ಕರ್ನಾಟಕ

karnataka

ETV Bharat / state

2047ಕ್ಕೆ ಭಾರತವು ವಿಶ್ವದ ನಂಬರ್ 1 ಆರ್ಥಿಕ ದೇಶವಾಗಲಿದೆ: ರಕ್ಷಣಾ ಸಚಿವ ರಾಜನಾಥ್ ಸಿಂಗ್ ವಿಶ್ವಾಸ - indian army day 2023

ಬೆಂಗಳೂರಲ್ಲಿ 75ನೇ ಸೇನಾ ದಿನ ಆಚರಿಸಲಾಯಿತು - ಫೀಲ್ಡ್ ಮಾರ್ಷಲ್ ಕೆ ಎಂ ಕರಿಯಪ್ಪ ಸ್ವತಂತ್ರ ಭಾರತದ ಮೊದಲ ಸೇನಾ ಮುಖ್ಯಸ್ಥ - ಅಂದಿನಿಂದ ಜನವರಿ 15 ರಂದು ಸೇನಾ ದಿನ ಆಚರಣೆ - ರಕ್ಷಣಾ ವಿಷಯದಲ್ಲಿ ಜಗತ್ತಿನಲ್ಲೇ ಭಾರತೀಯ ಸೈನ್ಯ ಬಲಿಷ್ಠ - ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್ ಸಂತಸ.

75th Army Day program was held in Bangalore
ಬೆಂಗಳೂರಲ್ಲಿ 75ನೇ ಸೇನಾ ದಿನ ಕಾರ್ಯಕ್ರಮ ನಡೆಯಿತು

By

Published : Jan 15, 2023, 8:52 PM IST

ಬೆಂಗಳೂರು: ಭಾರತದ ಆರ್ಥಿಕತೆ ಅಂತರರಾಷ್ಟ್ರೀಯ ಮಟ್ಟದಲ್ಲಿ ದಿನೇ ದಿನೇ ಬೆಳೆಯುತ್ತ ಸಾಗಿದೆ. 2027ಕ್ಕೆ ಭಾರತವು ಆರ್ಥಿಕ ಸ್ಥಿತಿಯಲ್ಲಿ ವಿಶ್ವದಲ್ಲಿ 3ನೇ ಸ್ಥಾನಕ್ಕೆ ಬರಲಿದ್ದು, 2047ರಲ್ಲಿ ವಿಶ್ವದಲ್ಲಿಯೇ ಮೊದಲ ಸ್ಥಾನ ಗಳಿಸುವುದು ಖಚಿತ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್ ವಿಶ್ವಾಸ ವ್ಯಕ್ತಪಡಿಸಿದರು.

ಭಾನುವಾರ ಎ.ಎಸ್.ಸಿ ಸೆಂಟರ್ ದಕ್ಷಿಣದಲ್ಲಿ ಆಯೋಜಿಸಿದ್ದ 75ನೇ ಸೇನಾ ದಿನಾಚರಣೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು, ಜನವರಿ 15, 1949 ರಂದು, ಭಾರತೀಯ ಸೇನೆಯ ಆಜ್ಞೆ ಬ್ರಿಟಿಷ್ ಜನರಲ್ ಫ್ರಾನ್ಸಿಸ್ ಬುತ್ಚೆರ್ ಅವರಿಂದ ಫೀಲ್ಡ್ ಮಾರ್ಷಲ್ ಕೆ.ಎಂ.ಕರಿಯಪ್ಪ ಅವರ ಕೈಗೆ ಬಂದಿತು. ಇದರೊಂದಿಗೆ, ಬ್ರಿಟಿಷ್ ಪದವನ್ನು ಬ್ರಿಟಿಷ್ ಭಾರತೀಯ ಸೇನೆಯಿಂದ ಶಾಶ್ವತವಾಗಿ ತೆಗೆದುಹಾಕಲಾಯಿತು ಹಾಗೂ ಅದನ್ನು ಭಾರತೀಯ ಸೇನೆ ಎಂದು ಕರೆಯಲಾಯಿತು ಎಂದು ತಿಳಿಸಿದರು.

15 ರಂದು ಸೇನಾ ದಿನ: ಫೀಲ್ಡ್ ಮಾರ್ಷಲ್ ಕೆ ಎಂ ಕರಿಯಪ್ಪ ಅವರು ಸ್ವಾತಂತ್ರ್ಯ ಭಾರತದ ಮೊದಲ ಸೇನಾ ಮುಖ್ಯಸ್ಥರಾದರು. ಅಂದಿನಿಂದ, ಪ್ರತಿ ವರ್ಷ ಜನವರಿ 15 ರಂದು ಸೇನಾ ದಿನವೆಂದು ಆಚರಿಸಲಾಗುತ್ತದೆ. ಭಾರತೀಯ ಸೇನೆಯನ್ನು ಸ್ವಾತಂತ್ರ್ಯದವರೆಗೂ ಬ್ರಿಟಿಷ್ ಭಾರತೀಯ ಸೇನೆ ಎಂದು ಕರೆಯಲಾಗುತ್ತಿತ್ತು. ಆದರೆ ಜನವರಿ 15, 1949 ರಂದು, ಭಾರತೀಯ ಸೇನೆಯು ತನ್ನ ಮೊದಲ ಭಾರತೀಯ ಕಮಾಂಡರ್ ಇನ್ ಚೀಫ್ ಅನ್ನು ಪಡೆದುಕೊಂಡಿತು ಎಂದು ಹೇಳಿದರು.

ಯುದ್ಧ ಸಾಮಗ್ರಿ ಶಸ್ತ್ರಾಸ್ತ್ರಗಳಲ್ಲಿ ಸೈನ್ಯ ಬಲಾಢ್ಯ: ಇದೇ ಮೊದಲ ಬಾರಿಗೆ ಸೇನಾ ದಿನಾಚರಣೆಯನ್ನು ದೆಹಲಿಯಿಂದ ಹೊರಗೆ ಅಂದರೆ ಕರ್ನಾಟಕದ ಬೆಂಗಳೂರಿನಲ್ಲಿ ಆಚರಿಸಲಾಗುತ್ತಿದೆ ಎಂದ ಅವರು, ಯುದ್ಧ ಸಾಮಗ್ರಿ ಮತ್ತು ಶಸ್ತ್ರಾಸ್ತ್ರಗಳ ವಿಷಯದಲ್ಲಿ ಭಾರತೀಯ ಸೇನೆಯು ವಿಶ್ವದಲ್ಲಿ ಉನ್ನತ ಸ್ಥಾನದಲ್ಲಿದೆ. ಭಾರತೀಯ ಸೇನೆಯು ನಿಖರ ಅಗ್ನಿ ಮತ್ತು ಪೃಥ್ವಿ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಹಾಗೂ ಸ್ವದೇಶಿ ನಿರ್ಮಿತ ಯುದ್ಧ ಸಲಕರಣೆ ಸಹಿತ ಹೆಲಿಕ್ಯಾಪ್ಟರ್ ಹೊಂದಿದ್ದು, ಇದು ಶಕ್ತಿಯುತವಾಗಿದೆ. ಭಾರತೀಯ ಸೈನ್ಯವು ತನ್ನ ಶತ್ರುಗಳ ದಾಳಿಗೆ ಮಾತ್ರ ಪ್ರತಿಕ್ರಿಯಿಸುವ ವಿಶ್ವದ ಏಕೈಕ ಸೈನ್ಯವಾಗಿದೆ. ಎದುರಾಳಿ ಸೈನ್ಯವನ್ನು ಹೊಡೆದುರಿಳಿಸುವ ಸಮಗ್ರ ಶಕ್ತಿಯನ್ನು ನಮ್ಮ ಸೇನೆ ಹೊಂದಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಭಾರತದ ಸೇನೆ ಕಬ್ಬಿಣದಷ್ಟೇ ಬಲಿಷ್ಠ: ದೇಶದ ಜನರನ್ನು ರಕ್ಷಿಸಲು ಭಾರತೀಯ ಸೇನೆಯು ಎಷ್ಟು ಸಿದ್ಧವಾಗಿದೆಯೋ, ಜಗತ್ತು ಅದನ್ನು ಕಬ್ಬಿಣದಷ್ಟೇ ಬಲಿಷ್ಠ ಎಂದು ಪರಿಗಣಿಸುತ್ತದೆ. ಭಾರತೀಯ ಸೇನೆಯ ಹೆಸರು ವಿಶ್ವದ ಅತ್ಯುನ್ನತ ಸ್ಥಳದಲ್ಲಿ ಸೇತುವೆಯನ್ನು ನಿರ್ಮಿಸಿದ ದಾಖಲೆಯನ್ನು ಸಹ ಹೊಂದಿದೆ. ಬದಲಾದ ದಿನಗಳಲ್ಲಿ ನಮ್ಮ ಸೇನೆಯು ಬದಲಾವಣೆಗಳನ್ನು ಅಳವಡಿಸಿಕೊಂಡು ತನ್ನ ಶಕ್ತಿ ಸಾಮರ್ಥ್ಯವನ್ನು ತೋರಿಸುತ್ತ ಮುನ್ನಡೆಯುತ್ತಿದೆ. ಅನೇಕ ಸಮಯದಲ್ಲಿ ಯುದ್ಧ ಮಾಡುವುದಲ್ಲದೇ ಸಹಾಯವನ್ನು ಸಹ ಮಾಡುತ್ತಾ ಬಂದಿದೆ ಎಂದು ಸೇನೆಯ ಶಕ್ತಿ ಸಾಮರ್ಥ್ಯ ಶ್ಲಾಘಿಸಿದರು.

ಉಕ್ರೇನ್ ಯುದ್ಧ ನಿಲ್ಲಿಸಲು ಪ್ರಧಾನಿ ಸಫಲ: ಉಕ್ರೇನ್ ಯುದ್ಧ ಸಮಯದಲ್ಲಿ ನಮ್ಮ ದೇಶದ ಪ್ರಧಾನ ಮಂತ್ರಿಗಳು, ಉಕ್ರೇನ್ ಅಧ್ಯಕ್ಷರು, ರಷ್ಯಾ ಅಧ್ಯಕ್ಷರು ಮತ್ತು ಅಮೆರಿಕಾ ಅಧ್ಯಕ್ಷರೊಂದಿಗೆ ಮಾತುಕತೆ ನಡೆಸಿ ಸ್ವಲ್ಪ ಸಮಯದವರೆಗೆ ಯುದ್ಧ ನಿಲ್ಲಿಸುವಲ್ಲಿ ಸಫಲರಾದರು. ಇದು ಹೆಮ್ಮೆಯ ವಿಷಯವಾಗಿದೆ ಎಂದು ತಿಳಿಸಿದರು. ಸೇನೆಯು ಸಹ ಇಂದಿನ ದಿನಗಳನ್ನು ಮಾತ್ರ ಯೋಚನೆ ಮಾಡದೇ, ಮುಂದಿನ 25 ವರ್ಷಗಳ ಬಗ್ಗೆ ಯೋಚಿಸಿ, ಹೊಸ ಹೊಸ ಬದಲಾವಣೆ, ಅವಿಷ್ಕಾರ ಮಾಡಿ, ಕೆಲಸ ನಿರ್ವಹಿಸಬೇಕು. ಸಮಸ್ತ ದೇಶದ, ನಾಡಿನ ಜನರ ಯೋಗ ಕ್ಷೇಮ ರಕ್ಷಣೆಗೆ ಒತ್ತು ಕೊಡುವುದರ ಜತೆಗೆ ದೇಶವನ್ನು ರಕ್ಷಿಸಬೇಕು, ಇದಕ್ಕಾಗಿ ಎಲ್ಲ ಸಹಕಾರ ನೀಡಲು ಸಿದ್ಧರಿದ್ದೇವೆ ಎಂದು ತಿಳಿಸಿದರು.

ವಿವಿಧ ಪ್ರದರ್ಶನ:ಕಾರ್ಯಕ್ರಮದಲ್ಲಿ ಆಶ್ವಯೋಧರಿಂದ ಟೆಂಟ್ ಪೆಗ್ಗಿಂಗ್, ಬಾರು ಪ್ರದರ್ಶನ, ಅಸ್ಸೋಂ ರೆಜಿಮೆಂಟ್‍ನಿಂದ ಮಾರ್ಷಲ್ ಆರ್ಟ್ಸ್ ಪ್ರದರ್ಶನ, ಸ್ಕೈ ಡೈವ್ ಪ್ರದರ್ಶನ, ಹೆಚ್.ಎ.ಎಲ್​​ ನಿರ್ಮಾಣದ ರುದ್ರ ಹೆಲಿಕ್ಯಾಪ್ಟರ್ ಪ್ರದರ್ಶನವು ರೋಮಾಂಚನ ನೀಡಿತು. ಅಲ್ಲದೆ, ಯೋಧರಿಂದ ಮೈಕ್ರೋಲೈಟ್ ವಿಮಾನ ಹಾರಾಟ, ದಕ್ಷಿಣ ಕೊರಿಯಾದ ಮಾರ್ಷಲ್ ಆರ್ಟ್ಸ್ ಎದೆ ಝಲ್ ಎನಿಸುವಂತಿತ್ತು. 3 ರಾಷ್ಟ್ರಧ್ವಜ ಮತ್ತು ಸೇನಾ ಧ್ವಜ ಹೊತ್ತ ಪ್ಯಾರಾಚೂಟ್ ಪ್ರದರ್ಶನ, ಮೊಟಾರ್ ಸೈಕಲ್ ಪ್ರದರ್ಶನ ನಡೆಯಿತು.

ಕಾರ್ಯಕ್ರಮದಲ್ಲಿ ಲೆಪ್ಟಿನೆಂಟ್ ಜನರಲ್ ಮನೋಜ್ ಕುಮಾರ್ ಪಾಂಡೆ, ಡಿಪೆನ್ಸ್ ಸ್ಟಾಪ್ ಜನರಲ್ ಅನೀಲ್ ಚೌಹ್ಹಾಣ್, ಮೇಜರ್ ಜನರಲ್ ಎಂ.ಕೆ. ಖಾನ್, ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್, ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ಕರ್ನಾಟಕ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್, ರಕ್ಷಣಾ ಇಲಾಖೆಯ ಹಿರಿಯ ಅಧಿಕಾರಿಗಳು, ಸರ್ಕಾರದ ಹಿರಿಯ ಅಧಿಕಾರಿಗಳು, ಯೋಧರು, ನಿವೃತ್ತ ಯೋಧರು ಹಾಜರಿದ್ದರು.

ಇದನ್ನೂಓದಿ:ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಜೈಲಿನಿಂದಲೇ ಜೀವ ಬೆದರಿಕೆ ಕರೆ: ಕೈದಿಯ ಡೈರಿ ಜಪ್ತಿ, ತೀವ್ರ ವಿಚಾರಣೆ

ABOUT THE AUTHOR

...view details