ದೇವನಹಳ್ಳಿ(ಬೆಂಗಳೂರು ಗ್ರಾ.):ದೇಶದೆಲ್ಲೆಡೆ ಇಂದು 77ನೇ ಸ್ವಾತಂತ್ರ್ಯ ದಿನಾಚಣೆ ಸಂಭ್ರಮ ಮನೆ ಮಾಡಿದೆ. ಅಂತೆಯೇ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿಯ ದೇವನಹಳ್ಳಿ ಪಟ್ಟಣದ ಜೂನಿಯರ್ ಕಾಲೇಜು ಮೈದಾನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಆಹಾರ ಸಚಿವ ಕೆ.ಹೆಚ್ ಮುನಿಯಪ್ಪ ಧ್ವಜಾರೋಹಣ ನೇರವೇರಿಸಿದರು.
ಧ್ವಜಾರೋಹಣ ನೇರವೇರಿಸಿ ತೆರೆದ ವಾಹನದಲ್ಲಿ ಸಚಿವರು ಪೊಲೀಸ್ ಹಾಗೂ ಶಾಲಾ ಮಕ್ಕಳ ತಂಡಗಳಿಂದ ಗೌರವ ವಂದನೆ ಸ್ಬೀಕರಿಸಿದರು. ಬಳಿಕ ಪೊಲೀಸ್ ಪಡೆ ಹಾಗೂ ಮಕ್ಕಳಿಂದ ಆಕರ್ಷಕ ಪಥಸಂಚಲನ ನಡೆಯಿತು. ಪಥ ಸಂಚಲನ ತಂಡಗಳಿಂದ ಸಚಿವರು, ಅಧಿಕಾರಿಗಳಿಗೆ ಗೌರವ ಸಮರ್ಪಣೆ ಮಾಡಲಾಯಿತು. ಸ್ವಾತಂತ್ರ್ಯ ಸಂಭ್ರಮ ಹಿನ್ನೆಲೆ ವಿದ್ಯಾರ್ಥಿಗಳಿಂದ ನಡೆಸಲಾದ ವಿವಿಧ ಬಗೆಯ ನೃತ್ಯ ಕಾರ್ಯಕ್ರಮ ಗಮನ ಸೆಳೆಯಿತು. ಜಿಲ್ಲಾಡಳಿತದಿಂದ ಆಯೋಜನೆ ಮಾಡಿರುವ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಂಸದ ಬಿ.ಎನ್ ಬಚ್ಚೇಗೌಡ, ಡಿಸಿ ಶಿವಶಂಕರ್, ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಸೇರಿದಂತೆ ಇತರರು ಭಾಗಿಯಾಗಿದ್ದರು.
ಇದನ್ನೂ ಓದಿ:77ನೇ ಸ್ವಾತಂತ್ರ್ಯ ದಿನಾಚರಣೆ: ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಬಿಗಿ ಪೊಲೀಸ್ ಭದ್ರತೆ
ಸಿದ್ದಗಂಗಾ ಮಠದಲ್ಲಿ ಗೃಹ ಸಚಿವ ಪರಮೇಶ್ವರ್ ಧ್ವಜಾರೋಹಣ: ತುಮಕೂರಿನ ಸಿದ್ದಗಂಗಾ ಮಠದಲ್ಲಿ ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ ಪರಮೇಶ್ವರ್ ಇಂದು ಧ್ವಜಾರೋಹಣ ನೆರವೇರಿಸಿದರು. ಮಠದಲ್ಲಿ ವ್ಯಾಸಂಗ ಮಾಡುತ್ತಿರುವ 10 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಏಕಕಾಲದಲ್ಲಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸಿದ್ದಗಂಗಾ ಮಠದ ಆವರಣದಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಶ್ರೀ ಸಿದ್ದಲಿಂಗ ಸ್ವಾಮೀಜಿ, ಶಾಸಕರಾದ ಜ್ಯೋತಿ ಗಣೇಶ್, ಸುರೇಶ್ ಗೌಡ, ಜಿಲ್ಲಾಧಿಕಾರಿ ಶ್ರೀನಿವಾಸ್ ಮೂರ್ತಿ ಹಾಗೂ ಜಿಲ್ಲಾ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಭಾಗಿಯಾಗಿದ್ದರು.