ಬೆಂಗಳೂರು:ಯುದ್ದಪೀಡಿತ ಉಕ್ರೇನ್ನಲ್ಲಿ 695 ವಿದ್ಯಾರ್ಥಿಗಳು ಸಿಲುಕಿದ್ದು, ಸುಮಾರು 77 ಕನ್ನಡಿಗರು ಕರುನಾಡಿಗೆ ವಾಪಸಾಗಿದ್ದಾರೆ. ಈ ಸಂಬಂಧ ನೋಡಲ್ ಅಧಿಕಾರಿ ಮನೋಜ್ ರಾಜನ್ ಮಾತನಾಡಿದ್ದು, ನವೀನ್ ಸಾವಿನ ವಿಚಾರ ಬಂದ ನಂತರ ಕಾರ್ಯಾಚರಣೆ ಚುರುಕು ಮಾಡಲಾಗಿದೆ. 413 ಜನ ವಿದ್ಯಾರ್ಥಿಗಳ ಕುಟುಂಬದ ಜೊತೆ ಮಾತನಾಡಲಾಗಿದೆ. ಆಯಾ ಜಿಲ್ಲಾವಾರು ಅಧಿಕಾರಿಗಳು ಕುಟುಂಬಗಳ ಜೊತೆ ಮಾತನಾಡುತ್ತಿದ್ದಾರೆ. ಕುಟುಂಬಗಳಿಗೆ ಧೈರ್ಯ ತುಂಬುವ ಕೆಲಸ ಆಗುತ್ತಿದೆ ಎಂದು ತಿಳಿಸಿದರು.
ಕಾಲ್ ಸೆಂಟರ್ ಪ್ರಕಾರ 695 ವಿದ್ಯಾರ್ಥಿಗಳು ಉಕ್ರೇನ್ನಲ್ಲಿ ಸಿಲುಕಿದ್ದಾರೆ. ಈವರೆಗೆ 9 ಬ್ಯಾಚ್ವರೆಗೆ ಕನ್ನಡಿಗ ವಿದ್ಯಾರ್ಥಿಗಳು ಬಂದಿದ್ದಾರೆ. ಸಂಜೆ ಆರೂವರೆ ವೇಳೆಗೆ 8 ಜನ ವಿದ್ಯಾರ್ಥಿಗಳು ಬರಲಿದ್ದಾರೆ. ಮಧ್ಯಾಹ್ನದ ವೇಳೆಗೆ 6 ಜನ ಬಂದಿದ್ದಾರೆ. ಒಟ್ಟು 23 ಜನ ವಿದ್ಯಾರ್ಥಿಗಳು ಇಂದು ಬೆಂಗಳೂರಿಗೆ ಬರುವವರಿದ್ದಾರೆ. ವಿಮಾನ ಸಂಖ್ಯೆಯನ್ನು ಹೆಚ್ಚಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಕರ್ನಾಟಕ ಸರ್ಕಾರದಿಂದ ಎರಡು ಹೆಲ್ಪ್ಡೆಸ್ಕ್ ತೆರೆದಿದ್ದೇವೆ. ಯಾವುದೇ ವಿದ್ಯಾರ್ಥಿಯ ಕುಟುಂಬದವರು ದೆಹಲಿ, ಮುಂಬೈ ಹೋಗುವ ಅವಶ್ಯಕತೆ ಇಲ್ಲ. ಬೆಂಗಳೂರಿಗೆ ಅವರನ್ನು ಕರೆತರುವ ತನಕ ನಾವು ವ್ಯವಸ್ಥೆ ಮಾಡಿದ್ದೇವೆ. ಯಾವುದೇ ಒಂದು ರೂಪಾಯಿ ಖರ್ಚು ಮಾಡುವ ಅಗತ್ಯ ಇಲ್ಲ ಎಂದು ಸ್ಪಷ್ಟಪಡಿಸಿದರು.