ಜಿಲ್ಲಾಧಿಕಾರಿ ಆರ್ ಲತಾ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದರು. ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಒಟ್ಟು 8,67,909 ಮತದಾರರಿದ್ದು, ಪುರುಷ ಮತದಾರರರು 4,31,163 ಮಹಿಳಾ ಮತದಾರರು 4,36,625 ಇದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿ ಆರ್ ಲತಾ ಹೇಳಿದರು.
ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ 2023 ಘೋಷಣೆ ಹಿನ್ನೆಲೆ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ಜಿಲ್ಲೆಯಲ್ಲಿ ಒಟ್ಟು 8,67,909 ಮತದಾರರಲ್ಲಿ ತೃತೀಯ ಲಿಂಗಿಗಳು 121, ವಿಲಕಚೇತನರು 12,481, 80 ವರ್ಷಗಳಿಗಿಂತ ಮೇಲ್ಪಟ್ಟವರು 20,324 ಮತದಾರರು ಮತ್ತು ಪ್ರತಿ ಸಾವಿರ ಪುರುಷರಿಗೆ 1012 ಮಹಿಳೆಯರಂತೆ ಅನುಪಾತವಿರುವುದಾಗಿ ಮಾಹಿತಿ ನೀಡಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 26 ಚೆಕ್ ಪೋಸ್ಟ್ಗಳಿದ್ದು, 1 ಅಂತರರಾಜ್ಯ, 17 ಅಂತರ ಜಿಲ್ಲೆ ಹಾಗೂ ಜಿಲ್ಲಾ ವ್ಯಾಪ್ತಿಯೊಳಗೆ 8 ಚೆಕ್ ಪೋಸ್ಟ್ಗಳು ಕಾರ್ಯನಿರ್ವಹಿಸುತ್ತಿವೆ. 45 ಪ್ಲೇಯಿಂಗ್ ಸ್ಕ್ವಾಡ್ ತಂಡಗಳು, ವಿಡಿಯೋ ಚಿತ್ರೀಕರಣ 10 ತಂಡಗಳು, ಇದರ ನಿಗಾ ವಹಿಸಲು 8 ವೆಚ್ಚ ನಿರ್ವಹಣಾ ತಂಡಗಳು ಕಾರ್ಯನಿರ್ವಹಿಸುತ್ತಿವೆ. ಸುವಿಧದಲ್ಲಿ ಆನ್‌ಲೈನ್ ಮೂಲಕ ನಾಮಪತ್ರ ಸಲ್ಲಿಸಲು ಹಾಗೂ ಸಭೆ ಸಮಾರಂಭಗಳಿಗೆ ಅನುಮತಿ ಪಡೆಯಲು ಅವಕಾಶವಿರುವುದಾಗಿ ಅವರು ತಿಳಿಸಿದರು.
ಜಿಲ್ಲೆಯಲ್ಲಿ ಒಟ್ಟು 1137 ಮತಗಟ್ಟೆ:ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಒಟ್ಟು 1137 ಮತಗಟ್ಟೆಗಳಿವೆ. ಅವುಗಳಲ್ಲಿ 879 ಗ್ರಾಮಾಂತರ ಹಾಗೂ ನಗರ ವ್ಯಾಪ್ತಿಯಲ್ಲಿ 258 ಮತಗಟ್ಟೆಗಳು ಕಾರ್ಯನಿರ್ವಹಿಸಲಿವೆ. ಹೊಸಕೋಟೆ ವಿಧಾನಸಭಾ ಕ್ಷೇತ್ರಕ್ಕೆ ಚುನಾವಣಾಧಿಕಾರಿಗಳಾಗಿ ಗಂಗಪ್ಪ, ದೇವನಹಳ್ಳಿ ಕ್ಷೇತ್ರಕ್ಕೆ ಪ್ರತಿಭಾ, ದೊಡ್ಡಬಳ್ಳಾಪುರ – ತೇಜಸ್ ಕುಮಾರ್, ನೆಲಮಂಗಲ - ಅಪೂರ್ವ ಬಿದರಿ ಅವರು ಕಾರ್ಯನಿರ್ವಹಿಸುವರು ಎಂದು ತಿಳಿಸಿದರು.
ಜಿಲ್ಲೆಯ 1137 ಮತ ಕ್ಷೇತ್ರಗಳಲ್ಲಿ ಶೇಕಡಾ 50 ರಷ್ಟು ಮತಗಟ್ಟೆಗಳಲ್ಲಿ ವೆಬ್‌ಕ್ಯಾಸ್ಟಿಂಗ್ ಸೌಲಭ್ಯ ಸೇರಿದಂತೆ ಈ ಎಲ್ಲ ಮತಕ್ಷೇತ್ರಗಳಲ್ಲಿ ಸಕಲ ಮೂಲ ಸೌಲಭ್ಯಗಳನ್ನು, ಕಾನೂನು ಸುವ್ಯವಸ್ಥೆಗಳನ್ನು ಕಲ್ಪಿಸಿರುವುದಾಗಿ ಮಾಹಿತಿ ನೀಡಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ತಾಲೂಕಿಗೆ 5 ರಂತೆ ಮಹಿಳೆಯರನ್ನು ಒಳಗೊಂಡಿರುವ ಒಟ್ಟು 20 ವಿಶೇಷ ಮಹಿಳಾ ಮತಗಟ್ಟೆ ಕ್ಷೇತ್ರಗಳು ಕಾರ್ಯನಿರ್ವಹಿಸಲಿವೆ. ವಿಕಲಚೇತನರಿಗೆ ಪ್ರೋತ್ಸಾಹ ನೀಡಲು ತಾಲೂಕಿಗೆ 1 ರಂತೆ ಒಟ್ಟು 4 ವಿಕಲಚೇತನರ ಮತಗಟ್ಟೆ ಕ್ಷೇತ್ರಗಳು, ಜಿಲ್ಲೆಯ ಜನತೆಯನ್ನು ಮತದಾನ ಪ್ರಕ್ರಿಯೆಗೆ ಆಕರ್ಷಿಸುವ ನಿಟ್ಟಿನಲ್ಲಿ ಒಟ್ಟು 8 ಮಾದರಿ ಮತಗಟ್ಟೆ ಕೇತ್ರಗಳು ಕಾರ್ಯನಿರ್ವಹಿಸುವುದಾಗಿ ತಿಳಿಸಿದರು.
80 ವರ್ಷ ಮೇಲ್ಪಟ್ಟ ಹಿರಿಯ ಮತದಾರರು ಮನೆಯಿಂದ ಮತಚಲಾಯಿಸುವ ಅವಕಾಶವನ್ನು ಈ ಬಾರಿ ಆಯೋಗ ಕಲ್ಪಿಸಿದೆ. ಆದರೆ ಮತದಾನವನ್ನು ಹಾಗೂ ಚುನಾವಣೆ ಪ್ರಕ್ರಿಯೆಯನ್ನು ಒಂದು ಹಬ್ಬ ಎಂದು ಆಚರಿಸುವ ನಿಟ್ಟಿನಲ್ಲಿ ಹಿರಿಯ ಮತದಾರರು ಮತಗಟ್ಟೆಗಳಿಗೆ ಬಂದು ಮತ ಚಲಾಯಿಸಿದರೆ ಉತ್ತಮ ಎಂದು ಹೇಳಿದರು. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ ರವಿ ಎಂ ತಿರ್ಲಾಪೂರ ಮಾತನಾಡಿ, ಜಿಲ್ಲೆಯಲ್ಲಿ 32 000 ರಷ್ಟು ಬ್ಯಾನರ್ ಬಂಟಿಂಗ್ಸ್, ಪೋಸ್ಟರ್‌ಗಳನ್ನು ತೆರವುಗೊಳಿಸುವುದಾಗಿ ತಿಳಿಸಿದರು.
ಜಿಲ್ಲಾ ಪೋಲೀಸ್ ವರಿಷ್ಟಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಅವರು ಮಾತನಾಡಿ, ಸುವ್ಯಸ್ಥಿತ ಚುನಾವಣಾ ಪ್ರಕ್ರಿಯೆಗೆ ಸಕಲ ಪೋಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿದೆ. ಗ್ರಾಮಾಂತರ ಜಿಲ್ಲೆಯ 26 ಚೆಕ್ ಪೋಸ್ಟ್ಗಳಲ್ಲಿ ಸೂಕ್ತ ಸಿಬ್ಬಂದಿ ವ್ಯವಸ್ಥೆ ಇರುವುದಾಗಿ ತಿಳಿಸಿದರು. ಅವ್ಯವಹಾರ ದೂರುಗಳು ಕಂಡುಬಂದಲ್ಲಿ ಸ್ಥಳೀಯ ಪೊಲೀಸ್ ಅಧಿಕಾರಿಗಳನ್ನು ಸಂಪರ್ಕಿಸಿ ದೂರು ದಾಖಲಿಸಬಹುದೆಂದು ತಿಳಿಸಿದರು.
ಇದನ್ನೂಓದಿ:ಮತದಾರರನ್ನು ಸೆಳೆಯುವ ಶೇ.50ರಷ್ಟು ಪ್ರಕ್ರಿಯೆ ಮುಗಿದಿದೆ: ಹೆಚ್ಡಿಕೆ