ಕರ್ನಾಟಕ

karnataka

ETV Bharat / state

ಸ್ವಾತಂತ್ರ್ಯದ ಮಹತ್ವ, ಅರಿವನ್ನು ಕೊರೊನಾ ಜಾಗೃತಗೊಳಿಸಿದೆ: ಹೈಕೋರ್ಟ್ ಸಿಜೆ ಅಭಿಪ್ರಾಯ

ಹೈಕೋರ್ಟ್​ನಲ್ಲಿ 74ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಮುಖ್ಯ ನಾಯಮೂರ್ತಿ ಎ.ಎಸ್​.ಓಕ ಅವರು ಧ್ವಜಾರೋಹಣ ನೆರವೇರಿಸಿದರು.

AS Oka
AS Oka

By

Published : Aug 15, 2020, 7:22 PM IST

ಬೆಂಗಳೂರು:ಪ್ರಸ್ತುತ ಎದುರಾಗಿರುವ ಕೋವಿಡ್-19 ಪರಿಸ್ಥಿತಿಯು ಸಂವಿಧಾನ ನಮಗೆ ನೀಡಿರುವ ಸ್ವಾತಂತ್ರ್ಯದ ಮಹತ್ವ ಮತ್ತು ಅರಿವನ್ನು ಜಾಗೃತಗೊಳಿಸಿದೆ ಎಂದು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ಅಭಿಪ್ರಾಯಪಟ್ಟಿದ್ದಾರೆ.

ಹೈಕೋರ್ಟ್​ನಲ್ಲಿ ಆಯೋಜಿಸಿದ್ದ 74ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಓಕ ಅವರು ಕೊರೊನಾ ವೈರಸ್ ಎಂಬ ಕಣ್ಣಿಗೆ ಕಾಣದ ಶತ್ರುವಿನ ವಿರುದ್ಧ ಇಡೀ ಜಗತ್ತು ಹೋರಾಡುತ್ತಿದೆ. ಈ ಹೋರಾಟದ ಅಂಗವಾಗಿ ನಾವೆಲ್ಲವರೂ ಸ್ವಯಂ ನಿರ್ಬಂಧ ಹೇರಿಕೊಂಡಿದ್ದೇವೆ ಎಂದರು.

ನಾವೀಗ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಂಚರಿಸುವುದಕ್ಕೆ, ಮತ್ತೊಬ್ಬರನ್ನು ಭೇಟಿಯಾಗುವುದಕ್ಕೆ, ಸಭೆ ಸಮಾರಂಭವೆಂದು ಒಂದು ಕಡೆ ಸೇರುವುದಕ್ಕೆ ಸಾಧ್ಯವಾಗದಂತ ಪರಿಸ್ಥಿತಿಯಲ್ಲಿದ್ದೇವೆ. ಸಾರ್ವಜನಿಕ ಸಭೆ ಸಮಾರಂಭಗಳನ್ನು ವೆಬ್ ಸೆಮಿನಾರ್​ಗಳ ಮೂಲಕ ಆಯೋಜಿಸುತ್ತಿದ್ದೇವೆ. ಇವೆಲ್ಲವನ್ನೂ ಗಮನಿಸಿದಾಗ ಸಂವಿಧಾನ ನಮಗೆ ಕೊಟ್ಟಿರುವಂತಹ ಸ್ವಾತಂತ್ರ್ಯದ ಮಹತ್ವ ಅರ್ಥವಾಗುತ್ತದೆ ಎಂದು ಹೇಳಿದರು.

ಕೋವಿಡ್-19 ಇಡೀ ಸಮಾಜದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ರಾಜ್ಯದ ನ್ಯಾಯಾಂಗ ವ್ಯವಸ್ಥೆಯೂ ಇದರಿಂದ ಹೊರತಾಗಿಲ್ಲ. ಹೈಕೋರ್ಟ್​ನಲ್ಲಿ ಕೂಡ ಹಲವು ಸಿಬ್ಬಂದಿ ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. ಪ್ರಧಾನ ಪೀಠದಲ್ಲಿ ಕಾರ್ಯ ನಿರ್ವಹಿಸುತ್ತಿರುವ 59 ಸಿಬ್ಬಂದಿಗೆ ಕೊರೊನಾ ತಗುಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ನ್ಯಾಯಾಂಗ ಅಧಿಕಾರಿಗಳು ಹೋಮ್ ಕ್ವಾರಂಟೈನ್​​ಗೆ ಒಳಗಾಗಿದ್ದಾರೆ. ಹೈಕೋರ್ಟ್ ಕೆಲ ನ್ಯಾಯಮೂರ್ತಿಗಳು ಕೂಡ ಕ್ವಾರಂಟೈನ್​ಗೆ ಒಳಗಾಗಿದ್ದಾರೆ. ಆದರೆ, ನ್ಯಾಯಾಂಗದ ಅಧಿಕಾರಿಗಳು ಯಾವುದೇ ಆತಂಕಕ್ಕೆ ಒಳಗಾಗದೆ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಸಜ್ಜಾಗಿದ್ದಾರೆ. ರಾಜ್ಯದ ನ್ಯಾಯಾಲಯಗಳು ವ್ಯತಿರಿಕ್ತ ಸಂದರ್ಭದಲ್ಲಿಯೂ ಕಕ್ಷೀದಾರರಿಗೆ ಯಾವುದೇ ತೊಂದರೆಯಾಗದಂತೆ ಕಾರ್ಯ ನಿರ್ವಹಿಸುತ್ತಿವೆ. ಇದಕ್ಕೆ ವಕೀಲ ಸಮುದಾಯದ ಸಹಕಾರ, ನ್ಯಾಯಾಲಯಗಳ ಅಧಿಕಾರಿ ಮತ್ತು ಸಿಬ್ಬಂದಿ, ರಾಜ್ಯ ಅಡ್ವೋಕೇಟ್ ಜನರಲ್ ಕಚೇರಿ, ನ್ಯಾಯಾಲಯಗಳಲ್ಲಿರುವ ಆಸ್ಪತ್ರೆ ವೈದ್ಯರು ಸೇರಿದಂತೆ ನ್ಯಾಯಾಂಗ ವ್ಯವಸ್ಥೆಯಲ್ಲಿ ದುಡಿಯುತ್ತಿರುವ ಎಲ್ಲರ ಶ್ರಮವೂ ಅಭಿನಂದನಾರ್ಹ ಎಂದರು.

ಕೊರೊನಾದಿಂದ ನ್ಯಾಯಾಲಯಗಳಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಕೊಳ್ಳಲು ಅವಕಾಶ ದೊರೆತಿದೆ. ನಾವು ಈಗಾಗಲೇ ಇ-ಫೈಲಿಂಗ್ ಮತ್ತು ಆನ್ ಲೈನ್ ನಲ್ಲಿ ಕೋರ್ಟ್ ಶುಲ್ಕ ಪಾವತಿಸುವ ವ್ಯವಸ್ಥೆ ಜಾರಿ ಮಾಡಿದ್ದೇವೆ. ಎರಡು ಜಿಲ್ಲೆಗಳಲ್ಲಿ ಇ-ಸೇವಾ ಕೇಂದ್ರಗಳನ್ನು ಆರಂಭಿಸಿದ್ದು, ಮುಂದಿನ ದಿನಗಳಲ್ಲಿ ಸೇವೆಯನ್ನು ಮತ್ತಷ್ಟು ಜಿಲ್ಲೆಗಳಿಗೆ ವಿಸ್ತರಿಸುತ್ತೇವೆ. ಈಗಾಗಲೇ ಇ-ಲೋಕ ಅದಾಲತ್ ಗಳನ್ನು ಆರಂಭಿಸಲಾಗಿದೆ ಎಂದು ತಿಳಿಸಿದರು.

ಸದ್ಯದ ಪರಿಸ್ಥಿತಿಯಲ್ಲಿ ಮೊದಲಿನಂತೆ ಕೋರ್ಟ್ ಕಲಾಪಗಳನ್ನು ನಡೆಸಲು ಅಸಾಧ್ಯ. ಈ ಸಂದರ್ಭದಲ್ಲಿಯೂ ಕೂಡ ಕಕ್ಷೀದಾರರಿಗೆ ನ್ಯಾಯದಾನ ವಿಳಂಬವಾಗದಂತೆ ಉತ್ತಮವಾಗಿ ಕಾರ್ಯ ನಿರ್ವಹಿಸಲಾಗುತ್ತಿದೆ. ಇತಿಹಾಸ ಗಮನಿಸಿದರೆ ಮಾನವ ಇಂತಹ ಅನೇಕ ಸಾಂಕ್ರಾಮಿಕ ರೋಗಗಳನ್ನು ಯಶಸ್ವಿಯಾಗಿ ಎದುರಿಸಿದ್ದಾನೆ. ಅತಿ ಶೀಘ್ರದಲ್ಲಿ ಕೊರೊನಾ ಎಂಬ ಕಣ್ಣಿಗೆ ಕಾಣದ ವೈರಿಯನ್ನು ಸೋಲಿಸಲಿದ್ದೇವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ABOUT THE AUTHOR

...view details