ಬೆಂಗಳೂರು:ಕಾಡುಮಲ್ಲೇಶ್ವರ ಗೆಳಯರ ಬಳಗ ಹಾಗೂ ಮುಜರಾಯಿ ಇಲಾಖೆ ಸಹಕಾರದಲ್ಲಿ ಮಲ್ಲೇಶ್ವಂ 15ನೇ ಕ್ರಾಸ್ ನಲ್ಲಿರುವ ಕಾಡುಮಲ್ಲೇಶ್ವರ ದೇವಾಲಯದಲ್ಲಿ ಕಾರ್ತಿಕ ಮಾಸದ ಸಂದರ್ಭದಲ್ಲಿ ಪ್ರತಿವರ್ಷದಂತೆ ಡಿಸೆಂಬರ್ 2ರಿಂದ 4 ರ ವರೆಗೆ ಕಡಲೆಕಾಯಿ ಪರಿಷೆ ಮತ್ತು ಬಯಲು ರಂಗ ಮಂಟಪದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಇಂದು ಕಾಡುಮಲ್ಲೇಶ್ವರ ದೇವಾಲಯದ ಆವರಣದಲ್ಲಿ ನಡೆದ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಕಾಡುಮಲ್ಲೇಶ್ವರ ಗೆಳಯರ ಬಳಗದ ಅಧ್ಯಕ್ಷ ಬಿ.ಕೆ. ಶಿವರಾಂ ಅವರು, ಕಾಡುಮಲ್ಲೇಶ್ವರದಲ್ಲಿ 7ನೇ ವರ್ಷದ ಕಡಲೆಕಾಯಿ ಪರಿಷೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಮೂರು ದಿನಗಳ ಕಾಲ ಜರುಗಲಿದೆ. ಈ ಸಂಧರ್ಭದಲ್ಲಿ 800 ಕೆಜಿ ಕಡಲೆಕಾಯಿಗಳಿಂದ ಶೃಂಗರಿಸಿದ 20 ಅಡಿ ಎತ್ತರ, 20 ಅಡಿ ಉದ್ದದ ನಂದಿಯನ್ನು ಇಡಲಾಗುತ್ತದೆ ಎಂದು ತಿಳಿಸಿದರು.
ಡಿಸೆಂಬರ್ 2ರಂದು ಬೆಳಗ್ಗೆ 11 ಗಂಟೆಗೆ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಮತ್ತು ಮುಜರಾಯಿ, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಬಿ ಕೆ ಹರಿಪ್ರಸಾದ್, ಶಾಸಕ ಮುನಿರತ್ನ, ಡಾ. ಸಿ.ಎನ್. ಅಶ್ವಥ್ ನಾರಾಯಣ್ ಅವರು ಕಡಲೆಕಾಯಿ ಪರಿಷೆ ಉದ್ಘಾಟನೆಯನ್ನು ಹಸಿರು ಚೈತನ್ಯೋತ್ಸವದ ಗಿಡ ನೆಡುವ ಮೂಲಕ ಚಾಲನೆ ನೀಡಲಿದ್ದಾರೆ. ಅಂದು ಸಂಜೆ ಜಿತ್ವಾವನ ಮಹಿಳಾ ಯಕ್ಷಗಾನ ಮಂಡಳಿಯ ಶೈಲಜಾ ಜೋಶಿ ಮತ್ತು ತಂಡದವರಿಂದ ಯಕ್ಷಗಾನ ಕಲಾ ಪ್ರದರ್ಶನವಿದೆ ಎಂದು ಮಾಹಿತಿ ನೀಡಿದರು.
ಡಿಸೆಂಬರ್ 3ರಂದು ಬೆಳಗ್ಗೆ 11. 30ಕ್ಕೆ ಪಂಚಮ ಸಂಗೀತ ತಂಡದ ಎಲ್. ಶಿವಕುಮಾರ್ ಮತ್ತು ತಂಡದವರಿಂದ ಸುಗಮ ಸಂಗೀತ ಮತ್ತು ಅಂದು ಸಂಜೆ ಮಧು ಮನೋಹರ್ ಮತ್ತು ಕಾರ್ತಿಕ್ ಪಾಂಡವಪುರ ತಂಡದವರಿಂದ ಗಾನ ಗಂಧರ್ವ ಕರ್ನಾಟಕ ರತ್ನ ಡಾ. ರಾಜ್ ಕುಮಾರ್ ಸವಿ ನೆನಪಿನಲ್ಲಿ ಮಧುರ ನೆನಪಿನಗಾನ ಕಾರ್ಯಕ್ರಮ ನೆಡೆಯಲಿದೆ. ಮುಖ್ಯ ಅತಿಥಿಗಳಾಗಿ ನವಯುವ ಹೋಟೆಲ್ ಮಾಲೀಕ ಮೋಹನ್ ರಾವ್ ಭಾಗವಹಿಸಲಿದ್ದಾರೆ ಎಂದರು.