ಬೆಂಗಳೂರು:ಫೆ.28ರೊಳಗೆ ಅಂಗಡಿ-ಮುಂಗಟ್ಟುಗಳ ನಾಮಫಲಕಗಳಲ್ಲಿ ಕಡ್ಡಾಯವಾಗಿ 60%ರಷ್ಟು ಕನ್ನಡ ಭಾಷೆ ಬಳಕೆ ಮಾಡುವಂತೆ ಸೂಚನೆ ನೀಡಲಾಗಿದೆ. ಈ ಸಂಬಂಧ ಕಾಯ್ದೆಗೆ ತಿದ್ದುಪಡಿ ತಂದು ಸುಗ್ರೀವಾಜ್ಞೆ ಹೊರಡಿಸಲು ನಿರ್ಧರಿಸಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಗೃಹ ಕಚೇರಿ ಕೃಷ್ಣಾದಲ್ಲಿ ಇಂದು ಅಂಗಡಿ-ಮುಂಗಟ್ಟುಗಳ ಮುಂಭಾಗ ಕನ್ನಡ ನಾಮಫಲಕ ಅಳವಡಿಸುವ ಸಂಬಂಧ ಉನ್ನತ ಮಟ್ಟದ ಸಭೆ ನಡೆಸಿ ಬಳಿಕ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಹಿಂದಿನ ಬಿಜೆಪಿ ಸರ್ಕಾರ 10.03.23ರಂದು ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಅಧಿನಿಯಮ 2023ರಲ್ಲಿ ಕಾಯ್ದೆ ರೂಪಿಸಿತ್ತು. ಈ ಕಾಯ್ದೆಗೆ ರಾಜ್ಯಪಾಲರು ಕೂಡ ಅಂಕಿತ ಹಾಕಿದ್ದಾರೆ. ಆದರೆ ರೂಲ್ ಫ್ರೇಮ್ ಆಗಿರಲಿಲ್ಲ. ಅದರಂತೆ ಸೆಕ್ಷನ್ 17(6)ರಂತೆ ಸರ್ಕಾರದ ಅಥವಾ ಸ್ಥಳೀಯ ಪದಾಧಿಕಾರಿಗಳ ಅನುಮೋದನೆಯೊಂದಿಗೆ ವಾಣಿಜ್ಯ, ಕೈಗಾರಿಕೆ, ಅಂಗಡಿ, ಸಮಾಲೋಚನಾ ಕೇಂದ್ರಗಳು, ಹೊಟೇಲ್‌ಗಳು ಹೆಸರುಗಳನ್ನು ಪ್ರದರ್ಶಿಸುವ ಬೋರ್ಡ್‌ನ ಅರ್ಧ ಭಾಗ ಕನ್ನಡದಲ್ಲಿ ಇರಬೇಕು ಎಂದಿದೆ. ಈ ಕಾಯ್ದೆಯಲ್ಲಿ 50:50ರ ಅನುಪಾತದಲ್ಲಿ ಕನ್ನಡ, ಆಂಗ್ಲ ಭಾಷೆ ಬಳಕೆಯ ನಿಯಮವಿದೆ ಎಂದು ವಿವರಿಸಿದರು.
ಈ ಹಿಂದೆ ನಮ್ಮ ಸರ್ಕಾರ ಇದ್ದಾಗ 60:40 ಅನುಪಾತದಲ್ಲಿ ಕನ್ನಡ, ಆಂಗ್ಲ ಭಾಷೆ ಬಳಕೆ ಮಾಡುವ ಬಗ್ಗೆ ನಿಯಮ ಇತ್ತು. 24.03.2018ರಲ್ಲಿ ಈ ಸಂಬಂಧ ನಾವು ಸುತ್ತೋಲೆ ಹೊರಡಿಸಿ, ನಾಮಫಲಕದ 60%ರಷ್ಟು ಭಾಗದಲ್ಲಿ ಕನ್ನಡ ಬಳಸಲು ಹೇಳಲಾಗಿತ್ತು. ಆದರೆ ಹೊಸ ಕಾಯ್ದೆಯಲ್ಲಿ 50:50 ಕನ್ನಡ, ಆಂಗ್ಲ ಬಳಕೆ ಮಾಡುವ ನಿಯಮ ಇತ್ತು. ಈಗ 50:50 ಬದಲು 60:40 ಕನ್ನಡ, ಆಂಗ್ಲ ಭಾಷೆ ಬಳಕೆ ಮಾಡಲು ಕಾನೂನಿಗೆ ತಿದ್ದುಪಡಿ ತರಲು ಸೂಚನೆ ನೀಡಿದ್ದೇನೆ. ಈ ಹಿನ್ನೆಲೆಯಲ್ಲಿ ಸುಗ್ರೀವಾಜ್ಞೆ ಹೊರಡಿಸಲು ಸೂಚನೆ ನೀಡಿದ್ದೇನೆ ಎಂದರು.
ಫೆ.28ರೊಳಗೆ ಕಾನೂನು ಪಾಲಿಸಿ:2024ರ ಫೆ.28ರೊಳಗೆ, ಈ ತಿದ್ದುಪಡಿ ಕಾಯ್ದೆಯಂತೆ ಕಾನೂನು ಪಾಲಿಸುವಂತೆ ಸೂಚನೆ ನೀಡಿದ್ದೇನೆ ಎಂದು ಇದೇ ವೇಳೆ ತಿಳಿಸಿದರು. ಈ ಕಾಯ್ದೆಯ ನಿಯಮ 17(8)ರಲ್ಲಿ ರಾಜ್ಯದಲ್ಲಿ ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಲಾದ ಜಾಹೀರಾತು ಮತ್ತು ಸೂಚನೆಗಳನ್ನು ಪ್ರದರ್ಶಿಸುವ ಎಲ್ಲಾ ಫಲಕಗಳಲ್ಲಿ ವಿಷಯಗಳ ನಿಗದಿತ ಶೇಕಡಾವಾರು ಪ್ರಮಾಣವು ಕನ್ನಡ ಭಾಷೆಯಲ್ಲಿರಬೇಕು. ಜಾಹೀರಾತುಗಳ ವರ್ಗೀಕರಣ ಮತ್ತು ಕನ್ನಡದಲ್ಲಿ ಪ್ರದರ್ಶಿಸಬೇಕಾದ ಜಾಹೀರಾತು ವಿಷಯಗಳ ಶೇಕಡಾವಾರು ಪ್ರಮಾಣವು ರಾಜ್ಯ ಸರ್ಕಾರದಿಂದ ನಿಯಮಿಸಲಾದಂತೆ ಇರತಕ್ಕದ್ದು. ಈ ಕಾಯ್ದೆ ಇಡೀ ರಾಜ್ಯಕ್ಕೆ ಅನ್ವಯಿಸುತ್ತದೆ.
ಈ ಕಾಯ್ದೆ ಬಗ್ಗೆ ಇನ್ನೂ ಅಧಿಸೂಚನೆ ಹೊರಡಿಸಿಲ್ಲ. ನಿಯಮವೂ ರೂಪಿಸಿಲ್ಲ. ಹೀಗಾಗಿ ತಿದ್ದುಪಡಿಯೊಂದಿಗೆ ನಿಯಮ ರೂಪಿಸುವಂತೆ ಸೂಚನೆ ನೀಡಲಾಗಿದೆ. ಕಾನೂನು ಜಾರಿ ವಿಳಂಬವಾಗಿರುವುದು ನಿಜ. ಇನ್ನು ವಿಳಂಬವಾಗದಂತೆ ಸೂಚನೆ ನೀಡಿದ್ದೇನೆ. ಅಂಗಡಿ ಮುಂಗಟ್ಟುಗಳು ನಿಯಮ ಪಾಲಿಸಬೇಕು. ಇಲ್ಲವಾದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.