ಬೆಂಗಳೂರು: ರಾಜಧಾನಿಯಲ್ಲಿ ಅಕ್ರಮವಾಗಿ ಬಂದು ನೆಲೆಯೂರಿರುವ 681 ವಿದೇಶಿಯರು ನಾಪತ್ತೆಯಾಗಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಮಾಹಿತಿ ನೀಡಿದ್ದಾರೆ.
ಇದುವರೆಗಿನ ಮಾಹಿತಿ ಪ್ರಕಾರ, 681 ಜನ ವಿದೇಶಿ ಪ್ರಜೆಗಳು ನಾಪತ್ತೆಯಾಗಿದ್ದಾರೆ. ಅಂತಹವರನ್ನ ಪತ್ತೆ ಹಚ್ಚಿ ವಾಪಸ್ ಕಳುಹಿಸುವ ಕೆಲಸ ಮಾಡಲಾಗುವುದು. ಪ್ರಾದೇಶಿಕ ವಿದೇಶಿ ನೋಂದಣಿ ಕೇಂದ್ರ (ಎಫ್ ಆರ್ ಆರ್ ಒ) ಮೂಲಕ ಮಾಹಿತಿ ಪಡೆದು ಪತ್ತೆ ಮಾಡಲಾಗುವುದು ಎಂದರು.
ವಿದ್ಯಾಭಾಸ ಸೋಗಿನಲ್ಲಿ ಬೆಂಗಳೂರಿಗೆ ಬರುವ ವಿದೇಶಿ ವಿದ್ಯಾರ್ಥಿಗಳು ಒಂದು ಕಡೆ ನೆಲೆಸಿ, ವೀಸಾ, ಪಾಸ್ ಪೋರ್ಟ್ ಅವಧಿ ಮುಗಿದ ನಂತರ ಬೇರೆ ವಿಳಾಸಕ್ಕೆ ಶಿಫ್ಟ್ ಆಗುತ್ತಾರೆ. ಅವರ ವಿಳಾಸ ಪತ್ತೆ ಹಚ್ಚಿ ಕಾನೂನುಬಾಹಿರವಾಗಿ ನೆಲೆಯೂರಿರುವ ವಿದೇಶಿಯರನ್ನು ಪತ್ತೆ ಮಾಡಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಜೆ.ಸಿ ನಗರ ಪೊಲೀಸ್ ಠಾಣೆಯಲ್ಲಿ ವಿದೇಶಿ ಪ್ರಜೆ ಸಾವು ಪ್ರಕರಣ ಸಂಬಂಧ ಈಗಾಗಲೇ ಐದು ಆರೋಪಿಗಳನ್ನ ಬಂಧಿಸಲಾಗಿದೆ. ಘಟನೆ ಸಂಬಂಧ ಕಾಂಗೋ ರಾಯಭಾರಿ ಕಚೇರಿ ಅಧಿಕಾರಿಗಳು ಭೇಟಿಯಾಗಿದ್ದಾರೆ.
ಆರೋಪಿಗಳ ಬಂಧನ ಆಗಬೇಕಿದೆ:ನಮ್ಮ ತನಿಖೆ ಬಗ್ಗೆ ಕಾಂಗೋ ಆಧಿಕಾರಿಗಳು ಸಂಪೂರ್ಣವಾಗಿ ತೃಪ್ತಿ ಹೊಂದಿದ್ದಾರೆ. ಬೆಂಗಳೂರು ಪೊಲೀಸರು ಉತ್ತಮ ತನಿಖೆ ನಡೆಸಿದ್ದಾರೆ ಎಂದು ಮೆಚ್ಚುಗೆ ಸೂಚಿಸಿದ್ದಾರೆ. ಪ್ರಕರಣದಲ್ಲಿ ಇನ್ನೂ ಕೆಲ ಆರೋಪಿಗಳ ಬಂಧನ ಆಗಬೇಕಿದೆ ಎಂದರು.
ಜೆಸಿ ನಗರ ಪೊಲೀಸರ ವಶದಲ್ಲಿದ್ದ ಯುವಕ ಎದೆನೋವಿನಿಂದ ಸಾವನ್ನಪ್ಪಿದ್ದಾನೆ. ಮೃತಪಟ್ಟಿರುವ ಯುವಕ ವೈಟ್ ಫೀಲ್ಡ್ ನಲ್ಲಿ ವಾಸವಾಗಿದ್ದ. ದಾಖಲೆ ಪರಿಶೀಲನೆ ನಡೆಸಿದಾಗ 2015ರಲ್ಲಿ ಎಫ್ಆರ್ಆರ್ಒ ಮೂಲಕ ರಿಜಿಸ್ಟರ್ ಆಗಿದ್ದ. ಅವರ ದಾಖಲೆಗಳ ಅವಧಿ ಮುಗಿದ ನಂತರ ಬೇರೆ ಕಡೆ ಹೋಗಿದ್ದಾರೆ. ನಮ್ಮ ಪೊಲೀಸರು ಹುಡುಕಾಟ ನಡೆಸಿದ್ದರು.
ಇತ್ತೀಚೆಗೆ ಡ್ರಗ್ಸ್ ಪ್ರಕರಣದಲ್ಲಿ ಭಾಗಿಯಾದ ಹಿನ್ನೆಲೆಯಲ್ಲಿ ಜೆ.ಸಿ ನಗರ ಪೊಲೀಸರು ಬಂಧಿಸಿ ವೈದ್ಯಕೀಯ ಪರೀಕ್ಷೆಗೆ ಹೋದಾಗ ಎದೆನೋವಿನಿಂದ ಸಾವನ್ನಪ್ಪಿದ್ದ ಎಂದು ತಿಳಿಸಿದ್ದಾರೆ.
ವೇಶ್ಯಾವಾಟಿಕೆ ದಂಧೆ:ಅಕ್ರಮವಾಗಿ ನೆಲೆಸಿರುವ ಬಹುತೇಕ ವಿದೇಶಿ ಪ್ರಜೆಗಳು ಅಪರಾಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಕೆಲವರು ಸೈಬರ್ ಕ್ರೈಂ, ಮಾದಕ ವಸ್ತು ಮಾರಾಟ, ವೇಶ್ಯಾವಾಟಿಕೆ ದಂಧೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದರು.
ಬೆಂಗಳೂರಿನಲ್ಲಿ ಅಂದಾಜು 7-8 ಸಾವಿರ ಮಂದಿ ವಿದೇಶಿ ಪ್ರಜೆಗಳಿದ್ದು, ಈ ಪೈಕಿ ನೈಜಿರಿಯಾ, ಕಾಂಗೋ ದೇಶದ ಪ್ರಜೆಗಳೇ ಅಧಿಕವಾಗಿದ್ದಾರೆ ಎಂಬ ಮಾಹಿತಿಯಿದೆ. ಈ ಪೈಕಿ ಬೆಂಗಳೂರಿನಲ್ಲಿ ನೆಲೆಸಿರುವ 681 ಮಂದಿ ಯಾವುದೇ ವೀಸಾ, ಪಾಸ್‌ಪೋರ್ಟ್ ಹೊಂದಿಲ್ಲದೆ ಅಕ್ರಮವಾಗಿ ನೆಲೆಸಿದ್ದಾರೆ.
ಗಡಿಪಾರು ಮಾಡುವ ಪ್ರಕ್ರಿಯೆ ಚಾಲನೆ: ನಗರದಲ್ಲಿ ಮೇ ತಿಂಗಳಲ್ಲಿ 705 ಮಂದಿ ಅಕ್ರಮವಾಗಿ ನೆಲೆಸಿದ್ದರು. ಮೇ ಮತ್ತು ಜೂನ್‌ನಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿದಾಗ ಆ ಪೈಕಿ 27 ಮಂದಿ ಅಕ್ರಮವಾಗಿ ವಾಸವಾಗಿರುವ ಮಾಹಿತಿ ಸಿಕ್ಕಿದೆ. ಅವರನ್ನ ಗಡಿಪಾರು ಮಾಡುವ ಪ್ರಕ್ರಿಯೆ ಚಾಲನೆಯಲ್ಲಿದೆ. ಜೂನ್ ಅಂತ್ಯಕ್ಕೆ ನಗರದಲ್ಲಿ 63 ಮಂದಿ ವಿದೇಶಿ ಪ್ರಜೆಗಳ ವಿರುದ್ಧ ಅಪರಾಧ ಪ್ರಕರಣಗಳು ದಾಖಲಾಗಿವೆ ಎಂದು ಮೂಲಗಳು ತಿಳಿಸಿವೆ.
ಓದಿ:ಜಮೀರ್ ಮನೆ ಮೇಲೆ ಇಡಿ ದಾಳಿಗೆ ಕಾರಣ... ರೈಡ್ ಮುಕ್ತಾಯಗೊಂಡರೂ ಹೊರಬಾರದ ಶಾಸಕ