನಾಲ್ಕು ದಿನಗಳಲ್ಲಿ ಒಟ್ಟು 38.11 ಲಕ್ಷ ಜನರು ವೀಕ್ಷಣೆ ಮಾಡಿದ್ದಾರೆ. ಮೊದಲನೆಯ ದಿನ 1.62 ಲಕ್ಷ, ಎರಡನೇ ದಿನ 5.2 ಲಕ್ಷ, ಮೂರನೇ ದಿನ 13.00 ಲಕ್ಷ, ನಾಲ್ಕನೇ ದಿನ 18.29 ಲಕ್ಷ ಜನರು ವೀಕ್ಷಣೆ ಮಾಡಿದ್ದಾರೆ. ಕೃಷಿ ಮೇಳದಲ್ಲಿ ಕೃಷಿ ಪರಿಕರಗಳ ಮಾರಾಟಕ್ಕೆ ಅವಕಾಶ ಇದ್ದು, ನಾಲ್ಕು ದಿನದಲ್ಲಿ 4 ಕೋಟಿ 25 ಲಕ್ಷ ವಹಿವಾಟು ನಡೆದಿದೆ.