ಬೆಂಗಳೂರು: ಇದೇ ಬರುವ ಆಗಸ್ಟ್ 15ರ ಸ್ವಾತಂತ್ರ್ಯೋತ್ಸವನ್ನು ಸ್ವಾತಂತ್ರ್ಯ ಹೋರಾಟಗಾರರು, ಸೈನಿಕರು ಹಾಗೂ ಮುಂಚೂಣಿಯ ಕಾರ್ಯಕರ್ತರ ಜತೆ ಆಚರಿಸಲು ತೀರ್ಮಾನಿಸಿದ್ದೇವೆ ಎಂದು ಐ ಸ್ಟ್ಯಾಂಡ್ ಫಾರ್ ವಾರಿಯರ್ಸ್ ಸಂಸ್ಥಾಪಕ ಹರಿಕೃಷ್ಣ ಇಂಟೂರು ತಿಳಿಸಿದ್ದಾರೆ.
ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಬಾರಿಯ ಸ್ವಾತಂತ್ರ್ಯೋತ್ಸವವನ್ನು ಗೌರವಾನ್ವಿತ ವ್ಯಕ್ತಿಗಳ ಜತೆ ಆಚರಿಸಲು ನಾವು ತೀರ್ಮಾನಿಸಿದ್ದೇವೆ. ಈಗಾಗಲೇ 400 - 450 ಕಾಲೇಜುಗಳು ಇದರಲ್ಲಿ ಭಾಗಿಯಾಗಿವೆ. ಆಗಸ್ಟ್ 15 ರಂದು ನಾವು 75 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಿದ್ದು, ಅಂದು ಮಧ್ಯಾಹ್ನ 12 ಗಂಟೆಗೆ, ಈ ಯೋಧರಿಗೆ ಗೌರವ ಸಲ್ಲಿಸಲು ನಾವು ರಾಷ್ಟ್ರಗೀತೆ ಹಾಡುವ ಕಾರ್ಯಕ್ರಮ ರೂಪಿಸಿದ್ದೇವೆ.
ಪ್ರತಿಯೊಬ್ಬ ಭಾರತೀಯರಿಗೂ ಮನವಿ ಮಾಡುತ್ತಿರುವುದೆಂದರೆ ಅಂದು ಸರಿಯಾಗಿ 12 ಗಂಟೆಗೆ ತಾವು ಎಲ್ಲಿಯೇ ಇದ್ದರೂ ಒಮ್ಮೆ ನಿಂತು ರಾಷ್ಟ್ರಗೀತೆಯನ್ನು ಹಾಡಲು ಮನವಿ ಮಾಡುತ್ತೇವೆ. ದೇಶದ 150 ಕೋಟಿ ಮಂದಿಯು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿ ಎಂಬುದು ನಮ್ಮ ಆಶಯ. ಪ್ರತಿಯೊಬ್ಬರೂ ತಮ್ಮ ದೇಶಪ್ರೇಮವನ್ನು ಅಂದು ಈ ರೂಪದಲ್ಲಿ ವ್ಯಕ್ತಪಡಿಸಬೇಕು ಎಂದು ಮನವಿ ಮಾಡಿದರು.
ಬಳಿಕ ನಟಿ ಅದ್ವಿತಿ ಶೆಟ್ಟಿ ಮಾತನಾಡಿ, ಸೈನಿಕರು, ಸ್ವಾತಂತ್ರ್ಯ ಹೋರಾಟಗಾರರು, ಮುಂಚೂಣಿ ಕಾರ್ಯಕರ್ತರನ್ನು ಗೌರವಿಸುವುದು ಹೆಮ್ಮೆಯ ವಿಚಾರ. ಪ್ರತಿಯೊಬ್ಬರೂ ತಮ್ಮ ಒತ್ತಡದ ಜೀವನದಲ್ಲಿ ಸಾಕಷ್ಟು ವಿಚಾರಗಳನ್ನು ಮರೆತು ಬಿಡುತ್ತೇವೆ.