ಬೆಂಗಳೂರು : ಸರ್ಕಾರಿ ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರು ಸೇರಿದಂತೆ ಇತರರ ವೇತನ, ತುಟ್ಟಿ ಭತ್ಯೆ ಹಾಗೂ ಇತರ ಸೌಲಭ್ಯಗಳನ್ನು ಪರಿಶೀಲಿಸಿ ಪರಿಷ್ಕರಿಸಿ ಸರ್ಕಾರಕ್ಕೆ ವರದಿ ಸಲ್ಲಿಸಲು ರಚಿಸಿರುವ 7 ನೇ ರಾಜ್ಯ ವೇತನ ಆಯೋಗವು ಪ್ರಶ್ನಾವಳಿಗಳನ್ನು ಬಿಡುಗಡೆ ಮಾಡಿದೆ. ಫೆ.10 ರೊಳಗಾಗಿ ಸಾರ್ವಜನಿಕರು ಈ ಕುರಿತು ಸಲಹೆ ಹಾಗೂ ಅಭಿಪ್ರಾಯಗಳನ್ನು ನೀಡಬಹುದು ಎಂದು ಹೇಳಿದೆ.
ಸರ್ಕಾರಿ ನೌಕರರು ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರು, ಸ್ಥಳೀಯ ಸಂಸ್ಥೆಗಳ ನೌಕರರು ಹಾಗೂ ವಿಶ್ವವಿದ್ಯಾಲಯಗಳ ಬೋಧಕೇತರ ಸಿಬ್ಬಂದಿಯ ವೇತನ, ತುಟ್ಟಿ ಭತ್ಯೆ ಹಾಗೂ ಇತರ ಸೌಲಭ್ಯಗಳ ಬಗ್ಗೆ ವರದಿ ನೀಡಲು ವೇತನ ಆಯೋಗ ರಚಿಸಲಾಗಿದೆ. ಆಯೋಗವು ಈ ಕುರಿತು ಸಾರ್ವಜನಿಕರು, ಸೇವಾ ಸಂಘಗಳು, ಸರ್ಕಾರಿ ನೌಕರರು, ಸಂಘ ಸಂಸ್ಥೆ, ಇಲಾಖೆಗಳಿಂದ ಮಾಹಿತಿ, ಅನಿಸಿಕೆ ಹಾಗೂ ಮುಕ್ತ ಸಲಹೆ ಪಡೆಯಲು ಜನವರಿ 17ರಂದು ಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಶ್ನಾವಳಿಗಳನ್ನು ಪ್ರಕಟಿಸಿತ್ತು.
ಈ ಪ್ರಶ್ನಾವಳಿಗಳು 7spc.Karnataka.gov.in ವೆಬ್‌ಸೈಟ್‌ನಲ್ಲೂ ಪ್ರಕಟಿಸಿದ್ದು, ಪ್ರಶ್ನಾವಳಿಗಳಿಗೆ ಉತ್ತರ, ಪ್ರತಿಕ್ರಿಯೆ ಅಥವಾ ಸಲಹೆಗಳನ್ನು ಫೆ.10ರ ಒಳಗಾಗಿ ನೀಡಬಹುದು. ಸಲಹೆ-ಸೂಚನೆ ನೀಡುವವರು 7 ನೇ ರಾಜ್ಯ ವೇತನಾ ಆಯೋಗ, 3ನೇ ಮಹಡಿ, ಹಳೆಯ ಕಲ್ಲುಕಟ್ಟಡ, ಔಷಧ ನಿಯಂತ್ರಣ ಇಲಾಖೆ, ಅರಮನೆ ರಸ್ತೆ, ಬೆಂಗಳೂರು-560001 ಇಲ್ಲಿಗೆ ಪತ್ರ ಬರೆಯಬಹುದು. ಅಥವಾ ದೂ.ಸಂಖ್ಯೆ 080-299070055 ಅಥವಾ ಇ ಮೇಲ್ ವಿಳಾಸ - spcgok@gmail.com ಮೂಲಕವೂ ಸಲ್ಲಿಸಬಹುದು ಎಂದು ಆಯೋಗದ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.