ಬೆಂಗಳೂರು: ಸ್ವಾತಂತ್ರೋತ್ಸವದ ನಿಮಿತ್ತ ಕಾಂಗ್ರೆಸ್ ಆಯೋಜಿಸಿರುವ ಪಾದಯಾತ್ರೆಗೆ ಈಗಾಗಲೇ 62,394 ಜನರು ಆನ್ಲೈನ್ ನಲ್ಲಿ ನೋಂದಣಿ ಮಾಡಿಸಿಕೊಂಡಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದರು. ಕೆಪಿಸಿಸಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ದಿನಕ್ಕೆ 10 ಸಾವಿರ ಮಂದಿ ನೋಂದಣಿ ಮಾಡಿಕೊಳ್ಳುತ್ತಿದ್ದಾರೆ. ನೋಂದಣಿ ಮಾಡಿಕೊಂಡವರನ್ನು ದೂರವಾಣಿ ಮೂಲಕ ಸಂಪರ್ಕಿಸುತ್ತಿದ್ದೇವೆ. ಅವರಿಗೆ ಕಿಟ್, ರಾಷ್ಟ್ರಧ್ವಜ, ಟೀ ಶರ್ಟ್ ನೀಡುವ ಪ್ರಯತ್ನ ಮಾಡುತ್ತಿದ್ದೇವೆ ಎಂದರು.
ಆ.10ರವರೆಗೆ ನೋಂದಣಿ ಮಾಡಿಕೊಂಡಿದ್ದ 42 ಸಾವಿರ ಜನರ ಪೈಕಿ 32 ಸಾವಿರ ಜನ 35 ವರ್ಷಕ್ಕಿಂತ ಕಡಿಮೆ ವಯೋಮಾನದವರು. ಯುವ ಜನರಿಗೆ ಈ ವಿಚಾರ ಮುಟ್ಟಬೇಕು ಎಂಬುದು ನಮ್ಮ ಆಶಯವಾಗಿದ್ದು, ನೋಂದಣಿ ಮಾಡಿಕೊಂಡವರ ಪೈಕಿ ಶೇ.75ರಷ್ಟು ಮಂದಿ ಅವರೇ ಆಗಿದ್ದಾರೆ.
ವಾಹನ ದಟ್ಟಣೆ ತಡೆಯಲು ಮೆಟ್ರೋ ರೈಲು ಟಿಕೆಟ್ ಖರೀದಿ ಮಾಡಲಾಗಿದೆ. ಟಿಕೆಟ್ ದರ ವಿನಾಯಿತಿ ನೀಡುವಂತೆ ಮೆಟ್ರೋ ರೈಲು ಆಡಳಿತ ಮಂಡಳಿ ಹಾಗೂ ಸಿಎಂಗೆ ಪತ್ರ ಬರೆದಿದ್ದೆ. ನಮಗೆ ಇಲ್ಲಿ ರಾಜಕಾರಣ ಮುಖ್ಯವಲ್ಲ. ಪಾದಯಾತ್ರೆಯಲ್ಲೂ ರಾಜಕೀಯ ಭಾಷಣ ಇರುವುದಿಲ್ಲ. ಯಾರನ್ನೂ ದೂಷಿಸುವುದಿಲ್ಲ. ದೇಶದ ಇತಿಹಾಸ ಸ್ಮರಣೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸುತ್ತಿದ್ದೇವೆ.
ರಾಮಲಿಂಗಾರೆಡ್ಡಿ ಅವರ ತಂಡ 45-50 ಮಳಿಗೆ ಹಾಕಿ, ತಿಂಡಿ ನೀರು ವ್ಯವಸ್ಥೆ ಮಾಡಲಿದೆ. ಸೇವಾದಳದ 1 ಸಾವಿರ ಸದಸ್ಯರನ್ನು ಒಂದೊಮ್ಮೆ ರಸ್ತೆಯಲ್ಲಿ ರಾಷ್ಟ್ರಧ್ವಜ ಬಿದ್ದಿದ್ದರೆ ಅದನ್ನು ಗೌರವಯುವತಾಗಿ ಎತ್ತಿಕೊಳ್ಳಲು ನೇಮಿಸಲಾಗಿದೆ. ಸರ್ಕಾರ ರಾಷ್ಟ್ರಧ್ವಜ ಖರೀದಿಗೆ ದರ ನಿಗದಿ ಮಾಡಿದೆ. ನಾನು ಅದನ್ನು ಪ್ರಶ್ನಿಸುವುದಿಲ್ಲ. ನಾವು ನೀಡುವ ರಾಷ್ಟ್ರಧ್ವಜಕ್ಕೆ ಹಣ ಪಡೆಯುವುದಿಲ್ಲ. ಇದು ದೇಶಕ್ಕೆ ಗೌರವ ನೀಡುವ ವಿಚಾರವಾಗಿದ್ದು, ಇದನ್ನು ವ್ಯಾಪಾರ ಮಾಡಬಾರದು ಎಂದು ಹೇಳಿದರು.