ಬೆಂಗಳೂರು: ಇಂದು ಆರು ಜಿಲ್ಲೆಗಳಿಗೆ ನೂತನ ಜಿಲ್ಲಾ ಉಸ್ತುವಾರಿಗಳನ್ನು ನೇಮಿಸಿ ಆದೇಶ ಹೊರಡಿಸಲಾಗಿದೆ.
ಅದರಂತೆ ಬೆಳಗಾವಿ ಜಿಲ್ಲೆಗೆ ಡಿಸಿಎಂ ಗೋವಿಂದ ಕಾರಜೋಳರನ್ನು ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಿಸಲಾಗಿದೆ. ಗೋವಿಂದ ಕಾರಜೋಳಗೆ ಈ ಮೊದಲು ಬಾಗಲಕೋಟೆ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಹೊಣೆ ನೀಡಲಾಗಿತ್ತು. ಇದೀಗ ಅವರ ಉಸ್ತುವಾರಿ ಹೊಣೆಯನ್ನು ಬದಲಾಯಿಸಿ ಬೆಳಗಾವಿ ಉಸ್ತುವಾರಿ ನೀಡಲಾಗಿದೆ. ಸಿಡಿ ಪ್ರಕರಣದಲ್ಲಿ ರಮೇಶ್ ಜಾರಕಿಹೊಳಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಿನ್ನೆಲೆ ಬೆಳಗಾವಿಗೆ ಜಿಲ್ಲಾ ಉಸ್ತುವಾರಿ ಇರಲಿಲ್ಲ.
ಆರು ಜಿಲ್ಲೆಗಳಿಗೆ ನೂತನ ಜಿಲ್ಲಾ ಉಸ್ತುವಾರಿ ಸಚಿವರ ನೇಮಿಸಿ ಆದೇಶ ಇನ್ನು ಬಾಗಲಕೋಟೆ ಜಿಲ್ಲೆಗೆ ಉಮೇಶ್ ಕತ್ತಿಯನ್ನು ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಿಸಲಾಗಿದೆ. ಸಚಿವ ಅರವಿಂದ ಲಿಂಬಾವಳಿಗೆ ಬೀದರ್ ಉಸ್ತುವಾರಿ ಹೊಣೆ ನೀಡಲಾಗಿದೆ. ಸಚಿವ ಪ್ರಭು ಚೌಹಾಣ್ಗೆ ಬೀದರ್ ಉಸ್ತುವಾರಿ ನೀಡಲಾಗಿತ್ತು. ಅವರನ್ನು ಬದಲಾಯಿಸಿ ಲಿಂಬಾವಳಿಗೆ ಬೀದರ್ ಉಸ್ತುವಾರಿ ಹೊಣೆಗಾರಿಕೆ ನೀಡಲಾಗಿದೆ. ಎಂಟಿಬಿ ನಾಗರಾಜ್ ಅವರನ್ನು ಕೋಲಾರ ಉಸ್ತುವಾರಿ ಸಚಿವರನ್ನಾಗಿ ನೇಮಿಸಲಾಗಿದೆ. ಮುರುಗೇಶ್ ನಿರಾಣಿಗೆ ಕಲಬುರಗಿ ಜಿಲ್ಲಾ ಉಸ್ತುವಾರಿ ಜವಾಬ್ದಾರಿ ನೀಡಿದ್ದರೆ, ಎಸ್.ಅಂಗಾರರಿಗೆ ಚಿಕ್ಕಮಗಳೂರು ಜಿಲ್ಲೆಯ ಉಸ್ತುವಾರಿ ಸಚಿವರನ್ನಾಗಿ ನೇಮಿಸಲಾಗಿದೆ.
ಇದನ್ನೂ ಓದಿ:ಬೆಳಗಾವಿ ಉಸ್ತುವಾರಿಯಾಗಿ ಡಿಸಿಎಂ ಗೋವಿಂದ ಕಾರಜೋಳ ನೇಮಕ
ಕೊರೊನಾ ಸೋಂಕು ಜಿಲ್ಲೆಗಳಲ್ಲಿ ಉಲ್ಬಣಗೊಳ್ಳುತ್ತಿರುವ ಹಿನ್ನೆಲೆ ಸಿಎಂ ಯಡಿಯೂರಪ್ಪ ಹೊಸ ಜಿಲ್ಲಾ ಉಸ್ತುವಾರಿ ಮಂತ್ರಿಗಳನ್ನು ನೇಮಿಸಿ ಆದೇಶ ಹೊರಡಿಸಿದ್ದಾರೆ. ಉಪ ಚುನಾವಣೆ ಫಲಿತಾಂಶದ ಬಳಿಕ ಉಸ್ತುವಾರಿ ಸಚಿವರ ಬದಲಾವಣೆ ಮಾಡಲಾಗುವುದು ಎಂದು ಸಿಎಂ ಈ ಮೊದಲು ತಿಳಿಸಿದ್ದರು.