ಬೆಂಗಳೂರು: ನೆರೆ ಹಾನಿಯಿಂದ ಅಂದಾಜು ಸುಮಾರು 7,648.13 ಕೋಟಿ ರೂ. ನಷ್ಟವಾಗಿದ್ದು, ಎನ್ಡಿಆರ್ಎಫ್ ಮಾರ್ಗಸೂಚಿಯನ್ವಯ 1,012.50 ಕೋಟಿ ರೂ. ನಷ್ಟ ಪರಿಹಾರದ ಮನವಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಿದ್ದೇವೆ ಎಂದು ಕಂದಾಯ ಸಚಿವ ಆರ್ ಅಶೋಕ್ ತಿಳಿಸಿದರು.
ವಿಧಾನಸೌಧದಲ್ಲಿಂದು ಮಾತನಾಡಿದ ಅವರು, ಜುಲೈ 1ರಿಂದ ಆಗಸ್ಟ್ವರೆಗೆ ಮಳೆಗೆ ರಾಜ್ಯದಲ್ಲಿ 96 ಮಂದಿ ಮೃತಪಟ್ಟಿದ್ದಾರೆ. 27 ಜಿಲ್ಲೆಗಳಲ್ಲಿ 820 ಎಂಎಂ ಮಳೆ ಆಗಿದೆ. 187 ಗ್ರಾಮಗಳು ನೆರೆ ಹಾನಿಗೊಳಗಾಗಿವೆ. ಸುಮಾರು 23,794 ಮನೆಗಳು ಹಾನಿಗೀಡಾಗಿದ್ದು, ಈ ಪೈಕಿ ಸುಮಾರು 9,776 ಮನೆಗಳ ಸಂಪೂರ್ಣ ಮತ್ತು ತೀವ್ರವಾಗಿ ಹಾನಿಯಾಗಿವೆ ಎಂದರು.
ಸುಮಾರು 5,51,010 ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಬೆಳೆ ಹಾನಿ ಮತ್ತು ಸುಮಾರು 17,050 ಹೆಕ್ಟೇರ್ ಪ್ರದೇಶದಲ್ಲಿ ತೋಟಗಾರಿಕೆ ಬೆಳೆಗಳು ಹಾಗೂ ಸುಮಾರು 12,014 ಹೆಕ್ಟೇರ್ ಪ್ರದೇಶದಲ್ಲಿ ಬಹುವಾರ್ಷಿಕ ಬೆಳೆಗಳ ಹಾನಿಯಾಗಿದೆ. ಒಟ್ಟಾರೆ 5.8 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಬೆಳೆ ನಷ್ಟವಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.
ಇದನ್ನೂ ಓದಿ:ಬೆಂಗಳೂರಲ್ಲಿ ವರುಣನ ಅವಾಂತರ.. ಮನೆಗಳಿಗೆ ನುಗ್ಗಿದ ನೀರು !
ಪ್ರವಾಹ ಪರಿಸ್ಥಿತಿಯಿಂದಾಗಿ ಸುಮಾರು 22,734 ಕಿ.ಮೀ ಉದ್ದದ ರಸ್ತೆ, 1,471 ಸೇತುವೆ ಕಾಲುವೆಗಳು 199 ಸಣ್ಣ ನೀರಾವರಿ ಕೆರೆಗಳು, 6,998 ಶಾಲಾ ಕೊಠಡಿಗಳು, 236 ಪ್ರಾಥಮಿಕ ಆರೋಗ್ಯ ಕೇಂದ್ರಗಳು, 3,189 ಅಂಗನವಾಡಿ ಕೇಂದ್ರಗಳು ಹಾಗೂ ಗ್ರಾಮ ಪಂಚಾಯಿತಿಗಳ ಆಸ್ತಿಗಳಿಗೆ ಹಾನಿಯಾಗಿದೆ. ಅಲ್ಲದೇ, ಪ್ರವಾಹ ಪರಿಸ್ಥಿತಿಯಿಂದಾಗಿ ವಿದ್ಯುತ್ ಸಂಪರ್ಕಗಳಿಗೆ ಭಾರೀ ಪ್ರಮಾಣದಲ್ಲಿ ಹಾನಿಯಾಗಿದ್ದು, ಸುಮಾರು 24,052 ವಿದ್ಯುತ್ ಕಂಬಗಳು, 2,221 ಟ್ರಾನ್ಸ್ ಫಾರ್ಮರ್ಗಳು ಹಾನಿಯಾಗಿವೆ. 497 ಕಿ.ಮೀ ಉದ್ದದ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ ಎಂದು ಸಚಿವ ಅಶೋಕ್ ವಿವರಿಸಿದರು.
ಇದನ್ನೂ ಓದಿ:ವಿಜಯನಗರ ಜಿಲ್ಲೆಯಲ್ಲಿ ಭಾರಿ ಮಳೆಗೆ ಸಂಪರ್ಕ್ ಕಟ್, ಮನೆಗಳು ಜಲಾವೃತ: ಶಾಲೆಗಳಿಗೆ ರಜೆ ಘೋಷಣೆ