ಬೆಂಗಳೂರು: ನಗರದಲ್ಲಿ ಅಪರಾಧ ಕೃತ್ಯಗಳಿಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರದ ಸೇಫ್ ಸಿಟಿ ಯೋಜನೆಯಡಿ ಸಿಸಿ ಕ್ಯಾಮೆರಾ ಅಳವಡಿಸಲು ಹನಿವೆಲ್ ಆಟೊಮೇಷನ್ ಇಂಡಿಯಾ ಕಂಪನಿಯು ಟೆಂಡರ್ ಪಡೆದಿದ್ದು, ರಾಜಧಾನಿಯ 3 ಸಾವಿರ ಸ್ಥಳದಲ್ಲಿ 7 ಸಾವಿರ ಕ್ಯಾಮೆರಾ ಅಳವಡಿಸಲು ಮುಂದಾಗಿದೆ.
ಕೇಂದ್ರ ಗೃಹ ಇಲಾಖೆ ಬೆಂಗಳೂರು ಸೇರಿದಂತೆ 8 ನಗರಗಳು ಸೇಫ್ ಸಿಟಿ ಯೋಜನೆಗೆ ಈಗಾಗಲೇ ಆಯ್ಕೆಯಾಗಿದ್ದು, ಈ ನಿಟ್ಟಿನಲ್ಲಿ ಕಳೆದ ತಿಂಗಳಷ್ಟೇ ಹನಿವೆಲ್ ಆಟೊಮೇಷನ್ ಇಂಡಿಯಾ ಕಂಪನಿ ಬಿಡ್ಡಿಂಗ್ನಲ್ಲಿ ಭಾಗಿಯಾಗಿ ನಗರದಲ್ಲಿ 7 ಸಾವಿರ ಕ್ಯಾಮೆರಾ ಅಳವಡಿಸಲು ಜವಾಬ್ದಾರಿ ವಹಿಸಿಕೊಂಡಿದೆ.
ಬೆಂಗಳೂರಿನಲ್ಲಿ ಕಳ್ಳತನ, ಸರಗಳ್ಳತನ, ದರೋಡೆ, ಸುಲಿಗೆ, ಮಹಿಳೆಯರ ಮೇಲೆ ಹಲ್ಲೆ, ದೌರ್ಜನ್ಯ ಸೇರಿದಂತೆ ವಿವಿಧ ಮಾದರಿಯ ಅಪರಾಧ ಪ್ರಕರಣಗಳು ದಾಖಲಾಗುತ್ತಿದ್ದು, ಅಪರಾಧ ನಿಯಂತ್ರಣಕ್ಕೆ ಪೊಲೀಸ್ ಗಸ್ತು, ನಿರಂತರ ಹೊಯ್ಸಳ ರೌಂಡ್ಸ್ ಹಲವು ಮುಂಜಾಗ್ರತ ಕ್ರಮ ಕೈಗೊಂಡರೂ ಸಂಪೂರ್ಣವಾಗಿ ತಹಬದಿಗೆ ಬರುತ್ತಿಲ್ಲ. ಹೀಗಾಗಿ ಸಿಸಿ ಕ್ಯಾಮೆರಾ ಅಳವಡಿಕೆಗೆ ಮುಂದಾಗಿದೆ.
3 ಸಾವಿರ ಜಾಗಗಳಲ್ಲಿ 7 ಸಾವಿರ ಕ್ಯಾಮೆರಾ ಅಳವಡಿಕೆ
ಸೇಫ್ ಸಿಟಿ ಪ್ರಾಜೆಕ್ಟ್ನಡಿ ಎಲ್ಲೆಲ್ಲಿ ಸಿಸಿ ಕ್ಯಾಮೆರಾ ಅಳವಡಿಸುವುದರ ಬಗ್ಗೆ ನಗರ ಪೊಲೀಸರು ನೀಲನಕ್ಷೆ ರೂಪಿಸಿದ್ದಾರೆ. ಅಲ್ಲದೇ ಎದುರಾಗುವ ಸಾಧಕ - ಭಾದಕಗಳ ಬಗ್ಗೆ ಅಧ್ಯಯನ ನಡೆಸಿದ್ದಾರೆ. 497 ಕೋಟಿ ರೂ. ಮೊತ್ತದ ಟೆಂಡರ್ ಪಡೆದಿರುವ ಕಂಪನಿ ಈಗಾಗಲೇ ಪ್ರಾಯೋಗಿಕವಾಗಿ ಸಿಸಿ ಕ್ಯಾಮೆರಾ ಅಳವಡಿಕೆ ನಡೆಸಿದೆ. ಜೂನ್ನಿಂದ ಹಂತ ಹಂತವಾಗಿ ಕ್ಯಾಮೆರಾ ಅಳವಡಿಸಲು ಕಂಪನಿ ಸಿದ್ಧತೆ ನಡೆಸಿದ್ದು, 2023ರ ಒಳಗೆ 3 ಸಾವಿರ ಸ್ಥಳದಲ್ಲಿ ಕ್ಯಾಮೆರಾ ಅಳವಡಿಕೆಗೆ ಡೆಡ್ಲೈನ್ ಇಟ್ಟುಕೊಂಡಿದೆ.