ಮಂಗಳೂರು (ದ.ಕ):ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಕೊರೊನಾ ರಾತ್ರಿ ಕರ್ಫ್ಯೂ ಉಲ್ಲಂಘಿಸಿರುವ 78 ವಾಹನಗಳನ್ನು ಭಾರತೀಯ ಮೋಟಾರು ವಾಹನ ಕಾಯ್ದೆಯಡಿ ವಶಪಡಿಸಿಕೊಳ್ಳಲಾಗಿದ್ದು, ಇವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪೊಲೀಸ್ ಕಮಿಷನರ್ ಶಶಿಕುಮಾರ್ ಎನ್. ಮಾಹಿತಿ ನೀಡಿದ್ದಾರೆ.
ತಮ್ಮ ಕಚೇರಿಯಲ್ಲಿ ಮಾತನಾಡಿದ ಅವರು, ಮೊದಲನೆಯ ದಿನ 65 ವಾಹನಗಳನ್ನು ಹಾಗೂ ಎರಡನೆಯ ದಿನ 13 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದರಲ್ಲಿ 70 ದ್ವಿಚಕ್ರ ಹಾಗೂ 8 ಚತುಷ್ಚಕ್ರ ವಾಹನಗಳಿವೆ ಎಂದು ಹೇಳಿದರು.
ಎನ್.ಶಶಿಕುಮಾರ್ ಸುದ್ದಿಗೋಷ್ಠಿ ಕೊರೊನಾ ರಾತ್ರಿ ಕರ್ಫ್ಯೂ ಬಗ್ಗೆ ಮಂಗಳೂರಿನ ಜನತೆ ಉತ್ತಮ ರೀತಿಯಲ್ಲಿ ಸ್ಪಂದನೆ ನೀಡುತ್ತಿದ್ದಾರೆ. ಬೇರೆ ಕಡೆಗಳಿಗೆ ಹೋಲಿಸಿದಲ್ಲಿ ಬೇರೆ ದಿನಗಳಲ್ಲಿಯೂ ಮಂಗಳೂರಿನಲ್ಲಿ ವಾಹನ ಸಂಚಾರ ಹಾಗೂ ಜನಗಳ ಓಡಾಟ ವಿರಳ ಎಂದರು.
ಕೆಲವು ಕಡೆಗಳಲ್ಲಿ ಹೊಟೇಲ್ ಹಾಗೂ ರೆಸ್ಟೋರೆಂಟ್ ಮುಚ್ಚುವುದೇ ರಾತ್ರಿ 9.30 ಬಳಿಕವಾದ್ದರಿಂದ ಹೊಟೇಲ್ನಲ್ಲಿ ನೌಕರಿ ಮಾಡುವವರು 10 ಗಂಟೆಯ ಬಳಿಕವೂ ಓಡಾಟ ಮಾಡುತ್ತಿರುವುದು ಕಂಡು ಬರುತ್ತಿದೆ. ಆದ್ದರಿಂದ ಈ ಬಗ್ಗೆ ಅವರ ಅಸೋಸಿಯೇಷನ್ ತಿಳಿಸಲಾಗುತ್ತದೆ. ಒಟ್ಟಾರೆ ರಾತ್ರಿ ರ್ಫ್ಯೂ ನಿಯಂತ್ರಣಕ್ಕೆ 54 ಚೆಕ್ ಪೋಸ್ಟ್ ಗಳನ್ನು ಮಾಡಲಾಗಿದ್ದು, ಅದೇ ರೀತಿ ಮುಂದುವರಿಯುತ್ತಿದೆ ಎಂದು ಶಶಿಕುಮಾರ್ ಎನ್. ಹೇಳಿದರು.