ಬೆಂಗಳೂರು: ರಾಜ್ಯದಲ್ಲಿ ಈವರೆಗೆ ಒಟ್ಟು ನಾಲ್ಕು ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ನಡೆದಿದ್ದು, ಅದರಲ್ಲಿ ಮೂರು ಸಮಾವೇಶಗಳು ಬಿಜೆಪಿ ಆಳ್ವಿಕೆಯಲ್ಲಿ ನಡೆದಿವೆ. ಮೂರೂ ಹೂಡಿಕೆದಾರರ ಸಮಾವೇಶಗಳ ಆಯೋಜನೆಗೂ ಕೋಟಿ ಕೋಟಿ ಹಣವನ್ನು ವ್ಯಯ ಮಾಡಲಾಗಿದೆ.
ಆದರೆ, ಈ ಹಣವನ್ನು ಸರ್ಕಾರದ ಬೊಕ್ಕಸದಿಂದಾಗಲಿ, ಕೆಐಡಿಬಿಯಿಂದಲಾಗಲಿ ವ್ಯಯಿಸಿಲ್ಲ. ಖಾಸಗಿಯವರಿಂದಲೂ ಹೂಡಿಕೆ ಮಾಡಿಸಿಲ್ಲ. ಆದರೂ ಹೂಡಿಕೆದಾರರ ಸಮಾವೇಶಗಳು ಅದ್ದೂರಿಯಾಗಿಯೇ ನಡೆದಿವೆ. ಈ ಹಣದ ಮೂಲ ಯಾವುದು ಅನ್ನೋ ಕುರಿತ ವರದಿ ಇಲ್ಲಿದೆ.
ರಾಜ್ಯದಲ್ಲಿ ಮೊದಲ ಬಾರಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ಎನ್ನುವ ಪರಿಕಲ್ಪನೆಗೆ ನೀರೆರೆಯಲಾಯಿತು. ಪರಿಣಾಮ ಮುರುಗೇಶ್ ನಿರಾಣಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರಾಗಿದ್ದ ವೇಳೆ, 2010ರಲ್ಲಿ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶವನ್ನು ಮಾಡಲಾಯಿತು.
ಅಂದು ಸಮಾವೇಶ ಆಯೋಜನೆ ಮಾಡಲು 32.5 ಕೋಟಿ ರೂ. ಖರ್ಚು ಮಾಡಲಾಗಿತ್ತು. ನಂತರ 2012ರಲ್ಲಿ ಎರಡನೇಯ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶವನ್ನು ಮಾಡಲಾಯಿತು. ಆಗಲೂ ಮುರುಗೇಶ್ ನಿರಾಣಿಯೇ ಕೈಗಾರಿಕಾ ಸಚಿವರಾಗಿದ್ದರು. ಆ ಸಮಯದಲ್ಲಿ 33.75 ಕೋಟಿ ರೂ. ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದ ಆಯೋಜನೆಗೆ ಖರ್ಚು ಮಾಡಲಾಗಿತ್ತು.
2022 ರಲ್ಲಿ ನಾಲ್ಕನೇ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ: ನಂತರ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ 2016ರಲ್ಲಿ ಆರ್.ವಿ ದೇಶಪಾಂಡೆ ಕೈಗಾರಿಕಾ ಸಚಿವರಾಗಿದ್ದ ವೇಳೆ ಮೂರನೆಯ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ 40 ಕೋಟಿ ಹಣವನ್ನು ವ್ಯಯ ಮಾಡಲಾಗಿತ್ತು. ಅದಾಗಿ 6 ವರ್ಷಗಳ ನಂತರ 2022ರಲ್ಲಿ ನಾಲ್ಕನೇ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ನಡೆಸಲಾಗಿದ್ದು, ಈ ಬಾರಿ 75 ಕೋಟಿ ರೂ. ಸಮಾವೇಶದ ಆಯೋಜನೆಗಾಗಿ ವ್ಯಯ ಮಾಡಲಾಗಿದೆ.
ಇಷ್ಟೊಂದು ದೊಡ್ಡ ಮೊತ್ತದ ಹಣವನ್ನು ವ್ಯಯ ಮಾಡಿದ್ದರೂ ಕೂಡ ಸರ್ಕಾರದ ಬೊಕ್ಕಸದಿಂದ ಬಿಡಿಗಾಸನ್ನೂ ಇದಕ್ಕಾಗಿ ಪಡೆಯಲಾಗಿಲ್ಲ. ಕೆಐಎಡಿಬಿಯೂ ಹಣ ನೀಡಿಲ್ಲ. ಖಾಸಗಿಯವರಿಂದಲೂ ಆಯೋಜನೆಗೆ ನೆರವು ಪಡೆದಿಲ್ಲ. ಆದರೂ ಸಮಾವೇಶಗಳು ಬಹಳ ಅದ್ದೂರಿಯಾಗಿ ನಡೆದಿದ್ದು, ಲಕ್ಷ ಕೋಟಿ ರೂ. ಗಳಲ್ಲಿ ಬಂಡವಾಳ ರಾಜ್ಯಕ್ಕೆ ಹರಿದು ಬಂದಿದೆ.
ಬಡ್ಡಿ ಹಣದಲ್ಲಿ ಜಿಮ್:2010, 2012ರಲ್ಲಿ ಎರಡು ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ಮಾಡಲಾಯಿತು. ಆಗ ಕೆಐಎಡಿಬಿ ಅಥವಾ ಸರ್ಕಾರದಿಂದ ಒಂದು ರೂಪಾಯಿಯನ್ನೂ ಖರ್ಚು ಮಾಡಿಲ್ಲ. ಆ ಯೋಜನೆಗಳನ್ನು ಮಾಡುವಾಗ ಹೂಡಿಕೆದಾರರು ಭೂಮಿ ಸಲುವಾಗಿ ಹಣವನ್ನು ಕೆಐಎಡಿಬಿಯಲ್ಲಿ ಠೇವಣಿ ಇಟ್ಟಿದ್ದರು. ಆ ಹಣವನ್ನು ನಾವು ಬ್ಯಾಂಕ್ ನಲ್ಲಿ ಇಟ್ಟಿದ್ದೆವು. ಅದರಿಂದ ಬಂದಿದ್ದ ಬಡ್ಡಿ ಹಣದಲ್ಲಿ ಮೊದಲ ಎರಡು ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದ ಖರ್ಚು ನಿರ್ವಹಿಸಿದ್ದೇವೆ ಎಂದು ಸ್ವತಃ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಮಾಹಿತಿ ನೀಡಿದ್ದಾರೆ.
ಹಿಂದಿನ ಮಾದರಿಯಲ್ಲಿಯೇ ಹಣ ವ್ಯಯ: 2022 ರಲ್ಲಿಯೂ ಕೂಡ ನಾವು ಬೊಕ್ಕಸದಿಂದ ಹಣ ವ್ಯಯ ಮಾಡಿಲ್ಲ. ಹಿಂದಿನ ಮಾದರಿಯಲ್ಲಿಯೇ ಹಣ ಖರ್ಚು ಮಾಡಲಾಗಿದೆ. ಈ ಬಾರಿ 75 ಕೋಟಿ ಹಣವನ್ನು ವ್ಯಯ ಮಾಡಲಾಗಿದ್ದು. ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದಲ್ಲಿ ಅರ್ಧದಷ್ಟು ಖರ್ಚಾಗಿಲ್ಲ. ಬಹಳಷ್ಟು ದೇಶಗಳಿಗೆ ಓಡಾಟ ನಡೆಸಿದ್ದೇವೆ. ದೇಶದ ಹಲವು ಕಡೆ ರೋಡ್ ಶೋ ಮಾಡಿದ್ದೇವೆ, ಹಾಗಾಗಿ ವೆಚ್ಚ ಹೆಚ್ಚಾಗಿದೆ ಎಂದರು
2012ರಲ್ಲಿ ಉಕ್ಕು ಉದ್ಯಮದಲ್ಲಿ ಹೂಡಿಕೆ ಮಾಡಲು ಅರ್ಸೆಲ್ಲರ್ ಮಿತ್ತಲ್, ಪಾರ್ಸ್ಕೊ, ಟಾಟಾ, ಕಿರ್ಲೋಸ್ಕರ್ ಮೂರರಿಂದ ನಾಲ್ಕು ಸಾವಿರ ಎಕರೆ ಭೂಮಿ ತೆಗೆದುಕೊಳ್ಳಲು ಕೆಐಎಡಿಬಿಯಲ್ಲಿ ಹಣವನ್ನು ಹೂಡಿಕೆ ಮಾಡಿದ್ದರು. 2200 ಕೋಟಿ ಹಣವನ್ನು ನಮ್ಮಲ್ಲಿ ಹೂಡಿಕೆ ಮಾಡಿದ್ದರು. ಅದರಿಂದ ಬಂದ ಬಡ್ಡಿ ಹಣದಲ್ಲಿಯೇ ಎರಡು ಹೂಡಿಕೆದಾರರ ಸಮಾವೇಶ ಮಾಡಿದ್ದೆವು. ಕೆಐಎಡಿಬಿ ಅಥವಾ ಸರ್ಕಾರದಿಂದ ಹಣ ಪಡೆದು ವೆಚ್ಚ ಮಾಡಿಲ್ಲ. ಈ ಸಮಾವೇಶಕ್ಕೂ ಭೂಮಿ ಪಡೆಯಲು ಹೂಡಿಕೆದಾರರು ಠೇವಣಿ ಇರಿಸಿದ್ದ ಹಣದ ಬಡ್ಡಿಯಿಂದ ಬಂದ ಹಣವನ್ನೇ ಬಳಕೆ ಮಾಡಲಾಗಿದೆ ಹಾಗಾಗಿ ಸರ್ಕಾರಕ್ಕಾಗಲಿ, ಕೆಐಎಡಿಬಿಗಾಗಲು, ಕೈಗಾರಿಕಾ ಇಲಾಖೆಗಾಗಲಿ ಯಾವುದೇ ರೀತಿಯ ಆರ್ಥಿಕ ಹೊರೆಯಾಗಿಲ್ಲ ಎಂದು ನಿರಾಣಿ ಮಾಹಿತಿ ನೀಡಿದ್ದಾರೆ.
2022 ರಲ್ಲಿ ಹೂಡಿಕೆ ಸಮಾವೇಶದ ಖರ್ಚು ವೆಚ್ಚದ ವಿವರಗಳು:
- ಬೆಂಗಳೂರು ಅರಮನೆ ಮೈದಾನದ ಜಾಗದ ಬಾಡಿಗೆ- 1,27,44,000 ರೂ.
- ಅಂತಾರಾಷ್ಟ್ರೀಯ ಪ್ರಚಾರ ಸಭೆಗಳು- 3,27,91,178 ರೂ.
- ರಾಷ್ಟ್ರೀಯ ಪ್ರಚಾರ ಸಭೆಗಳು- 1,28,11,962 ರೂ.
- ಇನ್ವೆಸ್ಟ್ ಕರ್ನಾಟಕ ಕರ್ಟನ್ ರೈಸೆರ್- 64,38,516 ರೂ.
- ಜಾಹೀರಾತು ಮತ್ತು ಮಾಧ್ಯಮ ಪ್ರಚಾರ- 14,54,46,112 ರೂ.
- ಸಮಾವೇಶ ಮೂಲಸೌಕರ್ಯ, ಆಯೋಜನೆ ಸೇವೆ- 50,68,59,385 ರೂ.
- ಕಲೆ, ಸಾಂಸ್ಕೃತಿಕ ಕಾರ್ಯಕ್ರಮಗಳು- 34,92,311 ರೂ.
- ಊಟ ಮತ್ತು ಉಪಹಾರ ಸೇವೆಗಳು- 2,02,23,364 ರೂ.
- ಗಣ್ಯರಿಗೆ, ಸ್ಪೀಕರ್ಗಳಿಗೆ ವಾಸ್ತವ್ಯ, ಸಾರಿಗೆ ವ್ಯವಸ್ಥೆ- 64,52,869 ರೂ.
- ಸ್ಮರಣಿಕೆಗಳು, ಮುದ್ರಣ, ಲೇಖನ ಸಾಮಾಗ್ರಿ- 22,27,250 ರೂ.
- ಅಂಚೆ, ಕೊರಿಯರ್, ಆಡಿಟ್ ಫೀ- 4,72,000 ರೂ
ಒಟ್ಟು 74,99,58,947 ರೂ. ಗಳನ್ನು ಈ ಬಾರಿಯ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದ ಆಯೋಜನೆಗೆ ವಿನಿಯೋಗಿಸಲಾಗಿದೆ. ವೆಚ್ಚವಾದ ಪೂರ್ತಿ ಹಣವನ್ನು ಹೂಡಿಕೆದಾರರು ಭೂಮಿಗಾಗಿ ಹೂಡಿಕೆ ಮಾಡಿದ್ದ ಠೇವಣಿ ಹಣದ ಬಡ್ಡಿಯಲ್ಲಿಯೇ ಭರಿಸಲಾಗಿದೆ.
ಇದನ್ನೂ ಓದಿ:ರಾಜ್ಯದಲ್ಲಿ ಆರು ಹೊಸ ವಿಶ್ವವಿದ್ಯಾಲಯ ಸ್ಥಾಪನೆಗೆ ಸಂಪುಟ ಅಸ್ತು