ಬೆಂಗಳೂರು: ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ-2022ರ ಭಾಗವಾಗಿ ಬಿಬಿಎಂಪಿ ಕರಡು ಮತದಾರರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪ್ರಕಾರ ನಗರದಲ್ಲಿ ಒಟ್ಟು 94,39,416 ಮತದಾರರಿದ್ದಾರೆ.
ಕಳೆದ ಸಾಲಿನ ಅಂತಿಮ ಪಟ್ಟಿ ಬಿಡುಗಡೆಯಾದ ದಿನಾಂಕ 01.01.2021ಕ್ಕೆ ಒಟ್ಟು ಮತದಾರರ ಸಂಖ್ಯೆ 93,76,004 ಇದ್ದು, ದಿನಾಂಕ, 08.11.2021ಕ್ಕೆ ಒಟ್ಟು ಮತದಾರರ ಸಂಖ್ಯೆ 94,39,416 ಆಗಿತ್ತು. ದಿನಾಂಕ, 01.01.2021ರ ನಂತರ 63,612 ಮಂದಿ ನೋಂದಣಿಯಾಗಿದ್ದು, ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಜನವರಿ 13, 2022 ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗುತ್ತದೆ.
ಮತರದಾರರ ವಿವರ:
ಪುರುಷ ಮತದಾರರ ಸಂಖ್ಯೆ: 49,09,042
ಮಹಿಳಾ ಮತದಾರರ ಸಂಖ್ಯೆ:45,28,728
ಇತರೆ(ತೃತೀಯ ಲಿಂಗ) ಮತದಾರರ ಸಂಖ್ಯೆ: 1,646
ಒಟ್ಟು -94,39,416
ಕರಡು ಪ್ರತಿಯನ್ನು ಪಾಲಿಕೆಯ ಎಲ್ಲಾ 28 ವಿಧಾನಸಭಾ ಕ್ಷೇತ್ರಗಳ ಮತದಾರರ ನೋಂದಣಾಧಿಕಾರಿಗಳ ಕಛೇರಿ, ಸಹಾಯಕ ಮತದಾರರ ನೋಂದಣಾಧಿಕಾರಿಗಳ ಕಛೇರಿ ಹಾಗೂ ವಾರ್ಡ್ ಕಛೇರಿಗಳಲ್ಲಿ ಪ್ರಕಟಿಸಲಾಗಿದ್ದು, ಸಾರ್ವಜನಿಕರಿಗೆ ಮತದಾರರ ಪಟ್ಟಿಯನ್ನು ಪರಿಶೀಲಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ಮುಖ್ಯ ಆಯುಕ್ತರು ತಿಳಿಸಿದ್ದಾರೆ.
ರಾಜಕೀಯ ಪಕ್ಷದ ಪ್ರತಿನಿಧಿಗಳು, ನಾಗರಿಕರು ಪರಿಷ್ಕೃತ ಮತದಾರರ ಕರಡು ಪ್ರತಿಯನ್ನು ಪರಿಶೀಲಿಸಿ ಏನಾದರು ತಿದ್ದುಪಡಿ ಅಥವಾ ಬದಲಾವಣೆ ಇದ್ದರೆ, ಸೇರ್ಪಡೆ ಮಾಡುವುದಿದ್ದರೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
ಕರಡು ಮತದಾರರ ಪಟ್ಟಿಯಲ್ಲಿ ಹೆಸರು ಬಿಟ್ಟುಹೋಗಿದ್ದಲ್ಲಿ, ತಪ್ಪಾಗಿದ್ದಲ್ಲಿ, ತಪ್ಪಾಗಿ ಸೇರ್ಪಡೆಗೊಂಡಿದ್ದಲ್ಲಿ ಹಾಗೂ ಒಂದು ಭಾಗ ಸಂಖ್ಯೆಯಿಂದ ಮತ್ತೊಂದು ಭಾಗದ ಸಂಖ್ಯೆಗೆ ವರ್ಗಾವಣೆಯಾಗಬೇಕಿದ್ದಲ್ಲಿ ಮತ್ತು ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆದುಹಾಕಲು ಮತದಾರರು, ಮತದಾರರ ನೋಂದಣಾಧಿಕಾರಿಗಳ ಕಛೇರಿ, ಸಹಾಯಕ ನೋಂದಣಾಧಿಕಾರಿಗಳ ಕಛೇರಿ, ವಾರ್ಡ್ ಕಛೇರಿ ಹಾಗೂ ಬಿ.ಎಲ್.ಓ ರವರುಗಳಿಗೆ ನಮೂನೆ-6, 7, 8 ಮತ್ತು 8ಎ ರಲ್ಲಿ ತಮ್ಮ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ಭಾರತ ಚುನಾವಣಾ ಆಯೋಗವು ದಿನಾಂಕ: 08.11.2021 ರಿಂದ 08.12.2021 ರವರಗೆ ಅವಕಾಶವನ್ನು ಕಲ್ಪಿಸಿದೆ.
ಪರಿಷ್ಕೃತ ಕರಡು ಮತದಾರರ ಪಟ್ಟಿಯನ್ನು www.ceokarnataka.kar.nic.in website ಮತ್ತು ಬಿಬಿಎಂಪಿ www.bbmp.gov.in website ನಲ್ಲಿ ಪರಿಶೀಲಿಸಬಹುದು.
ಮತದಾರರು ತಮ್ಮ ಮೊಬೈಲ್‌ನಲ್ಲಿ VHA(Voter Helpline App) ಆ್ಯಪ್ ಅಥವಾ NVSP (National Voters Service Portal) website ಮೂಲಕ ಖುದ್ದಾಗಿ ಮತದಾರರ ಮಾಹಿತಿಯನ್ನು ಖಾತರಿಪಡಿಸಿಕೊಳ್ಳಬಹುದು. ಮತದಾರರಿಗಾಗಿ ವಿಶೇಷ ನೋಂದಣಿ ಅಭಿಯಾನವನ್ನು ನವೆಂಬರ್ ತಿಂಗಳ 4 ಭಾನುವಾರ ಏರ್ಪಡಿಸಲಾಗಿದೆ.