ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಎಂಟು ವಲಯಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ 16,739 ಪೌರ ಕಾರ್ಮಿಕರಿಗೆ ಕೊರೊನಾ ಸೋಂಕು ತಪಾಸಣೆ ನಡೆಸಲಾಗಿದ್ದು, ಇವರಲ್ಲಿ 567 ಮಂದಿಗೆ ಸೋಂಕು ದೃಢಪಟ್ಟಿದೆ ಎಂದು ಪಾಲಿಕೆ ಹೈಕೋರ್ಟ್‍ಗೆ ಮಾಹಿತಿ ನೀಡಿದೆ.
ಕೊರೊನಾ ನಿಯಂತ್ರಣ ಮತ್ತು ಚಿಕಿತ್ಸೆಗೆ ಸಂಬಂಧಿಸಿದಂತೆ ಸಲ್ಲಿಸಿರುವ ಪಿಐಎಲ್ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ಹಾಗೂ ನ್ಯಾ.ಅರವಿಂದ ಕುಮಾರ್ ಅವರಿದ್ದ ವಿಭಾಗೀಯ ಪೀಠದ ಎದುರು ಪಾಲಿಕೆ ಈ ಮಾಹಿತಿ ನೀಡಿದೆ.
ಪಾಲಿಕೆ ಪರ ವಕೀಲ ವಿ. ಶ್ರೀನಿಧಿ ಲಿಖಿತ ಹೇಳಿಕೆ ಸಲ್ಲಿಸಿದ್ದು, ಎಲ್ಲ ಪೌರ ಕಾರ್ಮಿಕರಿಗೆ ಆರ್.ಎ.ಟಿ (ರ‍್ಯಾಪಿಡ್ ಆ್ಯಂಟಿಜೆನ್ ಟೆಸ್ಟ್) ತಪಾಸಣೆ ನಡೆಸಲಾಗಿದೆ. ಈವರೆಗೆ 16,739 ಪೌರ ಕಾರ್ಮಿಕರಿಗೆ ತಪಾಸಣೆ ನಡೆಸಲಾಗಿದ್ದು, ಒಟ್ಟು 567 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಪೈಕಿ ಸೋಂಕಿನ ಲಕ್ಷಣಗಳು ಇಲ್ಲದವರನ್ನು ಅವರ ಕೋರಿಕೆಯಂತೆ ಹೋಂ ಐಸೋಲೇಷನ್, ಕೋವಿಡ್ ಕೇರ್ ಸೆಂಟರ್ ಗಳಲ್ಲಿ ದಾಖಲಿಸಲಾಗಿದೆ. ಗಂಭೀರ ಸ್ವರೂಪದ ಲಕ್ಷಣಗಳಿದ್ದವರಿಗೆ ಕೋವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ತಪಾಸಣೆ ಪ್ರಕ್ರಿಯೆಯೂ ಮುಂದುವರೆದಿದೆ ಎಂದು ತಿಳಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಪೀಠ, ರೋಗ ಲಕ್ಷಣಗಳನ್ನು ಹೊಂದಿದ್ದೂ ಆರ್.ಎ.ಟಿ ತಪಾಸಣೆಯಲ್ಲಿ ನೆಗೆಟಿವ್ ವರದಿ ಬಂದರೆ ಅಂತಹವರನ್ನು ಆರೋಗ್ಯ ಇಲಾಖೆ ಸುತ್ತೋಲೆ ಪ್ರಕಾರ ಆರ್.ಟಿ.ಪಿ.ಸಿ.ಆರ್ ತಪಾಸಣೆಗೆ ಒಳಪಡಿಸಬೇಕು ಎಂದು ಸೂಚಿಸಿದೆ. ಹಾಗೆಯೇ ಬಿಬಿಎಂಪಿ ಸಲ್ಲಿಸಿರುವ ಅಂಕಿ-ಸಂಖ್ಯೆಗಳಲ್ಲಿ ಸಾಕಷ್ಟು ಗೊಂದಲಗಳಿವೆ. ಆದ್ದರಿಂದ ರೋಗ ಲಕ್ಷಣ ಇಲ್ಲದವರು, ಹಗುರ ಲಕ್ಷಣ ಹೊಂದಿದವರು ಮತ್ತು ಗಂಭೀರ ಲಕ್ಷಣ ಹೊಂದಿರುವವರ ಪ್ರತ್ಯೇಕ ವರದಿಗಳನ್ನು ನೀಡುವಂತೆ ಬಿಬಿಎಂಪಿಗೆ ಸೂಚಿಸಿದೆ. ಹಾಗೆಯೇ ಸೋಂಕಿತ ಪೌರಕಾರ್ಮಿಕರಿಗೆ ನಿಯಮಿತವಾಗಿ ವೇತನ ಪಾವತಿಸುವಂತೆಯೂ ಸೂಚಿಸಿದೆ.